ಬೆಳ್ತಂಗಡಿ : ಶತಮಾನಗಳ ಹಿಂದಿನಿಂದ ಕಾಡಿನ ಮಧ್ಯೆ ವಾಸವಾಗಿ ಕಷ್ಟಪಟ್ಟು ಕೃಷಿ ಮಾಡಿ ಜೀವನ ಸಾಗಿಸಲು ಯತ್ನಿಸಿದರೂ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟಕ್ಕೊಳಗಾದರೂ ಜೀವನ ನಿರ್ವಹಿಸುತ್ತಿದ್ದ ನೆರಿಯ ಕಾಲನಿ ನಿವಾಸಿಗಳು ಸುಖದಿಂದ ಬದುಕಬೇಕು ಎಂಬ ಉದ್ದೇಶದಿಂದ ಸುಮಾರು 11.65 ಕೋ.ರೂ. ಗಳ ಅನುದಾನವನ್ನು ಮಂಜೂರುಗೊಳಿಸಲಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ಮಂಗಳವಾರ ನೆರಿಯದ ಕೋಲೋಡಿಯಲ್ಲಿ 5.30 ಕಿ.ಮೀ. ಕಾಂಕ್ರೀಟ್ ರಸ್ತೆ ಹಾಗೂ 7 ಸೇತುವೆಗಳ ನಿರ್ಮಾಣದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮಂಜೂರಾದ 11.65 ಕೋ.ರೂ.ಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಇಲ್ಲಿನ ಸುಮಾರು 88 ಕುಟುಂಬಗಳು ಶತಮಾನಗಳಿಂದ ವಾಸವಾಗಿ ದ್ದರೂ 1974ರ ಭೂ ಮಸೂದೆ ಕಾಯ್ದೆಯಿಂದ ಜಾಗ ಪಡೆದರೂ ಮೂಲ ಸೌಕರ್ಯಗಳಿಂದ ವಂಚಿತ ರಾಗಿದ್ದರು. ಅನಾರೋಗ್ಯಕ್ಕೊಳಗಾದರೆ 7.5 ಕಿಲೋ ಮೀಟರ್ ದೂರಕ್ಕೆ ಹೆಗಲಲ್ಲೇ ಹೊತ್ತು ತರಬೇಕಾದ ಪರಿಸ್ಥಿತಿ ಇತ್ತು. ಕಾಡುಪ್ರಾಣಿಗಳ ಹಾವಳಿ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಿಸುತ್ತಿದ್ದು ಇದೆಲ್ಲಕ್ಕೆ ಪರಿಹಾರ ಸಿಗಬೇಕೆಂಬ ಉದ್ದೇಶ ನನ್ನದಾಗಿದ್ದು ಅದಕ್ಕಾಗಿ ವಿಶೇಷ ಮುತುವರ್ಜಿಯಿಂದ ಅನುದಾನ ಮಂಜೂರುಗೊಳಿಸಿದ್ದೇನೆ ಎಂದು ಅವರು ಹೇಳಿದರು.
ಜಿಲ್ಲೆಯ ಇತಿಹಾಸದಲ್ಲಿ ಇದು ಈ ಬಾರಿಯ ಹೆಚ್ಚಿನ ಅನುದಾನ ಈ ಪ್ರದೇಶಕ್ಕೆ ಸಿಕ್ಕಿದ್ದು ಇನ್ನಿತರ ಮೂಲಸೌಕರ್ಯಕ್ಕಾಗಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಂಪರ್ಕಿಸುವುದಾಗಿ ತಿಳಿಸಿದರು.
ಜಿ.ಪಂ. ಸದಸ್ಯೆ ನಮಿತಾ, ತಾ. ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ತಾ. ಪಂ. ಸದಸ್ಯೆ ವಿ. ಟಿ.ಸೆಬಾಸ್ಟಿಯನ್, ಪೂವಪ್ಪ ಪೂಜಾರಿ ಶುಭಹಾರೈಸಿದರು. ನೆರಿಯ ತಾ. ಪಂ. ಅಧ್ಯಕ್ಷೆ ಪಿ. ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಗಫೂರ್, ಗ್ರೇಸಿಯನ್ ವೇಗಸ್, ಗುತ್ತಿಗೆದಾರ ಸುಧಾಕರ ಶೆಟ್ಟಿ, ಎಂಜಿನಿಯರ್ ಜಯಾನಂದ, ಬಿ. ಕರಿಯಾ, ಪೂವಪ್ಪ ಪುದುವೆಟ್ಟು, ಗ್ರಾ.ಪಂ. ಅಧ್ಯಕ್ಷೆ ನೀಲಮ್ಮ ಹಾಗೂ ನೆರಿಯ ಹಾಗೂ ಪುದುವೆಟ್ಟು ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೊಲೋಡಿ ಕುಟುಂಬಗಳು ಶಾಸಕ ಕೆ. ವಸಂತ ಬಂಗೇರ ಅವರನ್ನು ಸಮ್ಮಾನಿಸಿದರು. ಕೊಲೋಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧಾಕರ್ ಸ್ವಾಗತಿಸಿ, ಎಲ್ಯಣ್ಣ ಮಲೆಕುಡಿಯ ವಂದಿಸಿದರು. ನೆರಿಯ ಗ್ರಾ.ಪಂ. ಸದಸ್ಯ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.
ಶಾಸಕರಿಂದ ಸ್ಪಂದನೆ
1975ರಿಂದ ಇಲ್ಲಿ ಬದುಕುತ್ತಿದ್ದು ಗೌರವಯುತ ಬದುಕಿಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು ಯಾರೂ ಸ್ಪಂದಿಸಿರಲಿಲ್ಲ. ಶಾಸಕರು ಎರಡು ವರ್ಷಗಳ ಹಿಂದೆ ರಸ್ತೆಯ ಭರವಸೆ ನೀಡಿದ್ದರು. ಇದೀಗ ಈಡೇರಿಸಿದ್ದಾರೆ. ಬಡವರ ನೋವನ್ನು ಅರಿತು ಪರಿಹಾರ ಒದಗಿಸಿದ್ದಾರೆ .
– ಸುಧಾಕರ ಮಲೆಕುಡಿಯ, ಕೋಲೋಡಿ.
ವರ್ಷದಲ್ಲಿ ಪೂರ್ಣ
ಬೆಳ್ತಂಗಡಿ ತಾಲೂಕಿನಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಈ ಬಾರಿ 20.89 ಕಿ.ಮೀ. ರಸ್ತೆ ನಿರ್ಮಾಣಕ್ಕೆ 38.56 ಕೋ.ರೂ. ಅನುದಾನ ಮಂಜೂರಾಗಿ ಕಾಮಗಾರಿ ಆರಂಭಗೊಂಡಿದ್ದು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ.
– ಕೆ. ವಸಂತ ಬಂಗೇರ,
ಶಾಸಕ,ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿನಿಗ ಮದ ಅಧ್ಯಕ್ಷ