Advertisement

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

08:14 PM Dec 31, 2024 | Team Udayavani |

ಕೊರಟಗೆರೆ: ಗೊಂದಿಹಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲದೆ ರಸ್ತೆಯ ಮಧ್ಯೆಯೇ ಗ್ರಾಮದ ಮಲೀನವಾದ ನೀರನ್ನು ತುಳಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾ.ಪಂ. ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಬುಕ್ಕಾಪಟ್ಟಣ ಗ್ರಾ.ಪಂ. ವ್ಯಾಪ್ತಿಯ ಗೊಂದಿಹಳ್ಳಿ ಗ್ರಾಮದಲ್ಲಿ 120ಕ್ಕೂ ಅಧಿಕ ಮನೆಗಳು ಹಾಗೂ ಸುಮಾರು 1500ಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಗ್ರಾ.ಪಂ.ನಲ್ಲಿ ಸಾಕಷ್ಟು ಅನುದಾನ ಬರುತ್ತಿದ್ದರೂ ಗ್ರಾ.ಪಂ. ಸದಸ್ಯರು ಹಾಗೂ ಅಧಿಕಾರಿಗಳ ಇಚ್ಛಾ ಶಕ್ತಿ ಕೊರತೆಯಿಂದ ಗೊಂದಿಹಳ್ಳಿ ಗ್ರಾಮದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ.

ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯೇ ಇಲ್ಲ, ಗ್ರಾಮದ ಮಧ್ಯೆ ಗ್ರಾಮದೇವತೆ ಮಾರಮ್ಮ ದೇವಿಯ ದೇವಸ್ಥಾನ ಮುಂದೆ ಸುಮಾರು ವರ್ಷಗಳ ಹಿಂದೆ ಸಿಸಿ ರಸ್ತೆ ಮಾಡಲಾಗಿದ್ದು, ಚರಂಡಿ ಮಾಡದೆ ರಸ್ತೆ ನಿರ್ಮಾಣ ಮಾಡಿದ ಪರಿಣಾಮ ಕೊಚ್ಚೆ ನೀರು ತುಳಿದುಕೊಂಡು ದೇವಸ್ಥಾನ ಹೋಗುವಂತ ಪರಿಸ್ಥಿತಿ ಇಲ್ಲಿನ ಜನರಿಗೆ ಬಂದಿದೆ. ಅನೇಕ ಬಾರಿ ಗ್ರಾ.ಪಂ. ಸದಸ್ಯರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ದ ದೂರಿದರು.

ಚರಂಡಿ ಸ್ವಚ್ಛಗೊಳಿಸದೇ ಇರುವ ಕಾರಣ ಸೊಳ್ಳೆ ಕಾಟ

ಗೊಂದಿಹಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲದೆ ಗ್ರಾಮದ ನೀರು ರಸ್ತೆಯಲ್ಲಿ ನಿಲ್ಲುತ್ತಿರುವ ಪರಿಣಾಮ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹಾಗೂ ನೀರು ಮಲೀನದಿಂದ ಊರಿನಲ್ಲಿ ಸಾಂಕ್ರಮಿಕ ರೋಗಗಳು ಜಾಸ್ತಿಯಾಗಿ ಸಾರ್ವಜನಿಕರು ಆಸ್ಪತ್ರೆ ಸೇರುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಸರ್ಕಾರದ ಅನೇಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇದೆ ರಸ್ತೆಯ ನಿಂತಿರುವ ನೀರಿನ ಮೇಲೆ ಸಂಚಾರ ಮಾಡಿ ಅರಿವು ಮಾಡಿಸುವಂತ ದುಸ್ಥಿತಿ ಬಂದಿದೆ. ಮಾರುತಿನಗರದಲ್ಲೂ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ ಎಂದು ಸಾರ್ವಜನಿಕರು ದೂರಿದರು.

