ಬೆಂಗಳೂರು: ಕೋವಿಡ್- 19, ಲಾಕ್‌ಡೌನ್, ಪ್ರವಾಹದ ಪರಿಣಾಮವಾಗಿ ಜನ ಜೀವನ ಅಸ್ತವ್ಯಸ್ತವಾಗಿ ಆರ್ಥಿಕ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲೂ ರಾಜ್ಯ ಸರ್ಕಾರಕ್ಕೆ ವಾಣಿಜ್ಯ ತೆರಿಗೆ ಹಾಗೂ ಅಬಕಾರಿ ತೆರಿಗೆ ಮೂಲದ ಆದಾಯ ಸಂಗ್ರಹ ಚೇತರಿಕೆಯಾಗುತ್ತಿರುವುದು ಆಶಾದಾಯಕವಾಗಿದೆ.
ಪ್ರಸಕ್ತ 2020-21ನೇ ಆರ್ಥಿಕ ವರ್ಷದ 2ನೇ ತ್ತೈಮಾಸಿಕ ಪೂರ್ಣಗೊಂಡಿದ್ದು, ವಾಣಿಜ್ಯ ತೆರಿಗೆ ಮೂಲದಿಂದ 6 ತಿಂಗಳಲ್ಲಿ ಒಟ್ಟು 30,274 ಕೋಟಿ ರೂ. ಸಂಗ್ರಹವಾಗಿದೆ. ಸದಾ ಏರುಮುಖವಾಗಿಯೇ ಇರುತ್ತಿದ್ದ ವಾಣಿಜ್ಯ ತೆರಿಗೆ ಆದಾಯ ಸಂಗ್ರಹಕ್ಕೆ ಪ್ರಸಕ್ತ ವರ್ಷದ ಆರಂಭದಲ್ಲೇ ಕೋವಿಡ್- 19ರ ಬಿಸಿ ತೀವ್ರವಾಗಿಯೇ ತಟ್ಟಿತ್ತು. ಕಳೆದ ಏಪ್ರಿಲ್‌ನಲ್ಲಿ 3,566ಕೋಟಿ ರೂ., ಮೇ ತಿಂಗಳಲ್ಲಿ 2,667 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದ್ದು,ಆತಂಕಮೂಡಿಸಿತ್ತು. ಆದರೆ ಇದೀಗ ಚೇತರಿಕೆ ಕಾಣುತ್ತಿದೆ.
2019ರ ಸೆಪ್ಟೆಂಬರ್‌ನಲ್ಲಿ 4799.74 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು. ಆದರೆ ಆರ್ಥಿಕ ಸಂಕಷ್ಟದ ನಡುವೆಯೂ ಕಳೆದ ಸೆಪ್ಟೆಂಬರ್‌ನಲ್ಲಿ 4854.24 ಕೋಟಿ ರೂ. ಸಂಗ್ರಹವಾಗಿರುವುದು ಆರ್ಥಿಕ ಇಲಾಖೆ ಅಧಿಕಾರಿಗಳಲ್ಲಿ ತುಸು ಸಮಾಧಾನ ಮೂಡಿಸಿದೆ. ಪೆಟ್ರೋಲ್, ಡೀಸೆಲ್ ಮಾರಾಟದ ಮೇಲೆ ವಿಧಿಸುವ ಮಾರಾಟ ತೆರಿಗೆಯಿಂದ 1301 ಕೋಟಿ ರೂ. ಸಂಗ್ರಹವಾಗಿದ್ದು, ಒಟ್ಟಾರೆ ವಾಣಿಜ್ಯ ತೆರಿಗೆ ಆದಾಯ ಸಂಗ್ರಹ ನಿರೀಕ್ಷೆ ಹುಟ್ಟಿಸುವಂತಿದೆ.
ಅಬಕಾರಿ ತೆರಿಗೆ ಏರುಮುಖ: ಮತ್ತೂಂದು ಪ್ರಮುಖ ರಾಜಸ್ವ ಮೂಲವಾಗಿರುವ ಅಬಕಾರಿ ತೆರಿಗೆ ಆದಾಯ ಸಂಗ್ರಹವೂ ಕ್ರಮೇಣ ಏರುಮುಖವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಉತ್ತಮ ಕೊಡುಗೆ ನೀಡಲಾರಂಭಿಸಿದೆ. ಸೆಪೆ rಂಬರ್‌ನಲ್ಲಿ 1936 ಕೋಟಿರೂ. ತೆರಿಗೆ ಆದಾಯ ಸಂಗ್ರಹವಾಗಿದ್ದು, 2019ರ ಸೆಪ್ಟೆಂಬರ್‌ನ ಆದಾಯಕ್ಕೆ ಹೋಲಿಸಿದರೆ 187 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಏಪ್ರಿಲ್‌ತಿಂಗಳಲ್ಲಿ ವಹಿವಾಟು ಸಂಪೂರ್ಣ ಸ್ಥಗಿತಗೊಂಡು ಮಾಸಿಕ ತೆರಿಗೆ ಆದಾಯ ಶೂನ್ಯಕ್ಕೆ ಕುಸಿದಿತ್ತು.ಜೂನ್ ನಿಂದ ಹಂತ ಹಂತವಾಗಿ ಅಬಕಾರಿ ತೆರಿಗೆ ಆದಾಯ ಹೆಚ್ಚಾಗುತ್ತಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 9518 ಕೋಟಿರೂ.
