Advertisement

ಸಮುದಾಯ ಬಾನುಲಿ ಕೇಂದ್ರ ದೇಸೀ ಸಂಸ್ಕೃತಿ, ಸಂಸ್ಕಾರಗಳ ಸಾಕ್ಷಾತಾರ 

11:59 AM Jan 12, 2018 | |

ನಗರ: ಮಾಧ್ಯಮಗಳಲ್ಲಿ ಟಿಆರ್‌ಪಿ ಹಂಬಲದ ಮಧ್ಯೆ ಗ್ರಾಮೀಣ ಬದುಕು, ಸಂಸ್ಕೃತಿ ಹಾಗೂ ಇಲ್ಲಿನ ಪ್ರತಿಭಾವಂತರ ಅರಿವೇ ಆಗುತ್ತಿಲ್ಲ. ಆದರೆ ದೇಸೀ ಸಂಸ್ಕೃತಿ, ಸಂಸ್ಕಾರಗಳ ಸಾಕ್ಷಾತ್ಕಾರ ಸಮುದಾಯ ಬಾನುಲಿ ಕೇಂದ್ರಗಳಲ್ಲಾಗುತ್ತಿದೆ. ಸಮುದಾಯ ಬಾನುಲಿ ಕೇಂದ್ರದ ಕಾರಣದಿಂದಾಗಿಯೇ ನಮ್ಮ ನೆಲೆಗಟ್ಟು ಉಳಿದುಕೊಳ್ಳಲು ಸಾಧ್ಯವಿದೆ ಎಂದು ಹಿರಿಯ ಪತ್ರಕರ್ತ ರವಿ ಹೆಗಡೆ ಹೇಳಿದರು.

Advertisement

ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ 90.8 ಎಫ್‌.ಎಂ. ಸಮುದಾಯ ಬಾನುಲಿ ಕೇಂದ್ರದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನವನ್ನು ಉದ್ಘಾಟಿಸಿದರು.

ಕಮ್ಯೂನಿಟಿ ಅಂದಾಕ್ಷಣ ಜಾತಿ, ಧರ್ಮದ ಹಿನ್ನೆಲೆಯ ಯೋಚನೆ ಒಂದೆಡೆಯಾದರೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಕಮ್ಯೂನಿಟಿಯ ಯೋಚನೆ ಇನ್ನೊಂದೆಡೆ ಇದೆ. ಆದರೆ ಇತ್ತೀಚೆಗೆ ಕಮ್ಯೂನಿಟಿ ರೇಡಿಯೋದ ಬಗೆಗೂ ಆಲೋಚನೆಗಳು ಹರಿಯಲಾರಂಭಿಸಿವೆ. ರೇಡಿಯೋಗೆ ಭವಿಷ್ಯವೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ ಖಾಸಗಿ ಹಾಗೂ ಸಮುದಾಯ ಬಾನುಲಿಗಳು ಪ್ರಸಿದ್ಧಿಗೆ ಬರಲಾರಂಭಿಸಿದವು ಎಂದು ಅವರು ಅಭಿಪ್ರಾಯಪಟ್ಟರು.

ಮೌಲ್ಯ ಸಾಧ್ಯವಿದೆ
ಪತ್ರಿಕೋದ್ಯಮ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕ ಸ್ವತಃ ಪತ್ರಕರ್ತರನ್ನೇ ಕಾಡಲು ಆರಂಭಿಸಿದೆ. ಆದರೆ ಯಾವುದೋ ಒಂದು ವಾಹಿನಿ ಅಥವಾ ಪತ್ರಿಕೆ ತಾನು ಮೌಲ್ಯಯುತವಾದದ್ದನ್ನಷ್ಟೇ ಪ್ರಕಟಿಸುತ್ತೇನೆಂದು ಏಕಾಂಗಿಯಾಗಿ ಶಸ್ತ್ರತ್ಯಾಗ ಮಾಡಿದರೆ ಉಪಯೋಗವಿಲ್ಲ. ಎಲ್ಲ ಮಾಧ್ಯಮಗಳು ಈ ಹಿನ್ನೆಲೆಯಲ್ಲಿ ಕಟಿಬದ್ಧವಾಗಬೇಕು ಎಂದರು.

