Advertisement

ಪೂರ್ಣಗೊಂಡ ಕುಂಭಮೇಳ: ಸುವ್ಯವಸ್ಥೆಗೆ ಹೊಸ ಮಾದರಿ

12:30 AM Mar 06, 2019 | |

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಶಿವರಾತ್ರಿಯ ಪವಿತ್ರ ಸ್ನಾನದೊಂದಿಗೆ ಮುಕ್ತಾಯಗೊಂಡ ಕುಂಭಮೇಳ ಅನೇಕ ದಾಖಲೆಗಳನ್ನು ಬರೆದದ್ದಷ್ಟೇ ಅಲ್ಲದೇ, ಮಾದರಿ ಆಯೋಜನೆಯಾಗಿ ಹೆಸರು ಗಳಿಸಿದೆ.  49 ದಿನದಲ್ಲಿ ದೇಶ-ವಿದೇಶದ 23 ಕೋಟಿ ಜನರು ಸಂಗಮ ಸ್ನಾನ ಮಾಡಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದಲ್ಲಿ ಜನರ ನಿರ್ವಹಣೆ ಮಾಡಿದ್ದಕ್ಕಾಗಿ, ಅತಿ ಹೆಚ್ಚಿನ ಪ್ರಮಾಣದ ಶೌಚಾಲಯ ನಿರ್ಮಾಣ ಮತ್ತು ಸ್ವತ್ಛತಾ ವ್ಯವಸ್ಥೆಗಾಗಿ, ಮತ್ತು ಬೃಹತ್‌ ಪೇಂಟಿಂಗ್‌ಗಳಿಂದಾಗಿ ಮೂರು ಗಿನ್ನೆಸ್‌ ದಾಖಲೆಗಳನ್ನು ಬರೆದಿದೆ ಈ ಬಾರಿಯ ಕುಂಭಮೇಳ. ಮಾರ್ಚ್‌ 4ರಂದು, 1 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದಾರೆ. 

Advertisement

ಈ ಬಾರಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಎಷ್ಟೊಂದು ಸುವ್ಯವಸ್ಥಿತವಾಗಿ/ಅಚ್ಚುಕಟ್ಟಾಗಿ ಕುಂಭಮೇಳವನ್ನು ನಿರ್ವಹಿಸಿತೆಂದರೆ 23 ಕೋಟಿ ಜನರು ಬಂದು ಹೋದರೂ ಯಾವುದೇ ಅವಗಢಗಳು ಸಂಭವಿಸಿಲ್ಲ. ಆರೋಗ್ಯದಿಂದ ಹಿಡಿದು, ಪೊಲೀಸ್‌ ಭದ್ರತೆಯವರೆಗೆ, ಸ್ವಚ್ಛ ಕುಡಿಯುವ ನೀರಿನ ಪೂರೈಕೆಯಿಂದ ಹಿಡಿದು ಶೌಚಾಲಯಗಳು, ಟೆಕ್‌ ಸೇವೆಗಳವರೆಗೆ ಪ್ರತಿಯೊಂದನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಲಾಯಿತು. ನೂರಾರು ಆರೋಗ್ಯ ಸರ್ವೇಕ್ಷಣಾ ತಂಡಗಳು,  5 ಸ್ಟಾರ್‌ ಮಾದರಿಯ ಟೆಂಟ್‌ಗಳು, 500ಕ್ಕೂ ಹೆಚ್ಚು ಶಟಲ್‌ ಬಸ್‌ಗಳು, 10 ಸಾವಿರಕ್ಕೂ ಹೆಚ್ಚು ಸ್ವತ್ಛತಾ ಕಾರ್ಯಕರ್ತರು, 800ಕ್ಕೂ ಹೆಚ್ಚು ವಿಶೇಷ ಟ್ರೇನ್‌ಗಳು…ಈ ಎಲ್ಲಾ ಸಂಗತಿಗಳೂ ಕುಂಭಮೇಳದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. 

