ಪ್ರತಿದಿನ ಎಂಟು ಗಂಟೆಯಾದ್ರೂ ಏಳದ ನಾನು, ಅಂದು ಐದು ಗಂಟೆಗೇ ಎದ್ದು ಓದಲು ಪ್ರಾರಂಭಿಸಿದ್ದೆ. ನನ್ನ ಈ ಅವಸ್ಥೆ ನೋಡಿ ಅಣ್ಣ, “”ಅಮ್ಮ… ಮೆಲೆಗ್ ದಾದ ಆಂಡ್‌ಯೆ?” (ಅಮ್ಮ… ಇವಳಿಗೇನಾಯ್ತು?) ಎಂದು ಅಮ್ಮನಲ್ಲಿ ಕೇಳುವುದು ನನ್ನ ಕಿವಿಗೆ ಬಿತ್ತು. ಇದಕ್ಕೆ ಉತ್ತರವಾಗಿ ಅಮ್ಮ “”ಇವತ್ತು ಕಾಲೇಜಿನ ಮೊದಲ ದಿನ ಅಲ್ವಾ , ಇನ್ನು ಒಂದು ವಾರ ಐದು ಗಂಟೆಗೆ ಏಳ್ತಾಳೆ. ಆಮೇಲೆ ಅದೇ ರಾಗ, ಅದೇ ತಾಳ” ಎಂದು ಟೀಕಿಸಿದರು. “”ಹಾಗೇನಿಲ್ಲ , ಈ ವರ್ಷ ನಾನು ಸೆಕೆಂಡ್ ಪಿಯುಸಿ, ಚೆನ್ನಾಗಿ ಓದೆನೆ. ಬೇಕಾದ್ರೆ ನೀವೇ ನೋಡಿ, ಇನ್ನು ನಾನು ದಿನಾ ಐದು ಗಂಟೆಗೇನೆ ಏಳ್ಳೋದು. ಹೋದ ವರ್ಷದ ಹಾಗೆ ಅಲ್ಲ. ನನ್ನ ಮಾರ್ಕ್ಸ್ ನೋಡಿ ನಿಮ್ಗೆ ಗೊತ್ತಾಗುತ್ತೆ” ಅಂತೆಲ್ಲಾ ಭಾಷಣ ಬಿಗಿದೆ.
ಪುಸ್ತಕ ಹಿಡಿದು ಅಂಗಳದಲ್ಲಿ ಬಂದು ಕುಳಿತೆ. ಬರೀ ಪುಸ್ತಕ ಮಾತ್ರ ಅಲ್ಲ, ಜೊತೆಗೆ ನನ್ನ ಆಪ್ತಮಿತ್ರನಾದ ಮೊಬೈಲನ್ನೂ ಕೊಂಡೊಯ್ದೆ. “ನೀನೆಲ್ಲೋ ನಾನಲ್ಲೆ… ಈ ಜೀವ ನಿನ್ನಲ್ಲೆ’ ಎಂಬ ಹಾಡಿನ ಸಾರದಂತೆ, ನಾನು ಹೋದಲ್ಲೆಲ್ಲಾ ಈ ಮೊಬೈಲ್ ಪ್ರಿಯಕರನಂತೆ ನನ್ನೊಂದಿಗೇ ಇರುತ್ತದೆ. ಇನ್ನೇನು ಪುಸ್ತಕ ತೆರೀಬೇಕು ಅಷ್ಟರಲ್ಲಿ ನನ್ನ ಪ್ರಿಯಕರ ಶಿಳ್ಳೆ ಹೊಡೆದ. ಅಂದರೆ ಮೊಬೈಲ್‌ಗೆ ಒಂದು ಮೆಸೇಜ್ ಬಂತು. ತೆರೆಯಬೇಕಾಗಿದ್ದ ಪುಸ್ತಕ ತನ್ನಷ್ಟಕ್ಕೇ ದೂರ ಸರಿಯಿತು. ಮೊಬೈಲ್‌ನ್ನು ಕೈಗೆತ್ತಿಕೊಂಡು ನೋಡಿದಾಗ, ಕಾಲೇಜಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ 102 ಸಂದೇಶಗಳ ಸುರಿಮಳೆಯೇ ಇತ್ತು. ನನ್ನಿಂದ ಕೆಮಿಸ್ಟ್ರಿಯ ಎರಡು ಚಾಪ್ಟರ್ ಓದದೇ ಕೂರಲು ಆದೀತು. ಆದರೆ ವಾಟ್ಸಾಪ್‌ನ ಮೆಸೇಜ್‌ಗಳನ್ನು ಓದದೇ ಕೂರಲು ಖಂಡಿತ ಸಾಧ್ಯವಿಲ್ಲ. ತೆರೆದು ನೋಡಿದಾಗ ಅಪೇಕ್ಷಾಳ ಸಂದೇಶ ಹೀಗಿತ್ತು. “ಇನಿ ಕಾಲೇಜ್ ಸ್ಟಾರ್ಟ್. ಮಾತೆರ್ಲ ಬರ್ಪರತಾ?’ (ಇವತ್ತು ಕಾಲೇಜ್ ಸ್ಟಾರ್ಟ್. ಎಲ್ಲಾರೂ ಬರ್ತೀರಲ್ಲಾ?) ಇದಕ್ಕೆ ಉತ್ತರವಾಗಿ ನಿಧಿಯ ಸಂಭ್ರಮಾಚರಣೆಯ ಇಮೋಜಿಗಳು ರಾರಾಜಿಸಿದ್ದವು. ಹೀಗೆ ಎಲ್ಲರ ಮೆಸೇಜ್‌ಗಳನ್ನು ಓದುತ್ತಾ ಹೋದೆ. ಅದರಲ್ಲಿ ರಚನಾಳ ಒಂದು ಮೆಸೇಜ್ ನನ್ನ ಗಮನ ಸೆಳೆಯಿತು. ಅದೇನೆಂದರೆ, “ಈ ವರ್ಷ ಇಲೆಕ್ಷನ್‌ಗೆ ಯಾರು ನಿಲ್ಲುವವರು?’ ಇದನ್ನು ಓದಿದ ತಕ್ಷಣ, ಹೋದ ವರ್ಷದ ಕಾಲೇಜು ಚುನಾವಣಾ ಸಂದರ್ಭಗಳು ಸ್ಮತಿಪಟಲದಲ್ಲೊಮ್ಮೆ ಶಾರ್ಟ್ ಫಿಲ್ಮ್ನಂತೆ ಓಡಿದವು.