ಅಂಚೆ ಹಾಗೂ ಬಾನುಲಿ ಬಾಂಧವ್ಯ
ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ರೂಪಿಸಿದ ರೇಡಿಯೋ ಪಾಂಚಜನ್ಯದ ಸಾಕ್ಷ್ಯಚಿತ್ರವನ್ನು ಲೋಕಾರ್ಪಣೆಗೊಳಿಸಿದ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ದೇಶದಲ್ಲಿ ವೈಯಕ್ತಿಕ ಸಂಪರ್ಕಕ್ಕಾಗಿ ಅಂಚೆ ವ್ಯವಸ್ಥೆ ಹಾಗೂ ಸಮುದಾಯ ಸಂಪರ್ಕಕ್ಕಾಗಿ ಬಾನುಲಿ ಕೇಂದ್ರಗಳು ಮಾತ್ರ ಅಸ್ತಿತ್ವದಲ್ಲಿದ್ದವು. ಅನಂತರ ತಂತ್ರಜ್ಞಾನದ ಬೆಳವಣಿಗೆಯಾದರೂ ರೇಡಿಯೋ ಪ್ರಾಮುಖ್ಯವನ್ನು ಉಳಿಸಿಕೊಂಡಿದೆ. ಗ್ರಾಮೀಣವಾಗಿ ಸಮುದಾಯ ಬಾನುಲಿಯ ಬೆಳವಣಿಗೆಯ ಮಧ್ಯೆ ದೇಶದ ಪ್ರಧಾನಿಯವರು ಅಂಚೆ ವ್ಯವಸ್ಥೆಗೂ ಬಲನೀಡಿದ್ದಾರೆ ಎಂದು ಅಭಿಪ್ರಾಯಿಸಿದರು.

Advertisement

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿನೆಮಾ ಛಾಯಾಚಿತ್ರಗಾರ ಎಚ್‌.ಎಂ. ರಾಮಚಂದ್ರ, ಇಂದು ಸಂವಹನದ ವ್ಯವಸ್ಥೆಯೇ ಬದಲಾಗಿ ಕೇಳುಗನ, ನೋಡುಗನ ಮೇಲೆ ವಿಷಯವನ್ನು ಹೇರುವುದು ಕಾಣುತ್ತಿದೆ. ಈ ಸಂದರ್ಭದಲ್ಲಿ ಸಮುದಾಯ ಬಾನುಲಿ ಕೇಂದ್ರಗಳು ನಿಜಾರ್ಥದಲ್ಲಿ ಸಂವಹನವನ್ನು ಸುಂದರವಾಗಿ ನಡೆಸಿಕೊಡುತ್ತಿವೆ ಎಂದರು.

ಸಮ್ಮಾನ
ರೇಡಿಯೋ ಪಾಂಚಜನ್ಯದ ಸ್ಟುಡಿಯೋ ಹಾಗೂ ಕಾರ್ಯಕ್ರಮ ಸಂಯೋಜನೆಗಾಗಿ ಶ್ರಮಿಸಿದ ನರಸಿಂಹ ಸ್ವಾಮಿ ಹಾಗೂ ಶ್ಯಾಮ ಭಟ್‌ ಅವರನ್ನು ಸಮ್ಮಾನಿಸಲಾಯಿತು. ರೇಡಿಯೋ ಪಾಂಚಜನ್ಯದಲ್ಲಿ ಮುಂದಿನ ದಿನಗಳಲ್ಲಿ ಪ್ರಸಾರಗೊಳ್ಳಲಿರುವ ಸಾಹಿತ್ಯ ಮತ್ತು ಯಕ್ಷಗಾನಕ್ಕೆ ಸಂಬಂಧಿಸಿದ ಎರಡು ಕಾರ್ಯಕ್ರಮಗಳ ಸಿಗ್ನೇಚರ್‌ ಟ್ಯೂನ್‌ ಬಿಡುಗಡೆಗೊಳಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್‌ ಸ್ವಾಗತಿಸಿ, ರೇಡಿಯೋ ಪಾಂಚಜನ್ಯದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶ್ರೀಕಾಂತ್‌ ಕೊಳತ್ತಾಯ ವಂದಿಸಿದರು. ಉಪನ್ಯಾಸಕಿ ವಿದ್ಯಾ ಎಸ್‌. ನಿರ್ವಹಿಸಿದರು.

ಹಳ್ಳಿಗಳಲ್ಲಿ ಜೀವ
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಭಾರತದ ಜೀವವಿರುವುದೇ ಹಳ್ಳಿಯಲ್ಲಿ. ಇಂತಹ ಹಳ್ಳಿಯ ಭಾವವನ್ನು ಪಸರಿಸುವ ಕಾಯಕದಲ್ಲಿ ಸಮುದಾಯ ಬಾನುಲಿ ಕಾರ್ಯ ನಿರ್ವಹಿಸುತ್ತದೆ. ನಗರ ಬದುಕಿನ ಜಂಜಾಟದಲ್ಲಿ ಗುರಿ, ಧ್ಯೇಯವಿಲ್ಲದೆ ತಿರುಗಾಡುತ್ತಿದ್ದೇವೆ. ಆದರೆ ಹಳ್ಳಿಗಳಲ್ಲಿ ಜನರಿಗೆ ಬದುಕಿನ ಬಗೆಗಿನ ಸುಂದರ ಕಲ್ಪನೆಯಿದೆ. ಹಾಗಾಗಿ ಅಂತಹ ಹಳ್ಳಿ ಸೊಗಡನ್ನು ಕಾಯುವ ಕಾರ್ಯ ಸಮುದಾಯ ಬಾನುಲಿಯಿಂದ ಆಗುತ್ತಿದೆ. ಹಳ್ಳಿಯ ಜೀವ, ಜೀವದ ಸ್ವರ ಸಂಚಾರ ಜಗತ್ತಿಗೆ ಕೊಡುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next