ರಂಗಿತರಂಗ, ಒಂದು ಮೊಟ್ಟೆಯ ಕಥೆ, ಕಿರಿಕ್ ಪಾರ್ಟಿ, ರಿಕ್ಕಿ ಸಹಿತ ಅನೇಕ ಕನ್ನಡ ಚಲನಚಿತ್ರದಲ್ಲಿ ಕರಾವಳಿಯ ಹೊಸ ಮುಖಗಳು ಗುರುತಿಸಿಕೊಂಡು ಯಶಸ್ವಿಯಾಗಿವೆ. ಅದೇ ಪಟ್ಟಿಯಲ್ಲಿ ಈಗ ಮತ್ತೂಂದು ಹೊಸಬರ ಕನ್ನಡ ಚಲನಚಿತ್ರ ಸೇರ್ಪಡೆಯಾಗುವ ಹಂತದಲ್ಲಿದೆ. ಚಿತ್ರದ ಹೆಸರು ಚೇಸ್.
ನಿರ್ದೇಶಕ ಹರಿ ಆನಂದ್ ಅವರು ಚೇಸ್ ಚಿತ್ರದ ಮೂಲಕ ಮೊದಲ ಬಾರಿಗೆ ಚಂದನವಕ್ಕೆ ಕಾಲಿಡುತ್ತಿದ್ದಾರೆ. ಮಂಗಳೂರಿನ ಮನೋಹರ್ ಸುವರ್ಣ, ಪ್ರಶಾಂತ್ ಶೆಟ್ಟಿ, ಪ್ರದೀಪ್ ಶೆಟ್ಟಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಜನಾರ್ದನ್ ಎನ್. ಅವರು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದೆ.
ಸಿಂಪ್ಲಿ ಫನ್ ಮೀಡಿಯಾ ನೆಟ್‌ವರ್ಕ್ ಫ್ರೈವೆಟ್ ಲಿಮಿಟೆಡ್ ಲಾಂಛನದಲ್ಲಿ ತಯಾರಾಗುತ್ತಿರುವ ಈ ಚಿತ್ರ ಸ್ಯಾಂಡಲ್ ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿರುವುದು ಸುಳ್ಳಲ್ಲ. ಲಾಸ್ಟ್‌ಬಸ್ ಚಲನಚಿತ್ರದ ಮೂಲಕ ಈಗಾಗಲೇ ಗುರುತಿಸಿಕೊಂಡ ಹಾಸ್ಯನಟ ನರಸಿಂಹ ರಾಜ್ ಅವರ ಪುತ್ರ ಅವಿನಾಶ್ ನರಸಿಂಹ ರಾಜ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎಬಿಸಿಡಿ, ಎಬಿಸಿಡಿ-2 ಹಿಂದಿ ಚಲನಚಿತ್ರದಲ್ಲಿ ಮಿಂಚಿದ್ದ ಸುಶಾಂತ್ ಪೂಜಾರಿ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಕರಾವಳಿ ಮೂಲದ ಕಲಾವಿದರ ದಂಡೇ ಇದೆ.
ಈಗಾಗಲೇ ರಂಗಿತರಂಗ, ಯೂಟರ್ನ್, ಕಾಫಿ ತೋಟ ಚಿತ್ರಗಳ ಮೂಲಕ ಹೆಸರುಗಳಿಸಿದ ರಾಧಿಕಾ ಚೇತನ್ ಚಾಲೆಂಜಿಂಗ್ ಪಾತ್ರ ನಿರ್ವಹಿಸಲಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋ ಖ್ಯಾತಿಯ ಶೀತಲ್ ಶೆಟ್ಟಿ, ಅಕ್ಕ ಖ್ಯಾತಿಯ ಅರ್ಜುನ್ ಯೋಗೇಶ್ ರಾಜ್ ಸಹಿತ ತುಳು ಚಿತ್ರ ರಂಗದ ಹಾಸ್ಯ ನಟ ಅರವಿಂದ್ ಬೋಳಾರ್, ಅರವಿಂದ ರಾವ್, ರಾಜೇಶ್ ನಟರಂಗ, ಉಷಾ ಭಂಡಾರಿ, ಪ್ರಮೋದ್ ಶೆಟ್ಟಿ ಮತ್ತಿತರರು ಬಣ್ಣ ಹಚ್ಚಿದ್ದಾರೆ.
ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಭಾರತದ ಏಕೈಕ ಶ್ವಾನ ಮನಶಾಃಸ್ತ್ರಜ್ಞ ಡಾಗ್ ಗುರು ಅಮೃತ ಶ್ರೀಧರ್ ಹಿರಣ್ಯ ಅವರಿಂದ ತರಬೇತಿ ಪಡೆದ ಮ್ಯಾಕ್ಸ್ ಎಂಬ ಲ್ಯಾಬಡ್ರಾರ್ ನಾಯಿಯೂ ಚಿತ್ರ ದಲ್ಲಿ ಕಾಣಿಸಲಿದೆ. ಚಿತ್ರಕ್ಕೆ ಶ್ರೀ ಕ್ರೇಜಿ ಮೈಂಡ್ಸ್ ಸಂಕಲನವಿದ್ದು, ಕಾರ್ತಿಕ್ ಆಚಾರ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ| ಉಮೇಶ್ ಪಿಲಿಕುಡೇಲು ಸಾಹಿತ್ಯ ಬರೆದಿದ್ದಾರೆ. ಡಿಫರೆಂಟ್ ಡ್ಯಾನಿ, ಚೇತನ್ ಡಿ’ಸೋಜಾ ಅ ವರ ಸಾಹಸ ಸಂಯೋಜನೆ, ಸಾಯಿ ಕೃಷ್ಣ ಅವರ ವಿನ್ಯಾಸ, ವಿನಯ್ ಭಾರದ್ವಾಜ್, ಪರಿಮಳ ಶೆಟ್ಟಿಯವರ ವಸ್ತ್ರ ವಿನ್ಯಾಸವಿದೆ.
ನವೀನ್ ಭಟ್ ಇಳಂತಿಲ