Advertisement

ಮೀಸಲು ಕಣದೊಳಗೆ ಸಮಸ್ಯೆಗಳ ಪೈಪೋಟಿ

12:33 PM Apr 03, 2018 | |

ಬೆಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನಸಂಖ್ಯೆ ಹೆಚ್ಚಿರುವ ಮೀಸಲು ವಿಧಾನಸಭಾ ಕ್ಷೇತ್ರ ಪುಲಿಕೇಶಿ ನಗರದಲ್ಲಿ ಎಲ್ಲೇ ಹೋದರೂ ಸಮಸ್ಯೆಗಳದ್ದೇ ಪುಕಾರು. ಕ್ಷೇತ್ರದ ವ್ಯಾಪ್ತಿಗೆ ಬರುವ ಬಹುತೇಕ ಏರಿಯಾಗಳಲ್ಲಿ ಅಭಿವೃದ್ಧಿಗಿಂತ ಹೆಚ್ಚಾಗಿ ಸಮಸ್ಯೆಗಳ ನಡುವೆ ಪೈಪೋಟಿ ಕಂಡು ಬರುತ್ತದೆ.

Advertisement

ಕಳೆದ ಐದು ವರ್ಷದಲ್ಲಿ ಕ್ಷೇತ್ರ ಅಷ್ಟಿಷ್ಟು ಆಭಿವೃದ್ಧಿ ಕಂಡಿದೆ. ಆದರೆ, ಅಲ್ಲಿನ ಬೆಟ್ಟದಷ್ಟು ಸಮಸ್ಯೆಗಳ ನಡುವೆ ಆ ಅಭಿವೃದ್ಧಿ ಹುದುಗಿ ಹೋಗಿದೆ. ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಕೊನೆ ಇಲ್ಲ. ಕಾವೇರಿ ನೀರು ಇಲ್ಲಿ ಮರೀಚಿಕೆ. ಈಗೀಗ ವಾರದಲ್ಲಿ ಮೂರು ದಿನ ಕಾವೇರಿ ನೀರು ಬರುತ್ತಿದೆ.
ಕಸವಿಲೇವಾರಿ ಸಮಸ್ಯೆ ಪರಿಹಾರ ಕಂಡುಕೊಳ್ಳಲಾರದಷ್ಟು ಬೆಳೆದಿದೆ.

ಕಿರಿದಾದ ರಸ್ತೆಗಳು, ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆ, ಡಿ.ಜೆ.ಹಳ್ಳಿ, ಮೋದಿ ರಸ್ತೆಯ ರೋಷನ್‌ ನಗರ, ಇಂದಿರಾಪುರಂ ಕೊಳೆಗೇರಿಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಇಲ್ಲಿನ ಜನರ ನಿಕೃಷ್ಟ ಜೀವನ ಮಟ್ಟ ಹಾಗೂ ಸಾಮಾಜಿಕ ಸಮಸ್ಯೆಗಳು ಈ ಕ್ಷೇತ್ರದ “ಕಪ್ಪು ಚುಕ್ಕೆ’ಯಂತಿದೆ.

ಕ್ಷೇತ್ರದಲ್ಲಿ ಮೊದಲು 15 ರೂ.ಗೆ ಒಂದು ಬಿಂದಿಗೆ ನೀರು ತೆಗೆದುಕೊಳ್ಳಬೇಕಾಗಿತ್ತು. ಆದರೆ, ಈಗ ಮೂರು ದಿನಕ್ಕೊಮ್ಮೆ ಉಚಿತವಾಗಿ ಕಾವೇರಿ ನೀರು ಸಿಗುವಂತೆ ಮಾಡಲಾಗಿದೆ. ಉಳಿದಂತೆ ರಸ್ತೆ, ಒಳಚರಂಡಿ ಅಭಿವೃದ್ಧಿಪಡಿಸಲಾಗಿದೆ. ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರಿಗೆ ಮನೆ ಕಟ್ಟಿಸಿಕೊಡಲಾಗಿದೆ. ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದು ಸ್ಥಳೀಯ ಶಾಸಕರು ಹೇಳುತ್ತಾರೆ. ಆದರೆ, ಸಮಸ್ಯೆಗಳ ಮುಂದೆ ಆ ಅಭಿವೃದ್ಧಿ ಗೌಣವಾಗಿದೆ.

ಟ್ಯಾನರಿ ರಸ್ತೆ ಹಾಗೂ ದಿಣ್ಣೂರು ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಹಲವು ವರ್ಷಗಳ ಹಿಂದೆ ರೂಪಿಸಿರುವ 110 ಕೋಟಿ ರೂ. ವೆಚ್ಚದ ರಸ್ತೆ ವಿಸ್ತರಣೆ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಈ ಬಗ್ಗೆ ಸ್ಥಳೀಯರಲ್ಲಿ ಅಸಮಾಧನವಿದೆ. ಕ್ಷೇತ್ರದಲ್ಲಿ  ಬಿಬಿಎಂಪಿಯ ಏಳು ವಾರ್ಡ್‌ಗಳಿದ್ದು, ನಾಲ್ಕರಲ್ಲಿ ಕಾಂಗ್ರೆಸ್‌, ಎರಡಲ್ಲಿ ಜೆಡಿಎಸ್‌ ಹಾಗೂ ಒಂದು ಕಡೆ ಪಕ್ಷೇತರ ಸದಸ್ಯರಿದ್ದಾರೆ. ಪ್ರಸ್ತುತ ಬೆಂಗಳೂರಿನ ಮೇಯರ್‌ ಆಗಿರುವ ಸಂಪತ್‌ರಾಜ್‌ ಪ್ರತಿನಿಧಿಸುವ ದೇವರಜೀವನಹಳ್ಳಿ ವಾರ್ಡ್‌ ಸಹ ಇದೇ ಕ್ಷೇತ್ರದಲ್ಲಿದೆ.

Advertisement

ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಪೈಪೋಟಿ ಏರ್ಪಡುವ ಲಕ್ಷಣಗಳಿವೆ. ಜೆಡಿಎಸ್‌ನಿಂದ ಗೆದ್ದಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್‌ಗೆ ಬಂದಿದ್ದು, ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋಲನುಭವಿಸಿದ್ದ ಪ್ರಸನ್ನಕುಮಾರ್‌ ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಯಾರಿಗೆ ಟಿಕೆಟ್‌ ನೀಡುತ್ತಾರೆ ಎಂಬುದರ ಮೇಲೆ ಸೋಲು-ಗೆಲುವು ನಿರ್ಧಾರವಾಗಲಿದೆ.
 

ಹಿಂದಿನ ಫ‌ಲಿತಾಂಶ
-ಅಖಂಡ ಶ್ರೀನಿವಾಸಮೂರ್ತಿ (ಜೆಡಿಎಸ್‌) 48,995
-ಬಿ. ಪ್ರಸನ್ನಕುಮಾರ್‌-(ಕಾಂಗ್ರೆಸ್‌) 38,796
-ಕೆ. ಪಳನಿ ವೇಲು- (ಬಿಜೆಪಿ) 4,589

ಟಿಕೆಟ್‌ ಆಕಾಂಕ್ಷಿಗಳು
-ಕಾಂಗ್ರೆಸ್‌-ಬಿ. ಪ್ರಸನ್ನಕುಮಾರ್‌, ಅಖಂಡ ಶ್ರೀನಿವಾಸಮೂರ್ತಿ
-ಬಿಜೆಪಿ- ಮುನಿಕೃಷ್ಣ
-ಜೆಡಿಎಸ್‌-ಬಸವರಾಜ್‌
-ಆಮ್‌ ಆದ್ಮಿ ಪಾರ್ಟಿ- ಆರ್‌.ಸಿದ್ದಗಂಗಯ್ಯ

ಕ್ಷೇತ್ರದ ಮಹಿಮೆ: ಕ್ಷೇತ್ರ ಪುನರ್‌ವಿಂಗಡಣೆ ನಂತರ 2008ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರ ಭಾಷಾ ಮತ್ತು ಧಾರ್ಮಿಕ ವೈವಿಧ್ಯತೆ ಹೊಂದಿದೆ, 1.62 ಲಕ್ಷ ಮತದಾರರು ಇಲ್ಲಿದ್ದು, ಕಡಿಮೆ ಮತದಾರರ ಹೊಂದಿರುವ  ಕ್ಷೇತ್ರವೂ ಇದಾಗಿದೆ. ದಂಡು ಪ್ರದೇಶದ ವ್ಯಾಪ್ತಿಯಲ್ಲಿ ವಾರ್ಷಿಕ ಮಹೋತ್ಸವ, ಉತ್ಸವಗಳಿಗೆ ಮಣ್ಣಿನಿಂದ ದೇವರ ಮೂರ್ತಿ ಮಾಡಿಕೊಡುವ ಕುಂಬಾರ ಬೀದಿ ಇರುವುದು ಇದೇ ಕ್ಷೇತ್ರದಲ್ಲಿ. ಪ್ರಭಾವಿ ದಲಿತ ನಾಯಕ ದಿವಂಗತ ಬಸವಲಿಂಗಪ್ಪ ಅವರು ಯಲಹಂಕ ಕ್ಷೇತ್ರ ಪ್ರತಿನಿಧಿಸುತ್ತಿದ್ದಾಗ ಅವರಿಗೆ ಈ ಭಾಗ ಭದ್ರಕೋಟೆಯಾಗಿತ್ತು. ಸೇನಾ ಕ್ಯಾಂಪ್‌ ಸಹ  ಈ ಕ್ಷೇತ್ರದಲ್ಲಿದೆ.
 
ಕ್ಷೇತ್ರದ ದೊಡ್ಡ ಸಮಸ್ಯೆ?: ಅತಿ ಹೆಚ್ಚು ಬಡ ಮತ್ತು ಮಧ್ಯಮ ವರ್ಗದ ಜನಸಂಖ್ಯೆ ಇರುವ ಕ್ಷೇತ್ರದಲ್ಲಿ ಜನ ಸಾಂದ್ರತೆ ದೊಡ್ಡ ಸಮಸ್ಯೆ. ಇದರೊಂದಿಗೆ ಕುಡಿಯುವ ನೀರು, ಒಳಚರಂಡಿ, ಕಿರಿದಾದ ರಸ್ತೆಗಳಲ್ಲಿ ಸುಗಮ ಸಂಚಾರ ಕನಸಿನ ಮಾತು.  ಗಾಂಜಾ ಮಾಫಿಯಾ ಮತ್ತು ಕಾನೂನು ಸುವ್ಯವಸ್ಥೆ ಈ ಕ್ಷೇತ್ರವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳು. ಅಪರಾಧ ಹಾಗೂ ಅಕ್ರಮ ಪ್ರಕರಣಗಳ ಚಟುವಟಿಕೆ ತಾಣ ಪುಲಿಕೇಶಿನಗರ ಎಂಬ ಕುಖ್ಯಾತಿಯೂ ಇದೆ. ಐದು ವರ್ಷಗಳಲ್ಲಿ ನೂರಾರು ಕೋಟಿ ರೂ. ಅನುದಾನ ಹರಿದು ಬಂದಿದೆ. ಆದರೆ ಕ್ಷೇತ್ರದಲ್ಲೊಮ್ಮೆ ಸುತ್ತಾಡಿದರೆ ಆ ಅನುದಾನ ಎಲ್ಲಿ ಹೋಯಿತು ಎಂಬ ಅನುಮಾನ ಮೂಡುತ್ತದೆ.

ಕ್ಷೇತ್ರದಲ್ಲಿ ಬೆಸ್ಟ್‌ ಏನು?: ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಸರ್ಕಾರದಿಂದ ಸಾಕಷ್ಟು ಹಣ ಅನುದಾನದ ರೂಪದಲ್ಲಿ ತಂದಿದ್ದಾರೆ. ದಿಣ್ಣೂರು ಮತ್ತು ಟ್ಯಾನರಿ ರಸ್ತೆ ವಿಸ್ತರಣೆಗೆ 110 ಕೋಟಿ ರೂ. ಮಂಜೂರಾಗಿದೆ. ಬಡವರ್ಗದವರಿಗೆ ಕೊಳೆಗೇರಿ ನಿರ್ಮೂಲನಾ ಮಂಡಳಿ, ಗೃಹ ಮಂಡಳಿ, ಬಿಬಿಎಂಪಿ ವತಿಯಿಂದ ಮನೆ ನಿರ್ಮಿಸಿಕೊಡಲಾಗಿದೆ. ಸರ್ಕಾರಿ ಶಾಲೆ-ಕಾಲೇಜುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕಾಲೋನಿ, ವಠಾರಗಳಲ್ಲಿ ಕುಡಿಯುವ ನೀರು ಸಂಪರ್ಕಕ್ಕೆ ಸಾಧ್ಯವಾದಷ್ಟೂ ಗಮನಹರಿಸಲಾಗಿದೆ.

ಶಾಸಕರು ಏನೆಂತಾರೆ?
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಒಬ್ಬ ಶಾಸಕನಾಗಿ ಐದು ವರ್ಷಗಳಲ್ಲಿ ಎಷ್ಟೆಲ್ಲಾ ಕೆಲಸ ಮಾಡಬಹುದೋ ಅಷ್ಟನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನಾನು ಹೇಗೆ, ನನ್ನ ಕೆಲಸ ಏನು ಅಂತ ಕ್ಷೇತ್ರದ ಮತದಾರರಿಗೆ ಚೆನ್ನಾಗಿ ಗೊತ್ತಿದೆ.
-ಅಖಂಡ ಶ್ರೀನಿವಾಸ ಮೂರ್ತಿ

ಜನದನಿ
ಕಾವೇರಿ ನೀರು ಬರಲ್ಲ. ಆದ್ರೂ ಕುಡಿಯುವ ನೀರು ಕರೆಂಟ್‌ಗೆ ಅಷ್ಟು ಸಮಸ್ಯೆ ಇಲ್ಲ. ಆದರೆ, ಕಸ ವಿಲೇವಾರಿ ಸರಿ ಇಲ್ಲ. ರಸ್ತೆಗಳು ಚಿಕ್ಕದಾಗಿವೆ. ಸ್ಲಂಗಳು ಮತ್ತು ಬಡವರು ವಾಸಿಸುವ ಏರಿಯಾಗಳಲ್ಲಿ ಮೂಲ ಸೌಕರ್ಯಗಳಿಲ್ಲ.
-ಇರ್ಫಾನ್‌ ಬಾಷಾ

ರೋಷನ್‌ನಗರ ಮತ್ತು ಇಂದಿರಾಪುರ ಸ್ಲಂಗಳಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಕುಡಿಯುವ ನೀರಿನದ್ದೇ ಸಮಸ್ಯೆ. ಬೊರ್‌ವೆಲ್‌ ಹಾಕಿಸಿದ್ದಾರೆ. ಆದ್ರೆ ನೀರು ಬಂದಿಲ್ಲ. ಸಂಜೆ ಆದ್ರೆ ಇಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗುತ್ತದೆ. 
-ನವಾಬ್‌

ರಮಾಬಾಯಿ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರಿನ ವ್ಯವಸ್ಥೆ ಮಾಡಲಾಗಿದೆ. ರಸ್ತೆಗಳ ನಿರ್ಮಾಣ ಮತ್ತು ದುರಸ್ತಿ ಆಗಿದೆ. ಮಳೆ ಬಂದಾಗ ಕೆಲವೆಡೆ ಮೋರಿ ನೀರು ಮನೆಗಳಿಗೆ ನುಗ್ಗುತ್ತಿತ್ತು. ಈಗ ಅದನ್ನೂ ಸರಿ ಮಾಡಿದ್ದಾರೆ.
-ಛಲಪತಿ

ಕಾವಲಬೈರಸಂದ್ರದಲ್ಲಿ ಕುಡಿಯುವ ನೀರಿಗೆ ಅಷ್ಟೊಂದು ಸಮಸ್ಯೆ ಇಲ್ಲ. ಶಾಸಕರು ಮತ್ತು ಕಾರ್ಪೊರೇಟರ್‌ ಏನೇ ಸಮಸ್ಯೆ ಇದ್ದರೂ ತಕ್ಷಣ ಸ್ಪಂದಿಸುತ್ತಾರೆ. ಆದರೆ, ಮಳೆ ಬಂದಾಗ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗುತ್ತದೆ.
-ಕಸ್ತೂರಿ

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next