ಉಡುಪಿ: ಬಿಜೆಪಿಯ ದುರಾಡಳಿತದಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ, ಪ್ರತಿ ಕ್ಷೇತ್ರದಲ್ಲೂ ಭ್ರಷ್ಟಾಚಾರದ ಪಿಡುಗು ಜನರನ್ನು ಹಿಂಸಿಸುತ್ತಿದೆ. ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿಗರ ನಿರ್ಲಜ್ಜತನ ಅಂಕೆ ಮೀರಿದೆ. ಬಿಜೆಪಿ ಆಡಳಿತದ ಕರಾಳ ದಿನಗಳು ಕೊನೆಯಾಗಿ, ಕಾಂಗ್ರೆಸ್ ಆಡಳಿತದ ಭರವಸೆಯ ದಿನಗಳು ಸನ್ನಿಹಿತವಾಗಿದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಹೇಳಿದರು.
ಅವರು ಶೆಟ್ಟಿಬೆಟ್ಟು ವಾರ್ಡ್‌ನಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ವಾರ್ಡ್ ಹಾಗೂ ಪಂಚಾಯತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕಾದ ಆವಶ್ಯಕತೆ ಇದ್ದು ಚುನಾವಣೆಯನ್ನು ಹೇಗೆ ಗೆಲ್ಲಬಹುದೆಂಬ ಕುರಿತು ಆಲೋಚಿಸಿ ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ. ನಮ್ಮಲ್ಲಿ ಬಹಳಷ್ಟು ಮಂದಿ ಕಾರ್ಯಕರ್ತರು, ಮತದಾರರಿದ್ದಾರೆ. ಒಬ್ಬ ಕಾರ್ಯಕರ್ತ ಜವಾಬ್ದಾರಿ ಹೊತ್ತು ಇಬ್ಬರು ಮತದಾರರನ್ನು ವಿಶ್ವಾಸಕ್ಕೆ ತರುವಂತಹ ಕೆಲಸ ಮಾಡಬೇಕು ಎಂದರು.
ಪ್ರಸಾದ್ ರಂತಹ ಒಳ್ಳೆಯ ಅಭ್ಯರ್ಥಿ ಗೆಲ್ಲಿಸುವ: ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಆಡಳಿತ ನಡೆಸಿದ ಬಿಜೆಪಿ ನೀಡಿದ ಭರವಸೆಗೆ ತದ್ವಿರುದ್ದವಾಗಿ ನಡೆದಿದೆ. ಬೆಲೆ ಏರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆ. ಬಿಜೆಪಿ ಆಡಳಿತದ 5 ವರ್ಷದಲ್ಲಿ ಯಾರಾದರೂ ಒಳ್ಳೆಯದಾಗಿದ್ದರೆ ಅದು ಶಾಸಕರು, ಮಂತ್ರಿಗಳೇ ಮಾತ್ರ ಹೊರತು ಜನಸಾಮಾನ್ಯರಲ್ಲ. ಕಾರ್ಯಕರ್ತರು ಮುಂದಿನ 20 ದಿವಸ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿದರೆ ಮುಂದಿನ 5 ವರ್ಷ ಅವರು ನಮ್ಮ ಪರವಾಗಿ ಇರುತ್ತಾರೆ. ಈ ನಿಟ್ಟಿನಲ್ಲಿ ನಾವು ಉಡುಪಿಯಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.
ಬಿಜೆಪಿಯಿಂದ ಕರಾಳ ದಿನ: ರಾಜ್ಯ ಮಾಧ್ಯಮ ಪ್ರಕೋಷ್ಠದ ಕಾರ್ಯದರ್ಶಿ ಅಮೃತ್ ಶೆಣೈ ಮಾತನಾಡಿ, ಯಾರ್ಯಾರ ಹತ್ತಿರ ಯಾರ್ಯಾರದ್ದು ಸಿಡಿ ಇದೆ ಎಂದು ದೇವರಿಗೆ ಗೊತ್ತು. ಬಿಜೆಪಿ ಟಿಕೆಟ್ ಘೋಷಣೆ ಮಾಡಲು ಇಷ್ಟು ತಡವಾಗಲೂ ಕಾರಣ ಎಲ್ಲ ಆಕಾಂಕ್ಷಿಗಳಲ್ಲಿ ಒಬ್ಬೊಬ್ಬರದ್ದು ಸಿಡಿ ಇದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಯಾವತ್ತೂ ಬಹುಮತ ಬಂದಿಲ್ಲ. ಆಪರೇಶನ್ ಕಮಲ, ಬ್ಲ್ಯಾಕ್ ಮೇಲ್ ಮೂಲಕ ಶಾಸಕರನ್ನು ಖರೀದಿಸಿ ಸರಕಾರ ಮಾಡುತ್ತಾರೆ. ಕಾಂಗ್ರೆಸ್‌ಗೆ ಪ್ರಸಾದ್ ರಾಜ್‌ರಂತಹ ಒಳ್ಳೆಯ ಸಜ್ಜನ ನಾಯಕ ಸಿಕ್ಕಿದ್ದು ನಮ್ಮ ಭಾಗ್ಯ, ಇಂತಹವರನ್ನು ನಾವು ಗೆಲ್ಲಿಸಲೇ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೌಡಿಸಂ ಸೇರಿದಂತೆ ಕರಾಳ ದಿನಗಳನ್ನು ನಾವು ಎದುರಿಸ ಬೇಕಾದೀತು ಎಂದರು.
ಕಾಂಗ್ರೆಸ್ ನಾಯಕರಾದ ದಿವಾಕರ ಕುಂದರ್, ದಿನೇಶ್ ಪುತ್ರನ್, ಮಮತಾ ಶೆಟ್ಟಿ, ಕುಶಲ್ ಶೆಟ್ಟಿ, ಧನಂಜಯ್ ಕುಂದರ್, ಗಣೇಶ್ ನೆರ್ಗಿ, ಪ್ರಶಾಂತ್ ಪೂಜರಿ, ನಾಸಿರ್, ಸುರೇಶ್ ಶೆಟ್ಟಿ, ರೋಶನಿ ಓಲಿವರ್, ಸುಕೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಸಾದರಿಗೆ ವರಪ್ರಸಾದ ನೀಡಿದ ಕೊರಗಜ್ಜ
ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮ ಕುಕ್ಕುಡೆ ಕೊರಗಜ್ಜ ದೈವಸ್ಥಾನಕ್ಕೆ ಬುಧವಾರ ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್‌ಬೇಟಿ ನೀಡಿ ದೈವದ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೈವದ ಎದುರು ಪ್ರಾರ್ಥಿಸಿ ತಮ್ಮ ಮನದಿಂಗಿತವನ್ನು ತೋಡಿಕೊಂಡರು. ತತ್‌ಕ್ಷಣ ದೈವದ ಮೂರ್ತಿಯ ಬಲಬದಿಯ ಹೂವು ಕೆಳಗೆ ಬೀಳುವ ಮೂಲಕ ದೈವಬಲ ಇದೆ ಅಂತ ಕೊರಗಜ್ಜ ತೋರಿಸಿಕೊಟ್ಟಿದ್ದಾನೆ ಎಂದು ಜನರಾಡಿಕೊಳ್ಳುತಿದ್ದಾರೆ.