Advertisement

ಚಳಿ ಹೆಚ್ಚಳ: ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ಇರಲಿ

05:55 PM Dec 21, 2021 | Team Udayavani |

ಮಹಾನಗರ: ಕೆಲವು ದಿನಗಳಿಗೆ ಹೋಲಿಸಿದರೆ ನಗರದಲ್ಲಿ ವಾತಾವರಣ ಇದೀಗ ಬದಲಾಗಿದ್ದು, ಬೆಳಗ್ಗಿನ ಜಾವ ಚಳಿಯ ವಾತಾವರಣ ಹೆಚ್ಚಾಗುತ್ತಿದೆ.

Advertisement

ವಾಡಿಕೆಯಂತೆ ನವೆಂಬರ್‌ ಅಂತ್ಯ ದಿಂದಲೇ ಚಳಿಗಾಲ ಶುರುವಾಗುತ್ತದೆ. ಆದರೆ ವಾತಾವರಣದಲ್ಲಿನ ಏರುಪೇರು ಕಾರಣದಿಂದಾಗಿ ಇಷ್ಟುದಿನ ಚಳಿಯೇ ಇರಲಿಲ್ಲ. ಆದರೆ, ಇದೀಗ, ಮುಂಜಾನೆ ಚಳಿಯ ತೀವ್ರತೆ ಹೆಚ್ಚುತ್ತಿದೆ. ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶದಲ್ಲಿ ಸಾಕಷ್ಟು ಏರಿಳಿತ ಉಂಟಾಗುತ್ತಿದೆ. ಬೆಳಗ್ಗಿನ ಹೊತ್ತು ಬಿಸಿಲು ಇದ್ದರೂ ಮಧ್ಯಾಹ್ನದವರೆಗೆ ವಾತಾವರಣ ಸ್ವಲ್ಪ ಮಟ್ಟಿಗೆ ತಣ್ಣಗಿರುತ್ತದೆ. ಇನ್ನು ರಾತ್ರಿ ಹೊತ್ತಿನಲ್ಲಿ ಇಬ್ಬನಿ ಬೀಳಲು ಶುರುವಾಗಿದ್ದು, ಜ್ವರ, ಶೀತ-ಕೆಮ್ಮು ಮುಂತಾದ ಸಾಂಕ್ರಾಮಿಕ ರೋಗಬಾಧೆಯ ಭೀತಿ ಎದುರಾಗಿದೆ.

ಚಳಿಗಾಲದಲ್ಲಿ ತಾಪಮಾನ ವೈಪರೀತ್ಯ ಉಂಟಾಗುವುದರಿಂದ ಬ್ಯಾಕ್ಟೀರಿಯಾ, ವೈರಸ್‌ಗಳ ಬೆಳವಣಿಗೆ ಹೆಚ್ಚಾಗಿ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ. ಇದರಿಂದಾಗಿ, ನಮಗೆ ನೆಗಡಿ, ಕೆಮ್ಮು ಗಂಟಲು ನೋವು, ಉಸಿರಾಟದ ಸಮಸ್ಯೆ, ಮೂಗು ಕಟ್ಟುವಿಕೆ, ಎದೆಬಿಗಿತ, ಚರ್ಮ ಒಣಗುವಿಕೆ, ಅಲರ್ಜಿ, ಅಸ್ತಮಾ ಹೀಗೆ ವಿವಿಧ ಸಮಸ್ಯೆಗಳು ಉದ್ಭವಿಸಬಹುದು. ಚಳಿಗಾಲದಲ್ಲಿ ದೊಡ್ಡವರಿಗಿಂತ ಮಕ್ಕಳಿಗೆ ವೈರಾಣು ಸೋಂಕು, ನೆಗಡಿ, ಶೀತ, ನ್ಯೂಮೋ ನಿಯಾ ಸಮಸ್ಯೆ ಹೆಚ್ಚು. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಅನುಸರಿಸುವುದು ಮುಖ್ಯ.

ನಾರಿನ ಅಂಶಇರುವ ಆಹಾರ ಒಳ್ಳೆಯದು
ಚಳಿಗಾಲದಲ್ಲಿ ಹಸಿವು ಹೆಚ್ಚು. ಈ ವೇಳೆ ಹುಳಿಯಿರುವ ತರಕಾರಿ, ಸೌತೆಕಾಯಿ, ಕುಂಬಳಕಾಯಿ, ಸೊರೆಕಾಯಿ ಒಳ್ಳೆಯದು.

ನಾರಿನ ಅಂಶ ಇರುವ ಆಹಾರಕ್ಕೆ ಆದ್ಯತೆ ನೀಡಬೇಕು. ಮಾಂಸ, ಮೊಟ್ಟೆ ಕೂಡ ಉತ್ತಮ. ಹಣ್ಣುಗಳಲ್ಲಿ ದ್ರಾಕ್ಷಿ, ಕಿತ್ತಳೆ, ಮುಸುಂಬಿ, ನೆಲ್ಲಿಕಾಯಿ ಆಹಾರ ಬೇಗ ಜೀರ್ಣವಾಗುತ್ತದೆ. ಚಳಿ ವೇಳೆ ದೇಹದ ಉಷ್ಣತೆ ದೇಹದೊಳಗೇ ಇರುತ್ತದೆ. ಬೆಳಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ವೇಳೆ 4ರಿಂದ 5 ಲೋಟ ಬಿಸಿ ನೀರು ಕುಡಿಯಿರಿ. ಶುಂಠಿ, ಕಾಳುಮೆಣಸು ಜೀರ್ಣ ಕ್ರಿಯೆ ಸರಾಗ ಮಾಡಿ ದೇಹವನ್ನು ರಕ್ಷಿಸುತ್ತದೆ. ಬಾದಾಮಿ, ಆಕ್ರೂಟ್‌, ಬ್ಲ್ಯಾಕ್ ಚೆರ್ರಿ ಒಳ್ಳೆಯದು. ಇದರಲ್ಲಿ ಪ್ರೊಟೀನ್‌, ವಿಟಮಿನ್‌ ಇರುತ್ತದೆ.
-ಡಾ| ಹರಿಪ್ರಸಾದ್‌ ಸುವರ್ಣ,
ವೈದ್ಯರು, ಮಂಗಳೂರು

Advertisement

ಚಳಿಗಾಲದಲ್ಲಿ ಕೈಗೊಳ್ಳಬೇಕಾದ ಕ್ರಮ
-ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಹೆಚ್ಚಾಗಿ ಬೆಚ್ಚಗಿನ ಉಡುಪುಗಳನ್ನು ಧರಿಸಿ.
-ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ
-ಕುದಿಸಿ ಆರಿಸಿದ ನೀರನ್ನು ಉಪಯೋಗಿಸಿ
-ಚಳಿಗಾಲದಲ್ಲಿ ಸಂಧಿವಾತವನ್ನು ತಪ್ಪಿಸಲು ದೇಹ ಬೆಚ್ಚಗಿರುವಂತೆ ನೋಡಿಕೊಳ್ಳಿ, ದಿನನಿತ್ಯ ವ್ಯಾಯಾಮ ಮಾಡಿ
-ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಿ.
-ಅಸೌಖ್ಯ, ಜ್ವರ ಇದ್ದರೆ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ

Advertisement

Udayavani is now on Telegram. Click here to join our channel and stay updated with the latest news.

Next