Advertisement

ಗಣಿ ಸಂಗ್ರಹ ಹಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

11:40 PM Feb 04, 2020 | Lakshmi GovindaRaj |

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದಲ್ಲಿನ ಕೊಪ್ಪಳ ಭಾಗದ ಅಭ್ಯರ್ಥಿಗಳು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಆಡಳಿತಾತ್ಮಕ ಸೇವೆಗೆ ಆಯ್ಕೆಯಾಗುವಂತೆ ಮಾಡಲು ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿದೆ. ಈ ಮೂಲಕ, ಗಣಿಬಾ ಧಿತ ಧನದಲ್ಲಿ ಪ್ರತಿಭಾವಂತರಿಗೆ ದೆಹಲಿ, ಬೆಂಗಳೂರಿನಲ್ಲಿ ಐಎಎಸ್‌, ಕೆಎಎಸ್‌ ತರಬೇತಿ ಕೊಡಿಸಲು ಸಿದ್ಧತೆ ನಡೆಸಿದ್ದು ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳೇ ಆಯ್ಕೆ ಆಗಬೇಕೆನ್ನುವುದು ಜಿಲ್ಲಾಡಳಿತದ ಬಹುಮುಖ್ಯ ಉದ್ದೇಶ.

Advertisement

ಕೊಪ್ಪಳ ಜಿಲ್ಲೆ ಶೈಕ್ಷಣಿಕವಾಗಿ ಇತ್ತೀಚಿನ ದಿನಗಳಲ್ಲಿ ಸುಧಾರಣೆ ಕಾಣುತ್ತಿದೆ. ಈ ಭಾಗದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಹಲವು ಪ್ರಯತ್ನ ನಡೆಯುತ್ತಲೇ ಇವೆ. ಆದರೆ ಈ ಭಾಗದಲ್ಲಿ ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನ, ತರಬೇತಿ ಇಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಹೀಗಾಗಿ ಹಲವು ಹೋರಾಟದ ಫಲವಾಗಿ ಹೈ.ಕ. ಭಾಗಕ್ಕೆ ವಿಶೇಷ 371(ಜೆ) ಮೀಸಲಾತಿ ನೀಡಿದೆ. ಮೀಸಲಾತಿಯಲ್ಲಾದರೂ ಕರ್ನಾಟಕ ಸರ್ಕಾರದ ಆಡಳಿತಾತ್ಮಕ ಸೇವೆಗೆ ಆಯ್ಕೆಯಾಗಲು ಪ್ರಸ್ತುತ ದಿನದಲ್ಲಿ ಅವಕಾಶ ದೊರೆಯುತ್ತಿವೆ.

ಸರ್ಕಾರ ಈಗಾಗಲೇ ಬಿಸಿಎಂ, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ನಿಗಮಗಳ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಐಎಎಸ್‌-ಕೆಎಎಸ್‌ ತರಬೇತಿ ಕೊಡಿಸುವ ಕೆಲಸ ಮಾಡುತ್ತಿದೆ. ಸರ್ಕಾರದ ಧನ ಸಹಾಯದಲ್ಲಿ ಕಡಿಮೆ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಆದರೆ ಹಲವು ದಾಖಲೆ ಸಲ್ಲಿಸಬೇಕಾಗುತ್ತಿದೆ. ಇದೆಲ್ಲವನ್ನೂ ಅವಲೋಕಿಸಿರುವ ಕೊಪ್ಪಳ ಜಿಲ್ಲಾಧಿಕಾರಿ ಸುನೀಲ್‌ ಕುಮಾರ ಅವರು ಜಿಲ್ಲೆಯ ಪ್ರತಿಭಾವಂತ ಅಭ್ಯರ್ಥಿಗಳನ್ನು ಗುರುತಿಸಿ, ಐಎಎಸ್‌ಗೆ ದೆಹಲಿಯಲ್ಲಿ, ಕೆಎಎಸ್‌ಗೆ ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಸೂಕ್ತ ಮಾರ್ಗದರ್ಶನ, ತರಬೇತಿ ಕೊಡಿಸಲು ಚಿಂತನೆ ನಡೆಸಿ ರೂಪುರೇಷೆ ಸಿದ್ಧಪಡಿಸಿದ್ದಾರೆ.

ಧನ ಮೀಸಲು: ಜಿಲ್ಲೆಯಲ್ಲಿ ಪ್ರತಿ ವರ್ಷ ಮರ ಸಾಗಾಟ, ಮರಳು ಸಾಗಾಟ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರಾಯಲ್ಟಿ ಪಡೆಯುತ್ತದೆ. ಈ ರಾಯಲ್ಟಿಯಲ್ಲಿಯೇ ಗಣಿ ನಡೆಸುವ ಸುತ್ತಲಿನ ಪ್ರದೇಶದಲ್ಲಿ ಕುಡಿವ ನೀರು, ರಸ್ತೆ, ಚರಂಡಿ ಸೇರಿ ಶೈಕ್ಷಣಿಕವಾಗಿ ಅಭಿವೃದ್ಧಿಗೆ ಡಿಸ್ಟಿಕ್ಟ್ ಮಿನಿರಲ್ಸ್‌ ಫಂಡ್‌ (ಡಿಎಂಎಫ್‌) ಅನುದಾನವನ್ನು ವಿನಿಯೋಗ ಮಾಡಬೇಕು. ಜಿಲ್ಲೆಯಲ್ಲಿ ಈವರೆಗೆ 40 ಕೋಟಿಗೂ ಅ ಧಿಕ ಹಣ ಸಂಗ್ರಹವಾಗಿದೆ. ಈ ಹಣದಲ್ಲಿ ನೇರವಾಗಿ ಗಣಿಬಾಧಿತ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು.

