Advertisement

ಡಿಕೆಶಿ- ಸುರ್ಜೇವಾಲ ಮೀಸಲಾತಿ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

04:33 PM Apr 28, 2023 | Team Udayavani |

ಕಲಬುರಗಿ: ಮೀಸಲಾತಿ ಕೇಳಲು ಒಕ್ಕಲಿಗರು-ಲಿಂಗಾಯಿತರು ಬಿಕ್ಷುಕರಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಎಐಸಿಸಿ ರಾಜ್ಯದ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗ ಮೀಸಲಾತಿ ಪಡೆಯುತ್ತಿರುವ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗದವರು ಭಿಕ್ಷುಕರಾ? ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ಸೇಡಂನಲ್ಲಿ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ಪರ ರೋಡ್ ಶೋದಲ್ಲಿ ಪಾಲ್ಗೊಂಡು ಚುನಾವಣಾ ಭಾಷಣ ಮಾಡಿದ ಅವರು, ಮೀಸಲಾತಿ ಕೇಳಲು ಒಕ್ಕಲಿಗರು, ಲಿಂಗಾಯತರು ಬಿಕ್ಷುಕರಲ್ಲ ಅಂತ ಡಿಕೆ ಶಿವಕುಮಾರ ಮತ್ತು ಸುರ್ಜೇವಾಲ ಹೇಳಿರುವುದು ಮೀಸಲಾತಿ ವರ್ಗಕ್ಕೆ ಮಾಡಿದ ಅವಮಾನವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಡಿಕೆಶಿ ಹಾಗೂ ಸುರ್ಜೇವಾಲ ಅವರು ಹೇಳಿಕೆಯು ಈಗ ಮೀಸಲಾತಿ ಪಡೆಯುತ್ತಿರುವ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರು ಬಿಕ್ಷುಕರಾ ಎನ್ನುವಂತಾಗುತ್ತದೆ.‌ ಈ ಹೇಳಿಕೆ ಜನರನ್ನು ಕಾಂಗ್ರೆಸ್ ನವರು ಸದಾ ಬಿಕ್ಷುಕರಂತೆ ನೋಡ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು. ‌

ಕಾಂಗ್ರೆಸ್ನವರು ಓಟ್ ಬೇಕಾದಾಗ ಬಳಸಿಕೊಂಡು ಮತ್ತೆ ಜನರನ್ನು ಬಿಕ್ಷುಕರನ್ನಾಗಿ ಮಾಡ್ತಾರೆ. ಇಷ್ಟು ದಿನ ಕಾಂಗ್ರೆಸ್ ನವರು ಜನರನ್ನು ಬಾವಿಗೆ ದೂಡುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಜನ ಅವರನ್ನು ಬಾವಿಗೆ ದೂಡುತ್ತಾರೆ. ಕಾಂಗ್ರೆಸ್ ನ ಓಟ್ ಬ್ಯಾಂಕ್ ಛಿದ್ರ ಛಿದ್ರವಾಗಿದೆ.‌ ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.‌

ಮೋದಿ ನೀಲಕಂಠ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಅಂತ ಕಲ್ಯಾಣ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಸರ್ಪ ಯಾರ ಕೊರಳಲ್ಲಿ ಇರುತ್ತದೆ ಗೊತ್ತಾ ?ಸರ್ಪ ನೀಲಕಂಠನ ಸಂಕೇತ.‌ ಮೋದಿ ಅವರು ದೇಶದ ಭಯೋತ್ಪಾದನೆ, ಭ್ರಷ್ಟಾಚಾರ, ಬಡತನ ಒದ್ದೋಡಿಸಿ ಸಶಕ್ತ ಭಾರತ ಕಟ್ಟಲು ಹಲವಾರು ವಿಷ ನುಂಗಿ ನೀಲಕಂಠ ಆಗಿದ್ದಾರೆ ಎಂದು ಬೊಮ್ಮಾಯಿ ವಿವರಣೆ ನೀಡಿದರು.

Advertisement

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದಿನಾಲು ಒಂದು ಸಲ ಮೋದಿ ಅನ್ನದಿದ್ದರೆ ನಿದ್ರೆನೇ ಬರಲ್ಲ. ಇದು ಮೋದಿ ಕಂಡ್ರೆ ಭಯ ಎನ್ನುವುದು ನಿರೂಪಿಸುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಮೋದಿ ನೇತೃತ್ವದಲ್ಲಿ ಎಲ್ಲೆಲ್ಲಿ ಚುಮಾವಣೆ ಆಗಿದೆ ಅಲ್ಲಿ ಕಾಂಗ್ರೆಸ್ ನಿರ್ಮೂಲನೆ ಆಗಿದೆ. ಈಗ ಕರ್ನಾಟಕದಲ್ಲೂ ಕಾಂಗ್ರೆಸ್ ಸೋಲುವ ಸ್ಥಿತಿ ಬಂದಿದೆ.ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸುನಾಮಿವಿದೆ.ಈ ಸಲವೂ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದರಲ್ಲಿ ಎರಡು ಮಾತೇ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ನಟಿ ಶೃತಿ ಭರ್ಜರಿ ಪ್ರಚಾರ: ಸಿಎಂ ಜತೆ ರೋಡ ಶೋ ದಲ್ಲಿ ಪಾಲ್ಗೊಂಡ ನಟಿ ಶೃತಿ, ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ಪರ ಮತಯಾಚಿಸಿದರು.‌

ರಾಜ್ಯದಲ್ಲಿ ಅತಂತ್ರ ಸ್ಥಿತಿ ತರಬೇಡಿ.‌ಸ್ಥಿರ ಸರಕಾರದ ಅಗತ್ಯ ಇದೆ. ಬೇರೆ ಪಕ್ಷಗಳ ಅಭ್ಯರ್ಥಿಗಳ ಹಣಕ್ಕೆ ಮಾರು ಹೋಗಬೇಡಿ.‌ ಸೇಡಂನಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ತ್ರಿಬಲ್ ಇಂಜನ್ ಸರಕಾರ ಆಗುವಂತೆ ಮಾಡಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಸೇಡಂ ಅಭಿವೃದ್ಧಿ ಗೆ‌ 1500 ಕೋ.ರೂ ಅನುದಾನ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next