ಹಿರಿಯಡಕ: ಕಳೆದ 12 ವರ್ಷಗಳಿಂದ ಹಿರಿಯಡಕದಲ್ಲಿ ಕೃಷಿಯಲ್ಲಿ ವಿನೂತನ ಸಾಧನೆ ಮೂಲಕ ಹೆಸರು ಮಾಡಿದ ಮುಂಡುಜೆ ಸುರೇಶ್ ನಾಯಕ್ ಅವರು ಈ ಬಾರಿ ಬಣ್ಣ ಬಣ್ಣದ ಕಲ್ಲಂಗಡಿ ಬೆಳೆಯುವುದರ ಮೂಲಕ ಗಮನ ಸೆಳೆದಿದ್ದಾರೆ. ವರ್ಷಪ್ರತಿ ಬೆಳೆಯುವ ಕಲ್ಲಂಗಡಿ ಹಣ್ಣಿನ ಜತೆ ಈ ಬಾರಿ ಸುಮಾರು 1 ಎಕ್ರೆ ಜಾಗದಲ್ಲಿ ತೈವಾನ್ ಮೂಲದ ಆರೋಹಿ ಕಲ್ಲಂಗಡಿ ತಳಿಯನ್ನು ಬೆಳೆದಿದ್ದಾರೆ.
ಹೊರಭಾಗದಲ್ಲಿ ಕಪ್ಪು ಬಣ್ಣವಿದ್ದ ಕಲ್ಲಂಗಡಿ ಒಳಭಾಗದಲ್ಲಿ ಹಳದಿ ಬಣ್ಣ ಹಾಗೂ ಹೊರಭಾಗದಲ್ಲಿ ಹಳದಿ ಬಣ್ಣ ವಿರುವ ಕಲ್ಲಂಗಡಿ ಒಳ ಭಾಗದಲ್ಲಿ ಕೆಂಪು ಬಣ್ಣ ನೋಡುಗರನ್ನು ಆಕರ್ಷಿಸುತ್ತಿದೆ. ಬೆಳೆ ಕಟಾವು ಮಾಡಿ ಬರುತ್ತಿದ್ದಂತೆ ಜನರ ಬೇಡಿಕೆ ಹೆಚ್ಚಾಗುತ್ತಿದ್ದು ಹಿರಿಯಡಕದಲ್ಲಿ ಅಳವಡಿಸಿದ ಸ್ಟಾಲ್‌ಗೆ ನೂರಾರು ಜನ ಆಗಮಿಸಿ ಬಣ್ಣ ಬಣ್ಣದ ಕಲ್ಲಂಗಡಿ ಹಣ್ಣನ್ನು ಸವಿದು ಮನೆಗೆ ಕೊಂಡು ಹೋಗುತ್ತಿದ್ದಾರೆ.
ಯಾವುದೇ ರಾಸಾಯನಿಕ ಬಳಸದೆ ಆಧುನಿಕ ತಂತ್ರಜ್ಞಾನದೊಂದಿಗೆ ವಿಭಿನ್ನ ರೀತಿ ಕೃಷಿ ಮೂಲಕ ಕೃಷಿ ಕ್ಷೇತ್ರದಲ್ಲಿ ವಿನೂತನ ಸಾಧನೆ ಮಾಡುತ್ತಿರುವ ಸುರೇಶ ನಾಯಕ್ ಅವರು ಕಳೆದ 2ವರ್ಷದ ಹಿಂದೆ ಸುಮಾರು 20 ಎಕ್ರೆ ಜಾಗದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದು ಆ ಬಾರಿ ಅಕಾಲಿಕ ಮಳೆಯ ಕಾರಣ ಭಾರೀ ನಷ್ಟ ಅನುಭವಿಸಿದ್ದರು. ಈ ಬಾರಿ ಒಟ್ಟು 6 ಎಕ್ರೆ ಜಾಗದಲ್ಲಿ ಒಟ್ಟು ನಾಲ್ಕು ತಳಿಗಳ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದು ಬಣ್ಣ ಬಣ್ಣದ ಹಣ್ಣಿಗೆ ಭಾರೀ ಬೇಡಿಕೆ ಬಂದಿದೆ. ಹಿರಿಯಡಕದ ದೇವಸ್ಥಾನದ ಎದುರು ಬೃಹತ್ ಸ್ಟಾಲ್‌ನಲ್ಲಿ ಬಣ್ಣ ಬಣ್ಣದ ಕಲ್ಲಂಗಡಿ ಜತೆ ಸೌತೆಕಾಯಿ, ಹೀರೆ ಕಾಯಿ ಮೊದಲಾದ ತರಕಾರಿಗಳನ್ನು ಬೆಳೆದು ಮಾರಾಟ ಮಾಡುತ್ತಿದ್ದಾರೆ. ತಿಂದು ರುಚಿ ನೋಡಿ… ಬಣ್ಣದ ಕಲ್ಲಂಗಡಿ ನೋಡಿ ಜನ ಬೆರಗಾಗಿದ್ದಾರೆ.
