ಬೆಳ್ತಂಗಡಿ: ಕೃಷಿಕರ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿಗಳು ಜತೆಯಾಗಿರುವ ಸಹಕಾರಿ ಭಾರತಿ ಸಾಕಷ್ಟು ಅಭಿವೃದ್ಧಿಪರ ಕಾರ್ಯಗಳನ್ನು ಪರಿಚಯಿಸುತ್ತಿದ್ದು, ಈ ಸಹಕಾರ ಭಾರತಿಯ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶನಿವಾರ ಗುರುವಾಯನಕೆರೆ ಹವ್ಯಕ ಭವನದಲ್ಲಿ ತಾಲೂಕು ಸಹಕಾರ ಭಾರತಿಯ ವತಿಯಿಂದ ಪ್ರಾ. ಕೃಷಿ ಪತ್ತಿನ ಸ. ಸಂಘ, ಹಾಲು ಉತ್ಪಾದಕರ ಸ. ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರಿಗೆ ಆಯೋಜಿಸಿದ್ದ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು.
ಅಭ್ಯಾಸ ವರ್ಗದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ಅವರು ಸಹಕಾರ ಭಾರತಿಯನ್ನು ಪರಿಚಯಿಸಿದರು. ಸಹಕಾರ ಭಾರತಿ ವಿಭಾಗ ಸಂಘಟನ ಪ್ರಮುಖ್ ಮೋಹನ್ ಕುಂಬ್ಳೆಕರ್, ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್, ಆರ್‌ಎಸ್ ಎಸ್‌ನ ನ. ಸೀತಾರಾಮ್ ಅವರು ವಿವಿಧ ವಿಚಾರಗಳ ಕುರಿತು ಮಾತನಾಡಿದರು.
ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ವೀಣಾ ಉಪಸ್ಥಿತರಿದ್ದರು. ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ ಮಡ್ತಿಲ ಅವರು ಸಮಾರೋಪ ಭಾಷಣ ಮಾಡಿದರು. ಸಹಕಾರ ಭಾರತಿ ತಾ| ಅಧ್ಯಕ್ಷ ಸುಂದರ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ನಿರೂಪಿಸಿದರು.
ಶ್ಲಾಘನೀಯ
ಪ್ರಸ್ತುತ ದಿನಗಳಲ್ಲಿ ಕೃಷಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಸಮಸ್ಯೆ ಪರಿಹಾರಕ್ಕೆ ಸಹಕಾರಿ ಸಂಸ್ಥೆಗಳು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಅದಕ್ಕಾಗಿ ಸಹಕಾರಿಗಳಿಗೆ ಮಾಹಿತಿ ನೀಡುವ ಕಾರ್ಯ ಮಾಡಿರುವ ಸಹಕಾರ ಭಾರತಿ ಪ್ರಯತ್ನ ಶ್ಲಾಘನೀಯ. ಇಂತಹ ಅಭ್ಯಾಸ ವರ್ಗಗಳಿಂದ ಸಹಕಾರಿಯು ಯಾವ ರೀತಿ ಕೆಲಸ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ.
- ಹರೀಶ್ ಪೂಂಜ, ಶಾಸಕರು