ಮಂಗಳೂರು/ಉಡುಪಿ: ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಬಿಜೆಪಿ ಬೆಂಬಲ ನೀಡಿದ ಬಂದ್‌ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೋಮವಾರ ಶೂನ್ಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳ್ತಂಗಡಿಯ ಹಳೆ ಕೋಟೆ ಮತ್ತು ಚರ್ಚ್ ರೋಡ್ ಬಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಟೈರ್‌ಗೆ ಬೆಂಕಿ ಹಾಕಿದ ಘಟನೆ ಹಾಗೂ ರಸ್ತೆ ಬದಿ ಪ್ರತಿ ಭಟನೆ ನಡೆಸಿದ್ದನ್ನು ಹೊರತುಪಡಿಸಿದರೆ ಜಿಲ್ಲೆಯ ಬೇರೆಲ್ಲಿಯೂ ಯಾವುದೇ ಘಟನೆಗಳು ಸಂಭವಿಸಿಲ್ಲ. ಜಿಲ್ಲೆಯಲ್ಲಿ ಸಾಮಾನ್ಯ ಜನಜೀವನ ಎಂದಿ ನಂತಿದ್ದು, ಶಾಂತ ಪರಿಸ್ಥಿತಿ ಇತ್ತು. ಉಡುಪಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಸರಕಾರಿ ಮತ್ತು ಖಾಸಗಿ ಬಸ್‌ಗಳು, ಆಟೋ ರಿಕ್ಷಾಗಳು ಎಂದಿನಂತೆ ಸಂಚರಿಸಿದವು. ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಯಥಾಪ್ರಕಾರ ಕಾರ್ಯನಿರ್ವಹಿಸಿದವು. ಶಾಲಾ ತರಗತಿಗಳ ಪುನರಾರಂಭದ ಮೊದಲ ದಿನವೇ ಬಂದ್‌ಗೆ ಕರೆ ನೀಡಲಾಗಿದ್ದರೂ ಶಾಲಾರಂಭ ಯಾವುದೇ ಅಡೆ ತಡೆಗಳಿಲ್ಲದೆ ನಡೆಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗಳಿಗೆ ಹಾಜರಾಗಿದ್ದರು. ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.
ಬಂದ್ ಆಚರಣೆಯ ಸಾಧ್ಯತೆಯನ್ನು ಮನಗಂಡು ಜಿಲ್ಲಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು.