ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ವಿಚಾರವಾಗಿ ಗೋವಾ ಸರ್ಕಾರದ ನಡೆಯ ಬಗ್ಗೆ ನನಗೆ ಗೊತ್ತಿಲ್ಲ. ಕಾನೂನು ಹೋರಾಟದ ಬಳಿಕವೇ ಡಿಪಿಆರ್ ದೊರೆಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿದರೆ ಕಾನೂನು ಹೋರಾಟ ಮಾಡುತ್ತೇವೆ ಎಂಬ ಗೋವಾ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮಹಾದಾಯಿ ಅನುಷ್ಠಾನ ವಿಚಾರವಾಗಿ ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂ ಕೋರ್ಟ್ ಆದೇಶ ಮೇಲೆ ನ್ಯಾಯಾಧೀಕರಣ ರಚನೆಯಾಗಿದೆ. 10 ವರ್ಷಗಳ ಕಾಲ ಈ ಕುರಿತು ಎಲ್ಲ ಆಯಾಮಗಳ ಪರಿಶೀಲನೆ ಸಹ ನಡೆದಿದೆ. ನ್ಯಾಯಾಧೀಕರಣ ಎಂದರೆ ಸುಪ್ರೀಂ ಕೋರ್ಟ್ ಆದೇಶವಿದ್ದಂತೆ. ಅದರನ್ವಯ ಕೇಂದ್ರ ಸರ್ಕಾರ ಡಿಪಿಆರ್ ಗೆ ಅನುಮತಿ ನೀಡಿದ್ದು, ಹಂತ ಹಂತವಾಗಿ ಕಾನೂನು ಪ್ರಕಾರವೇ ಯೋಜನೆ ಮಾಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಅವರ ಹೇಳಿಕೆಗೆ ಯಾವತ್ತು ಪ್ರತಿಕ್ರಿಯಿಸಿಲ್ಲ. ಅವರು ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಿರುತ್ತಾರೆ. ಅದರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಫೆ. 6ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮ ಉದ್ಘಾಟಿಸುವರು. ನಂತರ ತುಮಕೂರು ಜಿಲ್ಲೆ ಗುಬ್ಬಿ ತಾಲೂಕ ಬಿದೇರಹಳ್ಳಿಯಲ್ಲಿ ಎಚ್‌ಎಎಲ್‌ನ ಹೆಲಿಕಾಪ್ಟರ್ ಉತ್ಪಾದನಾ ಕಾರ್ಖಾನೆ ಉದ್ಘಾಟಿಸಲಿದ್ದಾರೆ ಎಂದರು.
ಧಾರವಾಡದಲ್ಲಿ ರೈತ ಶಕ್ತಿ ಯೋಜನೆಗೆ ಚಾಲನೆ ಕೊಡಲಿದ್ದೇವೆ. ಇದು ನಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ ಯೋಜನೆ ಆಗಿದೆ. ಇದರಿಂದ ರಾಜ್ಯದ 53ಲಕ್ಷ ರೈತರಿಗೆ ಅನುಕೂಲವಾಗಲಿದೆ. ರೈತರು ಕೃಷಿಗಾಗಿ ಯಂತ್ರೋಪಕರಣಗಳನ್ನು ಖರೀದಿಸಲು ರಿಯಾಯಿತಿ ನೀಡುವ ಮಹತ್ವಪೂರ್ಣ ಕಾರ್ಯಕ್ರಮ ಇದಾಗಿದೆ. ಇದು ಸಮಗ್ರ ಕರ್ನಾಟಕ ರೈತರಿಗೆ ಅನುಕೂಲವಾಗಲಿದೆ ಎಂದರು.