ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ಮನಸ್ಸಿನಲ್ಲಿ ಕೊಳೆ ತುಂಬಿಕೊಂಡಿದೆ. ಅವರು ನಾಲಿಗೆಯನ್ನು ಫೆನಾಯಿಲ್ ಹಾಕಿ ತೊಳೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ರವಿ ಅವರ ಮನಸ್ಸಿನ ಕೊಳಕು ಎಷ್ಟು ತೊಳೆದರೂ ಹೋಗಲ್ಲ. ಮೈ ಮೇಲಿನ ಕೊಳಕು ತೊಳೆಯಬಹುದು. ಆದರೆ, ಮನಸ್ಸಿಗೆ ಹಚ್ಚಿರುವ ಕೊಳಕು ತೊಳೆಯಲು ಸಾಧ್ಯವಿಲ್ಲ ಎಂಬುದಾಗಿ ಹಿರಿಯರೊಬ್ಬರು ನನಗೆ ಹೇಳಿದ್ದಾರೆಂದು ತಿರುಗೇಟು ನೀಡಿದರು. ರವಿ ಹೇಳಿದ ಆ ಪದದಿಂದ ಬಹಳ ನೋವಾಗಿ ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದರು.
ಆ ದಿನ ವಿಧಾನ ಪರಿಷತ್ ಕಲಾಪದಲ್ಲಿ ಘಟನೆಯಾದ ಬಳಿಕ ನಾನು ಅಲ್ಲಿಯೇ ಕುಳಿತಿದ್ದೆ. ರವಿ ಊಸರವಳ್ಳಿ ತರ ಓಡಿಹೋದರು. ಕೂಡಲೇ ನಾನು ಬಿ.ಕೆ.ಹರಿಪ್ರಸಾದ್, ಬೋಸರಾಜು ಅವರಿಗೆ ವಿಷಯ ವಿವರಿಸಿದೆ. ಎಲ್ಲರೂ ನನ್ನ ಹತ್ತಿರ ಬಂದು ಸಿ.ಟಿ.ರವಿ ಬಳಸಿದ ಅಶ್ಲೀಲ ಪದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಎಲ್ಲ ನಾಯಕರು ಕೂಡಿ ಸಭಾಪತಿಗಳ ಬಳಿ ಹೋದಾಗ ವಿಷಯ ಕೇಳಿ ಸಭಾಪತಿಗಳೂ ಕಣ್ಣೀರು ಹಾಕಿದರು. ಯಾವುದೇ ಕಾರಣಕ್ಕೂ ಧೈರ್ಯಗೇಡಬೇಡಿ, ನಾವೆಲ್ಲಾ ನಿಮ್ಮೊಂದಿಗಿದ್ದೇವೆ ಎಂದು ಆ ಸಮಯದಲ್ಲಿ ಮುಖ್ಯಮಂತ್ರಿ ಸೇರಿ ಎಲ್ಲರೂ ನನಗೆ ಧೈರ್ಯ ತುಂಬಿದರು ಎಂದರು.
ಸಿ.ಟಿ.ರವಿ ಹೇಳಿಕೆ ಏನಿತ್ತು?:
ಸಚಿವೆ ಲಕ್ಷ್ಮೀ ಹಾಗೂ ಎಂಎಲ್‌ಸಿ ಸಿ.ಟಿ.ರವಿ ನಡುವೆ ಏಟು-ಎದಿರೇಟು ಹೇಳಿಕೆಗಳ ನೀಡುತ್ತಿದ್ದಾರೆ. ಮಂಗಳವಾರ ಸಿ.ಟಿ.ರವಿ ಮಾತನಾಡಿ ನನ್ನ ಮೇಲೆ ಕೆಸರು ಬಿದ್ದರೂ, ಕೆಸರಿನ ಮೇಲೆ ನಾನು ಬಿದ್ದರೂ ನಾನೇ ಸ್ನಾನ ಮಾಡಬೇಕು. ಹೀಗಾಗಿ ದೊಡ್ಡವರು ಕೆಸರಿನಿಂದ ನೀನೆ ಸ್ವಲ್ಪ ದೂರ ಇದ್ದು ಬಿಡು ಎಂದಿದ್ದರು. ಬುಧವಾರ ಇದೇ ಮಾದರಿಯ ಹೇಳಿಕೆ ನೀಡಿ ಸಚಿವೆ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.