ತೈವಾನ್ ಬಣ್ಣದ ಕಲ್ಲಂಗಡಿ ಕೆಜಿಗೆ 30 ರೂ. ಹಾಗೂ ಸಾಮನ್ಯ ತಳಿ ಕೆ.ಜಿ.ಗೆ 15ರಿಂದ 20 ರೂ.ಗೆ ಮಾರಾಟವಾಗುತ್ತಿದೆ. ಸ್ಟಾಲ್‌ಗೆ ಆಗಮಿಸಿದವರಿಗೆ ಹಳದಿ ಹಾಗೂ ಕೆಂಪು ಬಣ್ಣದ ಕಲ್ಲಂಗಡಿ ಹಣ್ಣನ್ನು ತುಂಡರಿಸಿ ನೀಡುತ್ತಿದ್ದು ರುಚಿ ನೋಡಿದ ಜನರು ಕೆಜಿ ಕಟ್ಟಲೆ ಮನೆಗೆ ಕೊಂಡು ಹೋಗುತ್ತಿದ್ದಾರೆ. ಇದರ ಜತೆಗೆ ವಿವಿಧ ತಳಿಯ ಹಲಸಿನ ಹಣ್ಣು ಕೂಡ ಸವಿಯಲು ನೀಡುತ್ತಿದ್ದು ಜನ ಮುಗಿ ಬಿದ್ದಿದ್ದಾರೆ. ಹೊಸಮಾರುಕಟ್ಟೆ ಕಂಡುಕೊಂಡ ಕೃಷಿಕ ಕಳೆದ ಹತ್ತು ವರ್ಷಗಳಿಂದ ಕೃಷಿಯಲ್ಲಿ ವಿನೂತನ ಪ್ರಯೋಗಗಳನ್ನು ಮಾಡಿದ ಸುರೇಶ್ ನಾಯಕ್ ಹಿರಿಯಡದಲ್ಲಿ ಕಳೆದ 2 ವರ್ಷಗಳಿಂದ ಬೃಹತ್ ಮಳಿಗೆಯನ್ನು ತೆರೆದು ತಾನು ಬೆಳೆದ ಕಲ್ಲಂಗಡಿ ಹಾಗೂ ತರಕಾರಿಯನ್ನು ಮತ್ತು ಇತರ ರೈತರು ಬೆಳೆದ ತರಕಾರಿ ಹಣ್ಣು ಹಂಪಲನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿದೆ.
ಜನರಲ್ಲಿ ಅಚ್ಚರಿ ಮೂಡಿಸಿದೆ
ಮೊಬೈಲ್ ವಾಟ್ಸಪ್ ಗಳಲ್ಲಿ ಬಣ್ಣ ಬಣ್ಣದ ಕಲ್ಲಂಗಡಿ ಹಣ್ಣಿನ ಬಗ್ಗೆ ಪ್ರಚಾರವಾಗುತ್ತಿದ್ದಂತೆ ಜನ ಸ್ಟಾಲ್‌ಗೆ ಬರುತ್ತಿದ್ದು ಕೆಂಪು ಹಳದಿ ಮಿಶ್ರಿತ ಕಲ್ಲಂಗಡಿ ಹಣ್ಣು ನೋಡಿ ಅಚ್ಚರಿಗೊಂಡಿದ್ದಾರೆ. ಮೊದಲ ಬಾರಿಗೆ ಬಣ್ಣದ ಕಲ್ಲಂಗಡಿ ನೋಡಿದ ಜನ ಹಣ್ಣಿನ ರುಚಿ ಸವಿದು ಸಂತೋಷ ಪಟ್ಟಿದ್ದಾರೆ.
-ಸುರೇಶ್ ನಾಯಕ್ ಮುಂಡುಜೆ, ಪ್ರಗತಿಪರ ಕೃಷಿಕರು ಹಿರಿಯಡಕ
~ಉದಯ್ ಕುಮಾರ್ ಶೆಟ್ಟಿ ಹೆಬ್ರಿ