Advertisement

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ

12:36 AM Dec 24, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಸಭಾಂಗಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಸದಸ್ಯ ಸಿ.ಟಿ. ರವಿ ನಡುವೆ ನಡೆದ ವಾಗ್ವಾದ ಹಾಗೂ ಅನಂತರದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ಸಭಾಪತಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.

Advertisement

ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅವರ ಅಣತಿಯಂತೆ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರವಾಣಿ ಕರೆ ಮಾಡಿದ್ದ ರಾಜಭವನದ ಅಧಿಕಾರಿಗಳು ಪರಿಷತ್ತಿನಲ್ಲಿ ನಡೆದ ಘಟನೆ ಬಗ್ಗೆ ವಿವರಣೆ ಕೇಳಿದ್ದಾರೆ.

ಹೊರಟ್ಟಿ ಉತ್ತರವೇನು?
ಬೆಳಗಾವಿಯ ಸುವರ್ಣಸೌಧದಲ್ಲಿ ಡಿ. 9ರಿಂದ 19ರ ವರೆಗೆ ನಡೆದ ಚಳಿಗಾಲ ಅಧಿವೇಶನದ ಕೊನೆಯ ದಿನವಾದ ಗುರುವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಮುಗಿದ ಬಳಿಕ ಆಡಳಿತ-ವಿಪಕ್ಷ ಸದಸ್ಯರ ನಡುವೆ ಡಾ| ಬಿ.ಆರ್‌. ಅಂಬೇಡ್ಕರ್‌ ಕುರಿತು ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ನೀಡಿದ್ದ ಹೇಳಿಕೆ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು. ಸಾಕಷ್ಟು ಗದ್ದಲ ಏರ್ಪಟ್ಟಿದ್ದರಿಂದ ಕಲಾಪವನ್ನು ಮುಂದೂಡಿದ್ದೆ. ಈ ಸಂದರ್ಭದಲ್ಲಿ ಸಭಾಂಗಣದೊಳಗೆ ಏನಾಯಿತು ಎಂಬುದು ಗೊತ್ತಿಲ್ಲ.

ಅಷ್ಟರಲ್ಲಿ ಸಚಿವರೂ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ನನ್ನ ಕೊಠಡಿಗೆ ಬಂದು ಸಿ.ಟಿ. ರವಿ ವಿರುದ್ಧ ದೂರು ಕೊಟ್ಟರು. ಅದೇ ರೀತಿ ಪ್ರತಿಪಕ್ಷ ಸದಸ್ಯರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ದೂರು ನೀಡಿದ್ದು, ಅದರೊಂದಿಗೆ ಆಡಳಿತ ಪಕ್ಷದ ಆರೋಪಗಳಿಗೂ ಸ್ಪಷ್ಟನೆ ಕೊಟ್ಟರು. ಎರಡನ್ನೂ ಪರಾಮರ್ಶಿಸಿದ ಅನಂತರ, ಅವರವರ ಆತ್ಮಸಾಕ್ಷಿಗೆ ಬಿಟ್ಟು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ ಎಂಬ ವಿವರವನ್ನು ದೂರವಾಣಿ ಮೂಲಕವೇ ಸಭಾಪತಿ ಹೊರಟ್ಟಿ ಅವರು ನೀಡಿದ್ದಾರೆ.

ಸಿಎಂ ಗಮನಕ್ಕೆ ತಂದು ಮಾಹಿತಿ
ಅಷ್ಟೇ ಅಲ್ಲದೆ, ರಾಜಭವನದಿಂದ ತಮಗೆ ದೂರವಾಣಿ ಕರೆ ಬಂದಿದ್ದು, ಘಟನೆಯ ಬಗ್ಗೆ ಮಾಹಿತಿ ಕೇಳುತ್ತಿರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಿಳಿಸಿದ ಹೊರಟ್ಟಿ ಅವರು, ಸಿಎಂ ಗಮನಕ್ಕೆ ತಂದ ಅನಂತರವೇ ರಾಜಭವನಕ್ಕೆ ವಿವರಣೆ ನೀಡಿದ್ದಾರೆ. ಒಟ್ಟಾರೆ ಸದನ-ಕದನವೀಗ ರಾಜಭವನದ ಅಂಗಳ ತಲುಪಿದ್ದು, ಈ ಪ್ರಕರಣದಲ್ಲಿ ರಾಜ್ಯಪಾಲರು ಯಾವ ನಡೆ ಇಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next