ಮುಂಬಯಿ:ರಾಜ್ಯದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಅತ್ಯಧಿಕ ರ‍್ಯಾಲಿ ನಡೆಸಿದ ಸಿಎಂ ಫಡ್ನವೀಸ್, ಇನ್ನು ಉತ್ತರ ಪ್ರದೇಶದಲ್ಲೂ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಈ ಕುರಿತು ಫಡ್ನವೀಸ್ ಅವರು ಮಾತನಾಡಿ, ಉತ್ತರ ಪ್ರದೇಶಗಳಲ್ಲಿ ನಡೆಸುವ ರ‍್ಯಾಲಿಗಳಿಗೆ ಸಂಬಂಧಿಸಿದಂತೆ ನಿರ್ದೇಶವು ಬರುವುದನ್ನು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಎಲ್ಲಕ್ಕಿಂತ ಅಧಿಕ 80 ಸೀಟುಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ರಾಜಕೀಯದ ಪ್ರಕಾರ ಅತ್ಯಂತ ಮಹತ್ವದ ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಆದ್ದರಿಂದ ಬಿಜೆಪಿಯ ದಿಗ್ಗಜ ನಾಯಕರು ಜನಸಭೆ ನಡೆಸುವುದರಿಂದ ಪಕ್ಷಕ್ಕೆ ಲಾಭ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ಉತ್ತರ ಪ್ರದೇಶದ ಮೂಲದ ಮುಂಬಯಿ ನಾಯಕರು ತಮ್ಮ ಊರುಗಳಲ್ಲಿ ಪ್ರಚಾರಕ್ಕಾಗಿ ಹೋಗಲಿದ್ದಾರೆ. ಆದ್ದರಿಂದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಚುನಾವಣೆ ಪ್ರಚಾರ ಮತ್ತಷ್ಟು ರಂಗೇರಲಿದೆ. ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ವಿಧ್ಯಾ ಠಾಕೂರ್ ಹಾಗೂ ಬಿಜೆಪಿ ಮಹಾರಾಷ್ಟ್ರ ರಾಜ್ಯ ಉತ್ತರ ಭಾರತೀಯ ಮೋರ್ಚಾದ ಅಧ್ಯಕ್ಷ ಜಯಪ್ರಕಾಶ್ ಠಾಕೂರ್ ಅವರು ಕೂಡ ಉತ್ತರ ಪ್ರದೇಶದಲ್ಲಿ ಪ್ರಚಾರಕ್ಕಾಗಿ ಹೋಗಲಿದ್ದಾರೆ. ಅವರ ಜತೆಯಲ್ಲಿ ಮುಂಬಯಿಯಿಂದ ಸುಮಾರು 40ರಿಂದ 45 ಕಾರ್ಯಕರ್ತರು ರ‍್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.
ಫಡ್ನವೀಸ್ ಅವರು ಉತ್ತರ ಪ್ರದೇಶದಲ್ಲಿ ಸರಿ ಸುಮಾರು 12 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಇದರಲ್ಲಿ ವಾರಣಾಸಿ ಮತ್ತು ಗೋರಖ್‌ಪುರ ಸೇರಿವೆ. ರ್ಯಾಲಿಯಲ್ಲಿ ಪಡ್ನವೀಸ್ ಜತೆ ವಿನೋದ್ ತಾಬ್ಡೆ ಸೇರಿದಂತೆ ಹಲವು ನಾಯಕರು, ಜೋನ್‌ಪುರ, ಆಜಂಗಢ, ಗೋರಖ್‌ಪುರ, ಪೂರ್ವಾಂಚಲದ ಮಛಲಿ ನಗರ ಹಾಗೂ ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸಲಿದ್ದಾರೆ.