Advertisement

ನರೇಗಾ ಯೋಜನೆಯಲ್ಲಿ ಚರಂಡಿ ನಿರ್ಮಾಣ ಮಾಡಿ

ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ  ಯೋಜನೆಯಲ್ಲಿ ಗ್ರಾಮೀಣ ಭಾಗದ ಜನತೆಯ ಮೂಲಭೂತ ಕೆಲಸಗಳನ್ನು ಮಾಡಲು ಈ ಯೋಜನೆ ಜಾರಿಗೆ ತರಲಾಗಿದ್ದು, ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯಕ್ಕೆ ಈ ಗ್ರಾಮದಲ್ಲಿ ಸಾಕಷ್ಟು ಕೆಲಸಗಳು ಆಗದೆ ಬಾಕಿ ಉಳಿದಿದ್ದು ನರೇಗಾ ಯೋಜನೆಯಲ್ಲಿ ಚರಂಡಿ ಹಾಗೂ ರಸ್ತೆಗಳನ್ನು ನಿರ್ಮಾಣ ಮಾಡಿಕೊಡಿ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಗೊಂದಿಹಳ್ಳಿ ಗ್ರಾಮಸ್ಥೆ ಗಂಗಮ್ಮ ಮಾತನಾಡಿ, ನಮ್ಮ ಮನೆ ಮುಂದೆ ಚರಂಡಿ ಸ್ವಚ್ಛಗೊಳಿಸಿ ಒಂದು ವರ್ಷವಾಗಿದೆ. ಗ್ರಾ.ಪಂ. ಅಧಿಕಾರಿಗಳು ಯಾರು ಇಲ್ಲಿಗೆ ಬಂದು ನಮ್ಮ ಸಮಸ್ಯೆ ಕೇಳೋಲ್ಲ. ಅನೇಕ ಬಾರಿ ಚರಂಡಿ ಸ್ವಚ್ಛಗೊಳಿಸುವಂತೆ ತಿಳಿಸಿದರೂ ಯಾರು ಕೂಡ ಬಂದಿಲ್ಲ. ಅದರಿಂದ ನಾವೇ ಚರಂಡಿ ಸ್ವಚ್ಛಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

ಮಾರುತಿನಗರ ನಿವಾಸಿ ತಿಮ್ಮಕ್ಕ ಮಾತನಾಡಿ, ಮಾರುತಿನಗರ ಗ್ರಾಮದಲ್ಲಿರುವ ಕೆಲ ಚರಂಡಿ ಹಾಗೂ ನೀರಿನ ತೊಟ್ಟಿಗಳು ಸ್ವಚ್ಛಗೊಳಿಸದೆ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಇಲ್ಲಿ ಯಾರು ನಮ್ಮ ಸಮಸ್ಯೆ ಕೇಳೋರು ಇಲ್ಲ. ರಾತ್ರಿಯಾದರೆ ಸಾಕು ಸೊಳ್ಳೆ ಕಾಟ. ಮನೆ ಮುಂದೆ ನೀರು ನಿಲ್ಲುವುದರಿಂದ ಸೊಳ್ಳೆಗಳು ಜಾಸ್ತಿಯಾಗಿವೆ. ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ ಎಂದು ಅಧಿಕಾರಿಗಳ ವಿರುದ್ದ ಗುಡುಗಿದರು.

ಪಿಡಿಒ ವೀರಭದ್ರ ಆರಾಧ್ಯ ಮಾತನಾಡಿ, ಗೊಂದಿಹಳ್ಳಿ ಗ್ರಾಮದಲ್ಲಿ ರಸ್ತೆಗೆ ನೀರು ಬಿಡಬಾರದು ಎಂದು ಸಾರ್ವಜನಿಕರಿಗೆ ಅನೇಕ ಬಾರಿ ತಿಳಿಸಿದರೂ ಯಾರು ನಮ್ಮ ಮಾತು ಕೇಳುತ್ತಿಲ್ಲ. ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯಲ್ಲಿ ಚರಂಡಿ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next