Advertisement
ಸೋಮವಾರ ಜಿಪಂ ಸಭಾಂಗಣದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿ ಸಂಘಗಳನ್ನು ಬಲಪಡಿಸುವ ಮೂಲಕ ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಅವಕಾಶ ಕಲ್ಪಿಸಬೇಕು ಎಂದರು. ಸಮುದಾಯದ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಸರ್ಕಾರಿ ಶಾಲೆಗಳ ಪುನರುಜ್ಜೀವನ ಸಾಧ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಇಂದು ವಿವಿಧ ಉನ್ನತ ಹುದ್ದೆಗಳಲ್ಲಿರಬಹುದು. ಅಂತವರು ತಾನು ಕಲಿತ ಶಾಲೆಯನ್ನು ಮರೆಯದೆ, ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ, ತನ್ನ ಶಾಲೆಯ ಶಿಕ್ಷಣದ ಗುಣಮಟ್ಟ ಸುಧಾರಿಸಲು ನಿರಂತರ ಕೊಡುಗೆ ನೀಡಬೇಕು ಎಂದರು.
Related Articles
Advertisement
ಜಿಲ್ಲಾಧಿಕಾರಿ ಡಾ| ಎಂ. ಲೋಕೇಶ್ ಮಾತನಾಡಿ, ಸರ್ಕಾರಿ ಶಾಲೆಗಳ ಕುರಿತಾದ ನಮ್ಮೆಲ್ಲರ ಮನೋಭಾವದಲ್ಲಿಬದಲಾವಣೆಯಾಗುವ ಅಗತ್ಯವಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಸರ್ಕಾರ ಎಲ್ಲವನ್ನೂ ಉಚಿತವಾಗಿ ನೀಡುತ್ತಿದೆ ಎಂಬ ಉಡಾಫೆ ಮನೋಭಾವ ಸಲ್ಲದು ಎಂದರು. ಸರ್ಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲಾ ಶಿಕ್ಷಕರಿಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದರೂ, ನಮ್ಮಲ್ಲಿ ಮಕ್ಕಳ ದಾಖಲಾತಿ ಕಡಿಮೆ ಯಾಕಿದೆ? ಶಿಕ್ಷಣದ ಗುಣಮಟ್ಟ ಯಾಕೆ ಉತ್ತಮವಾಗುತ್ತಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಬೇಕಿದೆ ಎಂದರು. ಇತ್ತೀಚೆಗೆ ತಾವು ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅನುಭವವನ್ನು ವಿವರಿಸಿದ ಜಿಲ್ಲಾಧಿಕಾರಿ ಅವರು, ” ಭೇಟಿ ನೀಡಿದ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ “ಮುಂಬೈ ಸ್ಪೆಲ್ಲಿಂಗ್ ಹೇಳಿ ಎಂದರೆ, 40 ಮಕ್ಕಳ ಪೈಕಿ ಒಬ್ಬರೂ ಮುಂದೆ ಬರಲಿಲ್ಲ. ಗುಣಮಟ್ಟದ ಶಿಕ್ಷಣ ನೀಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂಬುವುದು ಇದರಿಂದ ಸ್ಪಷ್ಟವಾಗುತ್ತದೆ. ಮೂಲಸೌಲಭ್ಯ ಒದಗಿಸುವುದು ಮಾತ್ರವಲ್ಲ, ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್ ಮಾತನಾಡಿ, ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ ಇತ್ಯಾದಿ ಮೂಲಸೌಲಭ್ಯ ಕಲ್ಪಿಸುವುದರ ಜೊತೆಗೆ ಶಿಕ್ಷಣದ ಗುಣಮಟ್ಟವನ್ನು ಉತ್ತಮಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕರು ಪ್ರತಿಯೊಂದು ಮಕ್ಕಳ ಮನೆಗೆ ಹೋಗಿ ಅವರ ಪಾಲಕರೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಆತ್ಮವಿಶ್ವಾಸ ಮೂಡಿಸಬೇಕಿದೆ. ಇಲ್ಲದಿದ್ದರೆ ನಮ್ಮ ಶಾಲೆಗಳು ಕೇವಲ ಮತಗಟ್ಟೆಗಳಾಗುವ ಅಪಾಯವಿದೆ.
ಡಾ| ಎಂ. ಲೋಕೇಶ್, ಜಿಲ್ಲಾಧಿಕಾರಿ