ಇತ್ತೀಚಿನ ಕೆಲ ವರ್ಷಗಳಲ್ಲಿ ಕುಂಭಮೇಳವೆಂದರೆ ಅಶುಚಿ, ರೋಗರುಜಿನ ಎನ್ನುವಂತಾಗಿತ್ತು. ಕುಂಭಸ್ನಾನ ಮುಗಿದ ಮೇಲಂತೂ ಪ್ರಯಾಗ ಅಥವಾ ನಾಶಿಕ್‌ ಅನ್ನು ಸ್ವತ್ಛಗೊಳಿಸಲು ವರ್ಷಗಳೇ ಹಿಡಿಯುತ್ತಿದ್ದವು. ಸಾಂಕ್ರಾಮಿಕ ರೋಗಗಳಂತೂ ಬೆಂಬಿಡದೇ ಕಾಡುತ್ತಿದ್ದವು. ಆದರೆ ಈ ಬಾರಿ, ಪ್ರಯಾಗ್‌ರಾಜ್‌ ಈ ಎಲ್ಲಾ ಅಪವಾದಗಳಿಗೂ ಪ್ರತ್ಯುತ್ತರ ಕೊಟ್ಟಿದೆ. ಯಾವ ಮಟ್ಟಕ್ಕೆಂದರೆ, ಕುಂಭಮೇಳವನ್ನು ವಿಶ್ವದ ಅತಿದೊಡ್ಡ ಗದ್ದಲ/ಅವ್ಯವಸ್ಥೆ ಎಂದು ಹಂಗಿಸುತ್ತಿದ್ದ ವಿದೇಶಿ ಮಾಧ್ಯಮಗಳೂ ಕೂಡ…ಈ ಬಾರಿಯ ಆಯೋಜನೆಯ ಅಚ್ಚುಕಟ್ಟುತನವನ್ನು ಮನಸಾರೆ ಹೊಗಳುತ್ತಿವೆ. ಒಂದರ್ಥದಲ್ಲಿ ಸ್ವತ್ಛಭಾರತ ಅಭಿಯಾನದ ದೇಶದ ಮನಸ್ಥಿತಿಯಲ್ಲಿ ಮೂಡಿಸಿರುವ ಜಾಗೃತಿಯ ಮೂರ್ತರೂಪವಾಗಿತ್ತು ಈ ಬಾರಿಯ ಕುಂಭಮೇಳ. ಈ ಅಭಿಯಾನದ ಕಾರಣದಿಂದ “ಜನರಲ್ಲೂ ಸ್ವತ್ಛತೆಯ  ಪ್ರಜ್ಞೆ ಮೂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು, ಜನರು ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆಯುವುದು, ಶೌಚಕ್ಕೆ ಕೂಡುವುದು ಮಾಡಲಿಲ್ಲ’ ಎನ್ನುತ್ತಾರೆ ಆರೋಗ್ಯ ಸರ್ವೇಕ್ಷಣೆ ತಂಡದ ಅಧಿಕಾರಿಯೊಬ್ಬರು. 

ಭಾರತದ ನಾಲ್ಕು ನಗರಿಗಳಲ್ಲಿ ಕುಂಭಮೇಳ ಆಯೋಜನೆಯಾಗುತ್ತದೆ. ಪ್ರಯಾಗ್‌ರಾಜ್‌, ಹರಿದ್ವಾರ, ಉಜ್ಜೆ„ನಿ ಮತ್ತು ನಾಸಿಕ್‌ನಲ್ಲಿ. ಇವುಗಳಲ್ಲಿ ಪ್ರತಿ ಊರಿನಲ್ಲೂ ಪ್ರತಿ ಆರು ವರ್ಷಕ್ಕೊಮ್ಮೆ ಅರ್ಧಕುಂಭ ಮೇಳ ಮತ್ತು 12 ವರ್ಷಕ್ಕೊಮ್ಮೆ ಪೂರ್ಣಕುಂಭ ಮೇಳ ನಡೆಯುತ್ತದೆ. ಪ್ರಯಾಗ್‌ರಾಜ್‌ನಲ್ಲಿ ಈ ಬಾರಿ ನಡೆದದ್ದು ಅರ್ಧಕುಂಭಮೇಳ, 2025ಕ್ಕೆ ಪೂರ್ಣಕುಂಭಮೇಳ ನಡೆಯಲಿದೆ. ಪ್ರತಿ ನಗರಿಗಳಲ್ಲಿನ ಕುಂಭಮೇಳಗಳಿಗೂ ಕೋಟ್ಯಂತರ ಜನರು ಬರುತ್ತಾರೆ. ಹೀಗಾಗಿ, ಈ ಬಾರಿ ಪ್ರಯಾಗ್‌ರಾಜ್‌ನ ಆಯೋಜನೆ ಸ್ವತ್ಛತೆ, ಸುವ್ಯವಸ್ಥೆ ಮತ್ತು ಭದ್ರತೆಯ ವಿಷಯದಲ್ಲಿ ಮುಂದಿನ ಎಲ್ಲಾ ಕುಂಭಮೇಳಗಳಿಗೂ ಮಾದರಿಯಾಗುವುದರಲ್ಲಿ ಸಂಶಯವಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next