ಬೆಂಗಳೂರು: ರಾಜ್ಯ ಸರ್ಕಾರದಿಂದ ಭ್ರಷ್ಟಾಚರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳನ್ನು ದುರುಪಯೋಗ ಮಾಡಿ ಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ದೂರು ನೀಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ.
ಸುಳ್ಳು ದೂರುಗಳ ವಿರುದ್ಧ ಉದ್ದೇಶ ಪೂರ್ವಕ ತನಿಖೆಗೆ ನೋಟಿಸ್ ಜಾರಿ ಮಾಡುವುದು ಸೇರಿ ಅನೇಕ ವಿಚಾರಗಳಲ್ಲಿ ರಾಜ್ಯ ಸರ್ಕಾರ ಎಸಿಬಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿಲು ಬಿಜೆಪಿ ತೀರ್ಮಾನಿಸಿದ್ದು, ರಾಜ್ಯ ಘಟಕದ ಪಧಿಕಾರಿಗಳು ಸೋಮವಾರ ಬೆಳಗ್ಗೆ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ದೂರು ನೀಡಲಿದ್ದಾರೆ.
ಇಂದು ಪ್ರತಿಭಟನೆ: ಎಸಿಬಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆ.20ರ ಬೆಳಗ್ಗೆ 11 ಗಂಟೆಗೆ ನಗರದ ಕೆ.ಜಿ.ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಗರ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ.
ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯ ಸರ್ಕಾರ ತನ್ನ ರಾಜಕೀಯ ವಿರೋಧಿಗಳನ್ನು ನಿಯಂತ್ರಿಸಲು ಬಳಸಲಾಗುತ್ತಿದೆ ಎಂಬ ಸಂದೇಹ ಈಗ ನಿಜವಾಗಿದೆ. ಎಸಿಬಿ ಹೊಣೆ ಹೊತ್ತಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ರಸ್ತೆಗಿಳಿದು ಹೋರಾಟ ನಡೆಸುತ್ತಿರುವುದರಿಂದ ಹತಾಶರಾಗಿರುವ ಸಿದ್ದರಾಮಯ್ಯ ಅವರು ಹಳೇ ಪ್ರಕರಣವನ್ನೇ ಕೆದಕಿ ಸುಳ್ಳು ದಾಖಲೆಗಳನ್ನು ಎಸಿಬಿಗೆ ನೀಡಿದ್ದಾರೆ.
– ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