Advertisement

ರಾಜಧಾನಿಯಲ್ಲಿ ಕರಾವಳಿ ಕಲೆ, ಖಾದ್ಯಗಳ ಘಮ

11:54 AM Jan 22, 2018 | |

ಬೆಂಗಳೂರು: ಕೋರಿರೊಟ್ಟಿ, ಮೀನೂಟ, ನೀರ್‌ದೋಸೆ-ಕಾಯ್‌ಬೆಲ್ಲ, ಕೊಟ್ಟೆ ಕಡುಬು, ಪತ್ರೊಡೆ ಹೀಗೆ ಕರಾವಳಿ ಶೈಲಿಯ ಖಾದ್ಯದ ರುಚಿ, ವಿವಿಧ ಜಾನಪದ ಕಲೆ, ಅಪ್ಪಟ ಕರಾವಳಿ ಆಟಗಳಿಗೆ ರಾಜಧಾನಿಯ ನಾಗರಿಕರು ಮನಸೋತಿದ್ದಾರೆ.

Advertisement

ಜಯನಗರದ ಶಾಲಿನಿ ಮೈದಾನದಲ್ಲಿ ಅಭಿಮಾನ ಸಾಂಸ್ಕೃತಿಕ ಟ್ರಸ್ಟ್‌ ಹಮ್ಮಿಕೊಂಡಿದ್ದ ಎರಡು ದಿನಗಳ ನಮ್ಮೂರ ಹಬ್ಬದಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿ, ಅಲ್ಲಿನ ರುಚಿಯಾದ ತಿಂಡಿ, ತಿನಿಸು ಹಾಗೂ ಸಾಂಸ್ಕೃತಿಕ ವೈಭವ ಕಂಡು ಬೆರಗಾಗಿದ್ದಾರೆ.

ಶನಿವಾರ ಸುಮಾರು 60 ಸಾವಿರಕ್ಕೂ ಅಧಿಕ ಜನ ನಮ್ಮೂರ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಭಾನುವಾರ ನಗರದ ಮೂಲೆ ಮೂಲೆಗಳಿಂದ ಹಾಗೂ ಹೊರ ಜಿಲ್ಲೆಗಳಿಂದ 70 ಸಾವಿರಕ್ಕೂ ಅಧಿಕ ಜನ ಬಂದಿದ್ದರು. ಸಂಜೆ ವೇಳೆ ಮೈದಾನದೊಳಗೆ ಪ್ರವೇಶವೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. 

ನಮ್ಮೂರ ತಿಂಡಿಮನೆಯಲ್ಲಿ ಬಿಸಿಬಿಸಿಯಾಗಿ ಮಾಡಿಕೊಡುತ್ತಿದ್ದ ಬನ್ಸ್‌, ಹಲಸಿನಹಣ್ಣಿನ ಕೇಸರಿಬಾತ್‌, ಮುಳಕ, ನೀರ್‌ದೋಸೆ-ಕಾಯ್‌ಬೆಲ್‌, ಹಾಲುಬಾಯಿ, ಕಾಯಿಕಡಬು, ಗೋಲಿಬಜೆ, ಪತ್ರೊಡೆ, ಉದ್ದಿನ ದೋಸೆ, ಕೋರಿರೊಟ್ಟಿ, ಮೀನು ಹಾಗೂ ಸಿಗಡಿ ಖಾದ್ಯ ಎಲ್ಲರು ಬಾಯಿ ಚಪ್ಪರಿಸುವಂತೆ ಮಾಡಿದೆ. ಅಪ್ಪೆಮಿಡಿ, ಮಾವಿನಕಾಯಿ, ತರಕಾರಿ, ಕಂಚಿಕಾಯಿ ಹಾಗೂ ನಿಂಬೆಹಣ್ಣು ಉಪ್ಪಿನಕಾಯಿಗೆ ಜನರು ಮುಗಿಬಿದ್ದಿದ್ದರು.

ಅಂತಾರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ನೇತೃತ್ವದಲ್ಲಿ ನಡೆದ ಕಾಟೂìನ್‌ ಹಬ್ಬ, ಛಾಯಾಚಿತ್ರಗ್ರಾಹಕರಿಂದ ಸೆರೆ ಹಿಡಿಯಲ್ಪಟ್ಟ ಕರಾವಳಿಯ ಜನಜೀವನ ಮತ್ತು ಕಲೆಗಳ ಕುರಿತಾದ ಫೋಟೋ ಪ್ರದರ್ಶನಗೊಂಡಿದೆ. ಕರಾವಳಿಯಿಂದ ತಂದ ತಾಜಾ ತರಕಾರಿ, ಓಲೆ ಬೆಲ್ಲ, ಮಂಡೆಹಾಳೆ, ಓಲೆ ಹಾಗೂ ಕಡ್ಡಿ ಚಾಪೆಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ.

Advertisement

ತಲೆಗೆ ಕಟ್ಟುವ ಮುಂಡಾಸು, ಲಾವಂಚ ಬೇರಿನಿಂದ ಮಾಡಿದ ಟೋಪಿ, ಗಣಪತಿ ಮುಖವಾಡ, ಯಕ್ಷಗಾನದ ಮುಖವಾಡ, ಕಾಟೂìನ್‌ಗಳು, ಮೀನು ಬೇಯಿಸುವ ಗಡಿಗೆ, ಶಂಕರ ಪೋಳಿ, ಕುಚಲಕ್ಕಿ, ಭತ್ತದ ತೋರಣಕ್ಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 

ಈ ಬಾರಿಯ ನಮ್ಮೂರ ಹಬ್ಬವನ್ನು ಖ್ಯಾತ ಯಕ್ಷಗಾನ ಕಲಾವಿದರಾಗಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಅರ್ಪಿಸಲಾಗಿತ್ತು. ಬೆಳಗ್ಗೆ 10 ರಿಂದ ಕರಾವಳಿಯ ಗ್ರಾಮೀಣ ಕ್ರೀಡಾ ಸ್ಪಧೆಗಳು, ದಂಪತಿಗೆ ಮನರಂಜನಾ ಸ್ಪರ್ಧೆಗಳು, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು. ಚಪ್ಪರ ವೇದಿಕೆಯಲ್ಲಿ ಭಜನೆ, ಯಕ್ಷಗಾನ, ಕರಾವಳಿ ಅಡುಗೆ ಪ್ರಾತ್ಯಕ್ಷಿಕೆ, ಮಧ್ಯಾಹ್ನ ಜಬ್ಟಾರ್‌ ಸುಮೋ ಮತ್ತು ಹಿರಿಯ ಕಲಾವಿದರಿಂದ ತಾಳಮದ್ದಳೆ-ಶರಸೇತುಬಂಧನ ನಡೆಯಿತು.

ಕಿರೀಟ ಪ್ರಶಸ್ತಿ ಪ್ರದಾನ: ಮಣಿಪಾಲ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎಂ.ಹೆಗ್ಡೆ ಮತ್ತು ನಟ ಉಪೇಂದ್ರ ಅವರಿಗೆ ಪ್ರಸಕ್ತ ಸಾಲಿನ “ಕಿರೀಟ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೀಟ್‌ ಗುರೂಸ್‌ ತಂಡದಿಂದ ಪಾಶ್ಚಾತ್ಯ ಮತ್ತು ಕರಾವಳಿ ವಾದ್ಯಗಳ ಜುಗಲ್‌ಬಂದಿ, ಪಟ್ಲ ಸತೀಶ್‌ ಶೆಟ್ಟಿಯವರ ತಂಡದಿಂದ ಯಕ್ಷಪದ, ಕಲಾವಿದರಾದ ರವಿ ಬಸೂರು, ಸುಪ್ರಿಯ ಲೋಹಿತ್‌, ರಾಮಚಂದ್ರ ಹಡಪದ್‌, ನಕುಲ್‌ ಅಭ್ಯಂಕರ್‌ ಹಾಗೂ ಲಹರಿ ಕೋಟ್ಯಾನ್‌ ಅವರು ಗಾಯನ ಕಾರ್ಯಕ್ರಮ ನೆರೆದವರಿಗೆ ಮನೋರಂಜನೆ ನೀಡಿದೆ. ಮನು ಹಂದಾಡಿ ನೇತೃತ್ವದ ನಗೆ ಅಟ್ಟುಳಿ ಕಾರ್ಯಕ್ರಮ ನೆರದವರಿಗೆ ಕಚಕುಳಿ ನೀಡಿದೆ.

ಸೆಲ್ಫಿ ಸಾಟ್‌ ಹೌಸ್‌ಫ‌ುಲ್‌: ಕೋಳಿ ಜಗಳದ ಮಾದರಿ, ಭತ್ತ ತುಂಬುವ ಒಡ್ಡಿ, ಕಲ್ಲಂಗಡಿ, ಉಡುಪಿಯ ರಥ ಹಾಗೂ ಯಕ್ಷಗಾನ ಕಿರೀಟದ ಮಾದರಿ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಯಕ್ಷಗಾನದ ಪುತ್ಥಳಿಯ ಎದುರು ನಿಂತು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ನಿಮ್ಮ ಕ್ಯಾರಿಕೇಚರ್‌ ವಿಭಾಗದಲ್ಲಿ  ನೀವೂ ಕ್ಯಾರಿಕೇಚರ್‌ ಬಿಡಿಸಿ ಎಂದು ಡೊನಾಲ್ಡ್‌ ಟ್ರಂಪ್‌ ಅವರ ಕ್ಯಾರಿಕೇಚರ್‌ ಬಿಡಿಸುವ ಸವಾಲು ನೆರೆದವರಿಗೆ ನೀಡಲಾಗಿತ್ತು. ನೀವೂ ಡೈಲಾಗ್‌ ಹೊಡೆಯಿರಿ ವಿಭಾಗದಲ್ಲಿ ಯಕ್ಷಗಾನ ವೇಷಧರಿಸಿದ ಇಬ್ಬರು ವ್ಯಕ್ತಿಗಳು ಮೊಬೈಲ್‌ನಲ್ಲಿ ನೋಡುತ್ತಿರುವ ಚಿತ್ರ ಹಾಕಿ, ಡೈಲಾಗ್‌  ಹೇಳುವ ಸ್ಪರ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next