Advertisement

ಬಿಳಿಗಿರಿರಂಗ ದೇಗುಲದ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

09:33 PM Feb 04, 2020 | Lakshmi GovindaRaj |

ಚಾಮರಾಜನಗರ: ನಾಡಿನ ಯಾತ್ರಾ ಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಸಂರಕ್ಷಣಾ ಕಾಮಗಾರಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿ ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು. ಭಕ್ತಾದಿಗಳು ಹಾಗೂ ದಾನಿಗಳ ನೆರವಿನಿಂದ ನಡೆಯುತ್ತಿರುವ ಕಾಮಗಾರಿ ನಿರ್ವಹಣೆಯ ಬಗ್ಗೆಯೂ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದರು.

ಕಡ್ಡಾಯವಾಗಿ ಸುರಕ್ಷತೆ ಕ್ರಮ ಪಾಲಿಸಿ: ಯಾವುದೇ ಕಾಮಗಾರಿಯನ್ನು ತಾಂತ್ರಿಕ ಹಾಗೂ ನಿರ್ದಿಷ್ಟ ಗುಣಮಟ್ಟ ಮಾನದಂಡವಾಗಿಟ್ಟುಕೊಂಡು ನೆರವೇರಿಸಬೇಕು. ಸುರಕ್ಷತೆ ಕ್ರಮಗಳು ಕಡ್ಡಾಯವಾಗಿ ಪಾಲನೆಯಾಗಬೇಕು. ಪಾರದರ್ಶಕವಾಗಿ ಎಲ್ಲಾ ಪ್ರಕ್ರಿಯೆಗಳು ನಡೆಯಬೇಕು.

ದೇವಾಲಯದ ರಾಜಗೋಪುರ ಮೆಟ್ಟಿಲುಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯಿಂದ ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಲು ತಾಂತ್ರಿಕವಾಗಿ ಎಂಜಿನಿಯರ್‌ಗಳ ಸಲಹೆ ಪಡೆಯಬೇಕು. ದೇವಾಲಯದ ಸುತ್ತ ನೆಲಹಾಸು ಕಾಮಗಾರಿಗೆ ಸಂಬಂಧಿಸಿದಂತೆ ಪ್ರಾಚ್ಯವಸ್ತು ಇಲಾಖೆಯಿಂದ ಅಗತ್ಯ ಪ್ರಕ್ರಿಯೆ ಕೈಗೊಳ್ಳಬೇಕು. ದೇವಾಲಯದ ವಿಮಾನ ಗೋಪುರ, ಮುಖ ಮಂಟಪ, ಯಾಗ ಶಾಲೆ ಮತ್ತು ಪಾಕ ಶಾಲೆ ನಿರ್ಮಾಣ ಕಾರ್ಯವು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸೂಚಿಸಿದರು.

ಮೂಲ ಸೌಲಭ್ಯದತ್ತ ಹೆಚ್ಚು ಗಮನಹರಿಸಿ: ದೇವಾಲಯಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೂಲ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಭಕ್ತಾದಿಗಳಿಗೆ ಕಲ್ಪಿಸಬೇಕು. ಕೊಳವೆ ಬಾವಿಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು. ಭಕ್ತಾದಿಗಳ ಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸುವ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಪ್ಲಾಸ್ಟಿಕ್‌ ನಿಷೇಧಕ್ಕೆ ಕ್ರಮವಹಿಸಿ: ಬಿಳಿಗಿರಿರಂಗನ ಬೆಟ್ಟ ಪ್ರದೇಶದಲ್ಲಿ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಭಕ್ತಾದಿಗಳಿಗೆ ದೇವಸ್ಥಾನದ ಪೂಜಾ ಕೈಂಕರ್ಯ ಸೇವೆಗಳಿಗೆ ಆನ್‌ಲೈನ್‌ ಸೌಲಭ್ಯವನ್ನು ಒದಗಿಸಬೇಕಿದೆ. ದೇವಾಲಯ ವ್ಯಾಪ್ತಿಗೆ ಬರುವ ಜಾಗದ‌ ಸರ್ವೆ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳುವಂತೆ ತಹಶೀಲ್ದಾರ್‌ ಮತ್ತು ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖೀತಾ ಎಂ.ಚಿನ್ನಸ್ವಾಮಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸುರೇಂದ್ರ, ಬಿಳಿಗಿರಿರಂಗನ ಬೆಟ್ಟದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್‌ಮೂರ್ತಿ, ತಹಶೀಲ್ದಾರ್‌ ಜೆ. ಮಹೇಶ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next