ಇನ್ನು ಸ್ವಲ್ಪ ಹಣವನ್ನು ಪರೋಕ್ಷವಾಗಿ ಗಣಿ ಬಾಧಿ ತ ಪ್ರದೇಶದಲ್ಲಿ ಬಳಕೆ ಮಾಡಬೇಕು. ಈ ಹಣದಲ್ಲಿ ಶಾಸಕರ ಸಮ್ಮತಿ ಮೇರೆಗೆ 1 ಕೋಟಿ ಅನುದಾನ ಕಾಯ್ದಿರಿಸಿ ಜಿಲ್ಲೆಯಲ್ಲಿ ಪದವಿ ಪೂರೈಸಿದ ಆಕಾಂಕ್ಷಿತ, ಪ್ರತಿಭಾವಂತ, ಒಂದೆರಡು ಬಾರಿ ಪರೀಕ್ಷೆಯಲ್ಲಿ ಪಾಲ್ಗೊಂಡು ಸ್ವಲ್ಪದರಲ್ಲಿಯೇ ಕೈ ತಪ್ಪಿದಂತ ಅಭ್ಯರ್ಥಿಗಳನ್ನು ಜಿಲ್ಲಾಡಳಿತವೇ ವಿಶೇಷವಾಗಿ ಗುರುತಿಸಿ, ಅಂತವರಿಗೆ ಪ್ರಾಥಮಿಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿ ತರಬೇತಿ ಕೊಡಿಸಲು ಮುಂದಾಗಿದೆ.

Advertisement

ಐಎಎಸ್‌ಗಾಗಿ ದೆಹಲಿಯಲ್ಲಿ ತರಬೇತಿ: ಪ್ರಸ್ತುತ ದಿನದಲ್ಲಿ ಎಲ್ಲವೂ ಸ್ಪರ್ಧಾತ್ಮಕ. ಐಎಎಸ್‌ಗೆ ದೆಹಲಿಯಲ್ಲಿ ಉತ್ತಮ ತರಬೇತಿ ನೀಡುತ್ತಿದ್ದು, ಅಲ್ಲಿಯೇ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿಗೆ ಕಳಿಸಲು ಚಿಂತನೆ ನಡೆಸಿದೆ. ಇನ್ನು ಕೆಎಎಸ್‌ಗೆ ಪ್ರಯತ್ನ ಮಾಡುವ ಅಭ್ಯರ್ಥಿಗಳಿಗೆ ಬೆಂಗಳೂರು ಹಾಗೂ ಹುಬ್ಬಳ್ಳಿ ಧಾರವಾಡದಲ್ಲಿ ತರಬೇತಿ ಕೊಡಿಸಲು ತಯಾರಿ ನಡೆಸುತ್ತಿದೆ.

ಪ್ರತಿ ವರ್ಷವೂ 8-10 ಅಭ್ಯರ್ಥಿಗಳಿಗೆ ತರಬೇತಿಗೆ ಕಳಿಸುವ ಯೋಜನೆ ರೂಪಿಸಲಿದೆ. ಇದರೊಟ್ಟಿಗೆ ಕೊಪ್ಪಳದಲ್ಲಿಯೇ ಎಫ್‌ಡಿಎ, ಎಸ್‌ಡಿಎ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿ ಸಿದ ಸ್ಪರ್ಧಾತ್ಮಕ ಪರೀಕ್ಷೆಗೆ ಅನ್ಯ ಜಿಲ್ಲೆಗಳ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲು ತಯಾರಿ ನಡೆಸಲಾಗುತ್ತಿದೆ. ಕೊಪ್ಪಳದಲ್ಲಿನ ತರಬೇತಿಗೆ ಪಿಯು ಪೂರೈಸಿದ ಯಾರು ಬೇಕಾದರೂ ಪಾಲ್ಗೊಂಡು ತರಬೇತಿ ಪಡೆಯಬಹುದಾಗಿದೆ.

ಜಿಲ್ಲೆಯ ಐಎಎಸ್‌ ಹಾಗೂ ಕೆಎಎಸ್‌ ಅಭ್ಯರ್ಥಿಗಳಿಗೆ ವಿಶೇಷ ತರಬೇತಿ ಕೊಡಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಗಣಿಬಾಧಿ ತ ಸಂಗ್ರಹದ ಧನದಲ್ಲಿ ತರಬೇತಿ ನಡೆಯಲಿದೆ. ಜತೆಗೆ ಎಸ್‌ಡಿಎ, ಎಫ್‌ಡಿಎ ಸೇರಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅಭ್ಯರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುವುದು.
-ಸುನೀಲ್‌ ಕುಮಾರ, ಕೊಪ್ಪಳ ಜಿಲ್ಲಾಧಿಕಾರಿ

* ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next