ಮಂಗಳೂರು: ಕರ್ನಾಟಕ ಮಾಧ್ಯಮ ಸಹಕಾರ ಹಾಗೂ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪತ್ರಿಕೋದ್ಯಮ ಇತಿಹಾಸದಲ್ಲಿ ಮೊದಲ ಬಾರಿಗೆ “ವಿಶ್ವದ ಹೆಮ್ಮೆಯ ಕನ್ನಡಿಗ-2024′ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಬುಧವಾರ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.
ಸಹಕಾರ, ಸಮಾಜಸೇವೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಅವರು ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಜರಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಿದರು.
ಡಾ| ಎಂ.ಎನ್.ಆರ್. ಅವರು ನಾಲ್ಕು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಸಮಾಜಮುಖೀ ಸೇವೆಯಲ್ಲಿ ತೊಡಗಿಸಿಕೊಂಡು ಸರ್ವಧರ್ಮಿಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಗಣಕ ಯಂತ್ರ ವಿಜ್ಞಾನಿ ಡಾ| ಎಸ್.ಎಸ್.ಅಯ್ಯಂಗಾರ್, ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ತುಮಕೂರು ಉಪ ಕುಲಪತಿ ಡಾ|ಕೆ.ಜಿ.ಲಿಂಗೇಗೌಡ, ದಿ ನ್ಯೂಸ್ ಪೇಪರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ್, ಗೌರವಾಧ್ಯಕ್ಷ ಎ. ನಾರಾಯಣಮೂರ್ತಿ ಹಾಗೂ ಅಧ್ಯಕ್ಷ ಗಣೇಶ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.