ಸಂಗ್ರಹವಾಗಿದೆ.ಕಳೆದ ವರ್ಷ ಸೆಪ್ಟೆಂಬರ್ ಅಂತ್ಯಕ್ಕೆ10,880 ಕೋಟಿ ರೂ. ಸಂಗ್ರಹವಾಗಿತ್ತು.
ಇನ್ನಷ್ಟೇ ಚೇತರಿಕೆ ನಿರೀಕ್ಷೆ: ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹಾಗೂ ಸಾರಿಗೆ ತೆರಿಗೆ ಮೂಲದಿಂದ ಆದಾಯ ಸಂಗ್ರಹ ನಿರೀಕ್ಷಿತಪ್ರಮಾಣದಲ್ಲಿ ಚೇತರಿಕೆಕಾಣುತ್ತಿಲ್ಲ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದಿಂದ ಸೆಪ್ಟೆಂಬರ್‌ನಲ್ಲಿ 696.35 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ 181 ಕೋಟಿ ರೂ. ಆದಾಯ ಇಳಿಕೆಯಾಗಿದೆ. 2019ರಲ್ಲಿ ಎರಡನೇ ತ್ತೈಮಾಸಿಕ ಅಂತ್ಯಕ್ಕೆ 5530 ಕೋಟಿ ರೂ. ಸಂಗ್ರಹವಾಗಿದ್ದು, ಈ ಬಾರಿ ಇದೇ ಅವಧಿಯಲ್ಲಿ ಕೇವಲ 3562.94ಕೋಟಿ ರೂ. ಸಂಗ್ರಹವಾಗಿದೆ. ಮೋಟಾರು ವಾಹನ ತೆರಿಗೆ ಬಾಬ್ತಿಯಿಂದ ಮೊದಲಿಗೆ 7115 ಕೋಟಿ ರೂ. ಆದಾಯ ಗುರಿಯಿದ್ದರೂ ನಂತರ ಪರಿಷ್ಕರಿಸಿ 6616 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಆದರೆ ಈವರೆಗೆ ಸಂಗ್ರಹವಾಗಿರುವುದು 1845 ಕೋಟಿ ರೂ. ಮಾತ್ರ. ಸೆಪ್ಟೆಂಬರ್ ತಿಂಗಳಲ್ಲಿ 478 ಕೋಟಿ ರೂ. ಮೋಟಾರು ವಾಹನ ತೆರಿಗೆ ಮೂಲದಿಂದ ಸಂಗ್ರಹವಾಗಿದೆ. ಸಾರಿಗೆ ಹಾಗೂ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದ ಆದಾಯ ಇನ್ನಷ್ಟೇ ಚೇತರಿಕೆ ಕಾಣಬೇಕಿದೆ.
6 ತಿಂಗಳಲ್ಲಿ ಶೇ. 36ರಷ್ಟು ತೆರಿಗೆ ಸಂಗ್ರಹ: ಒಟ್ಟಾರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅರ್ಧ ಅವಧಿ ಕಳೆದರೂ ವಾರ್ಷಿಕ ತೆರಿಗೆ ಸಂಗ್ರಹ ಈವರೆಗಿನ ಗುರಿ ಸಾಧನೆ ಶೇ. 36 ಮಾತ್ರ. ಕೋವಿಡ್- 19, ಲಾಕ್‌ಡೌನ್, ಪ್ರವಾಹ ಇತರೆ ಕಾರಣಕ್ಕೆ ರಾಜ್ಯ ಸರ್ಕಾರದ ಸ್ವಂತ ತೆರಿಗೆ ಮೂಲದ ಆದಾಯ ಸಂಗ್ರಹದಲ್ಲಿ ಭಾರೀ ಖೋತಾ ಆಗಿದೆ. 2020-21ನೇ ಸಾಲಿನಲ್ಲಿ ನಾಲ್ಕೂ ಪ್ರಮುಖ ತೆರಿಗೆ ಮೂಲಗಳಿಂದ 1.24 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದು, ಆರು ತಿಂಗಳಲ್ಲಿ ಸಂಗ್ರಹವಾಗಿರುವುದು ಕೇವಲ 45,000ಕೋಟಿ ರೂ. ಇನ್ನುಳಿದ ಆರು ತಿಂಗಳಲ್ಲಿ ಸುಮಾರು 80,000 ಕೋಟಿ ರೂ. ತೆರಿಗೆ ಸಂಗ್ರಹವಾಗ ಬೇಕಿದ್ದು, ಗುರಿ ತಲುಪುವುದುಕಷ್ಟಸಾಧ್ಯವೆನಿಸಿದೆ.
ಎಂ.ಕೀರ್ತಿಪ್ರಸಾದ್