ಮೈಸೂರು: ನಗರದ ಜಲದರ್ಶಿನಿ ಅತಿಥಿಗೃಹದ ಬಳಿಯ ರಾಷ್ಟ್ರೀಯ ಹೆದ್ದಾರಿ ನೇರಗೊಳಿಸುವ ಕಾಮಗಾರಿಯಲ್ಲಿ ಕೋಟಿಗಟ್ಟಲೆ ಹಣ ಲೂಟಿಯಾಗಿದ್ದು, ಈ ಬಗ್ಗೆ ತನಿಖೆಗೆ ಒತ್ತಾಯಿಸಲಾಗುವುದು ಹಾಗೂ ಮುಂದಿನ ಒಂದು ವಾರದೊಳಗೆ ಈಗಾಗಲೇ ರೂಪಿಸಿರುವ ಯೋಜನೆ ಪ್ರಕಾರ ಕಾಮಗಾರಿಯನ್ನು ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಕೇಂದ್ರ ಸರ್ಕಾರದ ಸೆಂಟ್ರಲ್ ರೋಡ್ ಫಂಡ್(ಸಿಆರ್‌ಎಫ್) 12.5 ಕೋಟಿ ರೂ. ವೆಚ್ಚದಲ್ಲಿ ನಡೆಸಿರುವ ಕಾಮಗಾರಿ ಕಳೆಪೆ ಗುಣಮಟ್ಟದಿಂದ ಕೂಡಿದ್ದು, ಜತೆಗೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ್‌ಸಿಂಹ, ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿದರು.
ಈ ವೇಳೆ ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಆರಂಭಕ್ಕೂ ಮುನ್ನ ರೂಪಿಸಿದ್ದ ಯೋಜನೆ ಪ್ರಕಾರ ಕೆಲಸ ಮಾಡಿಲ್ಲ. ರಸ್ತೆಯನ್ನು ನೇರಗೊಳಿಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಲದರ್ಶಿನಿ ಸಮೀಪದ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಿರುವ ಕಾರಣ ಸಾಕಷ್ಟು ಅಪಘಾತಗಳು ಸಂಭವಿಸಿದೆ. ಹೀಗಾಗಿ ರಸ್ತೆಯನ್ನು ನೇರಗೊಳಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಆಗಿದ್ದ ಗೋವಿಂದರಾಜು ಕಾಮಗಾರಿಯಲ್ಲಿ ಕಣ್ಣಿಗೆ ಬಣ್ಣಹಚ್ಚುವ ಕೆಲಸ ಮಾಡಿದ್ದು, ಮೂರು ತಿಂಗಳ ಕಾಲ ರಸ್ತೆ ಬಂದ್ ಮಾಡಿ,
ಯಾವುದೇ ಹೊಸ ಕಾಮಕಾರಿ ಮಾಡದೆ ಡಾಂಬರು ಕಿತ್ತು ಹೊಸ ಡಾಂಬರು ಹಾಕಿ ಸುಮ್ಮನಾಗಿದ್ದಾರೆ. ಆ ಮೂಲಕ ಕಾಮಗಾರಿಯಲ್ಲಿ ಹಣ ಲೂಟಿ ಮಾಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಚಂದ್ರಪ್ಪ, ಎಂಜಿನಿಯರ್ ಯೋಗಾನಂದ್ ಹಾಜರಿದ್ದರು.