ಮುಂಬಯಿ: ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) – ಅಜಯ್ ದೇವಗನ್ ಕಾಂಬಿನೇಷನ್‌ನ ಮಲ್ಟಿಸ್ಟಾರ್ಸ್ ʼಸಿಂಗಂ ಅಗೇನ್ʼ (Singham Again) ಚಿತ್ರದ ಬಹುನಿರೀಕ್ಷಿತ ಟ್ರೇಲರ್ ರಿಲೀಸ್ ಆಗಿದೆ.
ಬಾಲಿವುಡ್ ನಲ್ಲಿ ದೊಡ್ಡ ನಿರೀಕ್ಷೆಯನ್ನೇ ಹುಟ್ಟಿಸಿರುವ ʼಸಿಂಗಂ ಅಗೇನ್ʼನಲ್ಲಿ ಅಜಯ್ ದೇವಗನ್ ಮತ್ತೆ ಖಾಕಿ ತೊಟ್ಟು ಅಬ್ಬರಿಸಲಿದ್ದಾರೆ. ಈ ಬಾರಿ ಅವರ ತಂಡದಲ್ಲಿ ಮತ್ತಷ್ಟು ಸ್ಪೆಷಲಿಷ್ಟ್ ಗಳು ಸೇರಲಿದ್ದಾರೆ.
ಸಿನಿಮಾದ ಟ್ರೇಲರ್4 ನಿಮಿಷ ಮತ್ತು 58 ಸೆಕೆಂಡುಗಳಿದ್ದು, ಇದು ಹಿಂದಿ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಉದ್ದದ ಟ್ರೇಲರ್ ಆಗಿದೆ. ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ನಲ್ಲಿ ನಡೆದ ಸಮಾರಂಭದಲ್ಲಿ ಟ್ರೇಲರ್ ಲಾಂಚ್ ಮಾಡಲಾಗಿದೆ.
ಟ್ರೇಲರ್ ಹೇಗಿದೆ?: ʼಸಿಂಗಂ ಅಗೇನ್ʼ ಟ್ರೇಲರ್‌ನ್ನು ರಾಮಾಯಣದ ಹಿನ್ನೆಲೆಯಲ್ಲಿ ತೋರಿಸಲಾಗಿದೆ. ಸೀತೆಯಂತೆ ಇಲ್ಲಿ ಅವನಿ (ಕರೀನಾ ಕಪೂರ್) ಯನ್ನು ತೋರಿಸಲಾಗಿದೆ. ಅವನಿಯನ್ನು ಅಪಹರಣ ಮಾಡಿಕೊಂಡು ಇಡಲಾಗುತ್ತದೆ. ಪಕ್ಕದ ಶ್ರೀಲಂಕಾದಲ್ಲಿರುವ ರೌಡಿಯನ್ನು (ಅರ್ಜುನ್ ಕಪೂರ್) ಬಾಜಿರಾವ್ (ಅಜಯ್ ದೇವಗನ್) ರಾಮನಂತೆ ಉಳಿಸಲು ಹೋಗುವುದನ್ನು ತೋರಿಸಲಾಗಿದೆ.
ಶಕ್ತಿ ಶೆಟ್ಟಿ (ದೀಪಿಕಾ) ಯನ್ನು ʼಲೇಡಿ ಸಿಂಗಂʼ, ಎಸಿಪಿ ಸತ್ಯ (ಟೈಗರ್ ಶ್ರಾಫ್) ನನ್ನು ಲಕ್ಷ್ಮಣನಂತೆ ತೋರಿಸಲಾಗಿದೆ. ಸಿಂಬಾನಾಗಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದು, ಸೂರ್ಯವಂಶಿ ಆಗಿಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್ ಒಬ್ಬ ಮಾಸ್ ಹೀರೋನಂತೆ, ರಕ್ತಸಿಕ್ತವಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ರಾವಣನ ಅವತಾರದಲ್ಲಿ ತೋರಿಸಲಾಗಿದೆ. ಜಾಕಿ ಶ್ರಾಫ್ ಅರ್ಜುನ್ ಕಪೂರ್ ಲುಕ್ ಪರಿಚಯಿಸುತ್ತಾರೆ.
ಅವನಿಯ (ಸೀತೆ) ಅಪಹರಣ ಮಾಡಿದ ʼರಾವಣʼನ ಸಂಹಾರಕ್ಕೆ ರಾಮನ ಸೈನ್ಯ ಹೊರಡುವುದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಇದೊಂದು ಪಕ್ಕಾ ಹೈವೊಲ್ಟೇಜ್ ಆ್ಯಕ್ಷನ್ ಪ್ಯಾಕ್ ಇರುವ ಸಿನಿಮಾವೆಂದು ಟ್ರೇಲರ್‌ನಲ್ಲೇ ಗೊತ್ತಾಗುತ್ತದೆ. ಅಜಯ್ ದೇವಗನ್, ದೀಪಿಕಾ ಅವರ ಒಂದೊಂದು ಡೈಲಾಗ್ಸ್ ಹಾಗೂ ಆ್ಯಕ್ಷನ್ ದೃಶ್ಯಗಳು ಅಮೋಘವಾಗಿ ಮೂಡಿಬಂದಿದೆ.
“ನಿನ್ನ ಮುಂದೆ ನಿಂತಿರುವ ವ್ಯಕ್ತಿ ಮಹಾತ್ಮಾ ಗಾಂಧಿಯ ಆದರ್ಶವನ್ನು ಪಾಲಿಸುತ್ತಾನೆ ಆದರೆ ಪೂಜಿಸುವುದು ಛತ್ರಪತಿ ಶಿವಾಜಿಯನ್ನು” ಎನ್ನುವ ಪವರ್ ಡೈಲಾಗ್ಸ್ ಪ್ರೇಕ್ಷಕರನ್ನು ರೋಮಂಚನಗೊಳಿಸುತ್ತದೆ.
ಅಜಯ್ ದೇವಗನ್, ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ʼಬಾಜಿರಾವ್ ಸಿಂಗಂʼ ಆಗಿ ಕಂಬ್ಯಾಕ್ ಮಾಡಿದ್ದಾರೆ. ಟ್ರೇಲರ್‌ನಲ್ಲಿ ʼವೀರ್ ಸೂರ್ಯವಂಶಿʼ ಮತ್ತು ʼಸಿಂಬಾʼದ ಝಲಕ್ ತೋರಿಸಲಾಗಿದೆ.
ʼಸಿಂಗಂ ಅಗೇನ್ʼ ಸ್ವಾತಂತ್ರ್ಯ ದಿನಕ್ಕೆ ಬಿಡುಗಡೆಗೆ ಆಗಬೇಕಿತ್ತು. ಆದರೆ ಅದು ಮುಂದೂಡಲ್ಪಟ್ಟು, ದೀಪಾವಳಿಯಂದು (ನವೆಂಬರ್ 1) ಚಿತ್ರಮಂದಿರಗಳಿಗೆ ಬರಲಿದೆ. ಇದೇ ದಿನ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ಮತ್ತು ತೃಪ್ರಿ ದಿಮ್ರಿ ಸೇರಿದಂತೆ ʼಭೂಲ್ ಭುಲೈಯಾ 3ʼ(Bhool Bhulaiyaa 3) ಸಿನಿಮಾ ಕೂಡ ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್ ನಲ್ಲಿ ಪೈಪೋಟಿ ಉಂಟಾಗುವ ಸಾಧ್ಯತೆಯಿದೆ.