ಅದು ನಮಗೆ ಕಾಲೇಜಿನಲ್ಲಿ ಮೊದಲ ಮತದಾನವಾಗಿತ್ತು. ವಿಜ್ಞಾನ ವಿಭಾಗದಲ್ಲಿ ಚುನಾವಣಾ ಸ್ಪರ್ಧಿಗಳು ಆಕಾಶ್ ಮತ್ತು ಅಂಕಿತಾ. ಇಡೀ ದಿನ ಕಾಲೇಜಿನಲ್ಲಿ “ಓಟ್ ಫಾರ್ ಆಕಾಶ್’, “ಓಟ್ ಫಾರ್ ಅಂಕಿತಾ’ ಎಂಬ ಮಂತ್ರ ಮಾತ್ರ ಕೇಳ್ತಿತ್ತು. ಕಾಲೇಜು ಚುನಾವಣೆ ಯಾವ ವಿಧಾನಸಭಾ ಚುನಾವಣೆಗಿಂತಲೂ ಕಡಿಮೆಯಲ್ಲ ಎಂಬ ರೀತಿಯಲ್ಲಿ ಪ್ರಚಾರ ಮಾಡ್ತಿದ್ದರು ನಮ್ಮ ಸೀನಿಯರ್. “ನಿಮಗೆ ಸಮೋಸ ಕೊಡಿಸ್ತೇವೆ’, “ಕಾಲೇಜ್ ಡೇಗೆ ಡಿಜೆ ಹಾಕಿಸ್ತೇವೆ’ ಎಂದೆಲ್ಲಾ ಆಮಿಷ ಒಡ್ಡಲು ಮರೆಯದ ಕಿಲಾಡಿಗಳು. ಮತನಾದ ನಡೆಯಿತು. ವಿಜ್ಞಾನ ವಿಭಾಗದ ಕಾರ್ಯದರ್ಶಿಯಾಗಿ ಆಯ್ಕೆಯಾದದ್ದು ಆಕಾಶ್. ಇಡೀ ವರ್ಷ ನಮ್ಮ ವಿಜ್ಞಾನ ವಿಭಾಗದ ಒಳಿತಿಗಾಗಿ ಶ್ರಮಿಸಿ, ತಮ್ಮ ಜವಾಬ್ದಾರಿಯನ್ನು ಸುಸೂತ್ರವಾಗಿ ಮುಗಿಸಿದ್ದರು ಆಕಾಶ್.
ಹಾಗಾದರೆ, ಈ ವರ್ಷ ಯಾರು ಎಲೆಕ್ಷನ್‌ಗೆ ನಿಲ್ಲುವವರು? ಎಂದು ಯೋಚಿಸುತ್ತ ಕುಳಿತೆ. ಅಷ್ಟರಲ್ಲಿ ಅಮ್ಮ “ಇವತ್ತು ಓದಿದ್ದು ಸಾಕು! ಹೀಗೆ ಓದಿದ್ರೆ ನೀನೇ ರ್‍ಯಾಂಕ್ ಬರ್ತೀಯಾ” ಅಂತ ವ್ಯಂಗ್ಯವಾಡಿದರು. “”ಇಲ್ಲಮ್ಮ, ಜೀವಿತಾ ಕಾಲ್ ಮಾಡಿದ್ಲು, ಕಾಲೇಜಿಗೆ ಬೇಗ ಹೋಗ್ಬೇಕಂತೆ” ಅಂತ ಬೊಗಳೆ ಬಿಟ್ಟು ತಂದ ಪುಸ್ತಕವನ್ನು ಅದರ ಮೂಲ ಜಾಗದಲ್ಲೇ ಇಟ್ಟು , ಕಾಲೇಜಿಗೆ ಹೋಗಲು ತಯಾರಾದೆ.
ಶಿವರಂಜನಿ ದ್ವಿತೀಯ ಪಿಯುಸಿ ಗೋವಿಂದದಾಸ ಪ.ಪೂ. ಕಾಲೇಜು, ಸುರತ್ಕಲ್