ಹೊಸದಿಲ್ಲಿ: ಕಾಮನ್‌ವೆಲ್ತ್ ಗೇಮ್ಸ್ ಆರಂಭವಾಗಲು ಕೆಲವು ದಿನಗಳಿರುವಾಗ ಭಾರತೀಯ ಆ್ಯತ್ಲೆಟಿಕ್ಸ್‌ಗೆ ನಿಷೇಧಿತ ದ್ರವ್ಯ ಸೇವನೆ ಅವಮಾನ ಎದುರಾಗಿದೆ.
ಎರಡು ಬಾರಿ ನಡೆದ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವ ಸ್ಪ್ರಿಂಟರ್ ಎಸ್. ಧನಲಕ್ಷ್ಮೀ ಮತ್ತು ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ಅವರನ್ನು ಭಾರತೀಯ ತಂಡದಿಂದ ಕೈಬಿಡಲಾಗಿದೆ.
37 ಸದಸ್ಯರ ಆರಂಭಿಕ ತಂಡದಲ್ಲಿ ಹೆಸರಿಸಲಾಗಿದ್ದ ಧನಲಕ್ಷ್ಮೀ ಮತ್ತು ಐಶ್ವರ್ಯಾ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಐಶ್ವರ್ಯಾ ಸ್ಪರ್ಧೆಗಾಗಿ ನಡೆಸಿದ ಎರಡು ಪರೀಕ್ಷೆಯಲ್ಲಿ ದ್ರವ್ಯ ಸೇವಿಸಿರುವುದು ಪತ್ತೆಯಾಗಿತ್ತು. ಧನಲಕ್ಷ್ಮೀ ಸ್ಪರ್ಧೆ ಹೊರತಾಗಿ ನಡೆಸಲಾದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು.
ಚೆನ್ನೈಯಲ್ಲಿ ಜು. 13 ಮತ್ತು 14ರಂದು ನಡೆದ ಅಂತಾರಾಜ್ಯ ಕೂಟದ ವೇಳೆ ತೆಗೆದುಕೊಳ್ಳಲಾದ ಧನಲಕ್ಷ್ಮೀ ಅವರ ದ್ರವ್ಯ ಸ್ಯಾಂಪಲ್‌ನಲ್ಲಿ ಅನಾಬೋಲಿಕ್ ಸ್ಟಿರಾಯ್ಡ ಇರುವುದು ಖಚಿತವಾಗಿದ್ದರೆ ಐಶ್ವರ್ಯಾ ಅವರ ಸ್ಯಾಂಪಲ್‌ನಲ್ಲಿ ಒಸ್ಟಾರಿನ್ ಇತ್ತು. ಧನಲಕ್ಷ್ಮೀ ಅವರ ಸ್ಪರ್ಧೆ ಇಲ್ಲದ ವೇಳೆ ನಡೆದ ಪರೀಕ್ಷೆಯನ್ನು ಮೇ ಮತ್ತು ಜೂನ್‌ನಲ್ಲಿ ನಡೆಸಲಾಗಿತ್ತು. ವಿಶ್ವ ಆ್ಯತ್ಲೆಟಿಕ್ಸ್‌ನ ಆ್ಯತ್ಲೆಟಕ್ಸ್ ಇಂಟಿಗ್ರಿಟಿ ಯುನಿಟ್ (ಎಐಯು) ಮತ್ತು ಇನ್ನೊಂದು ರಾಷ್ಟ್ರೀಯ ದ್ರವ್ಯ ವಿರೋಧಿ ದಳ (ನಾಡಾ) ನಡೆಸಿತ್ತು.
ಧನಲಕ್ಷ್ಮೀ ಟರ್ಕಿಯಲ್ಲಿ ತರಬೇತಿ ಪಡೆಯುತ್ತಿದ್ದ ವೆಈಳೆ ಎಐಯು ಅವರ ಸ್ಯಾಂಪಲ್ ಪಡೆದಿತ್ತು. ಅವರ ಎರಡನೇ ಸ್ಯಾಂಪಲನ್ನು ಜೂನ್ 22ರಂದು ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ತರಬೇತಿ ವೇಳೆ ಪಡೆಯಲಾಗಿತ್ತು. ಎಐಯು ನಡೆಸಿದ ದ್ರವ್ಯ ಪರೀಕ್ಷೆಯಲ್ಲಿ ಧನಲಕ್ಷ್ಮೀ ಸಿಕ್ಕಿಬಿದ್ದಿದ್ದಾರೆ.
ತಿರುವನಂತಪುರದಲ್ಲಿ ನಾಡಾ ನಡೆಸಿದ ಪರೀಕ್ಷೆಯಲ್ಲೂ ಅವರ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಅವರು ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಬರ್ಮಿಂಗ್‌ಹ್ಯಾಮ್‌ಗೆ ಹೋಗುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ರಿಲೇ ತಂಡದಲ್ಲಿದ್ದರು
ಧನಲಕ್ಷ್ಮೀ ಅವರು ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಆಯ್ಕೆ ಮಾಡಲಾದ 100 ಮೀ. ಮತ್ತು 4×100 ಮೀ. ರಿಲೇ ತಂಡದಲ್ಲಿದ್ದರು. ರಿಲೇ ತಂಡದಲ್ಲಿ ದ್ಯುತಿಚಂದ್, ಹಿಮಾದಾಸ್ ಮತ್ತು ಸ್ರಬಾನಿ ನಂದ ಇನ್ನುಳಿದ ಮೂವರು. ಇದೀಗ ಧನಲಕ್ಷ್ಮೀ ಅವರನ್ನು ಕೈಬಿಟ್ಟ ಕಾರಣ ಎಂವಿ ಜಿಲಾ° ಅವರನ್ನು ರಿಲೇ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಎರಡು ಬಾರಿಯ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿರುವ ಐಶ್ವರ್ಯಾ ಟ್ರಿಪಲ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದರು.