ಹೈದರಾಬಾದ್ : ವಿದೇಶಿಗರು ಪಿತೂರಿ ಮಾಡಿ ಗೋದಾವರಿ ಜಿಲ್ಲೆಗಳಲ್ಲಿ ಮೇಘಸ್ಪೋಟವಾಗುವಂತೆ ಮಾಡಿ ಪ್ರವಾಹಕ್ಕೆ ಕಾರಣರಾಗಿದ್ದಾರೆ ಎಂಬ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಹೇಳಿಕೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಲೇವಡಿ ಮಾಡಿವೆ.
ಮೇಘಸ್ಫೋಟ ಇತರ ದೇಶಗಳು ಯೋಜಿಸಿರುವ ಪಿತೂರಿ, ಮೊದಲು ಲೇಹ್-ಲಡಾಕ್ ನಲ್ಲಿ ಮಾಡಿದರು, ಆಮೇಲೆ ಉತ್ತರಾಖಂಡದಲ್ಲಿ ಪ್ರಯೋಗಿಸಿದರು.ಈಗ ಗೋದಾವರಿ ಪ್ರದೇಶದಲ್ಲಿ ಪ್ರಯೋಗಿಸಿದ್ದಾರೆ ಎಂದು ಭಾನುವಾರ ಕೆಸಿಆರ್ ಅವರು ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾನ್ಸ್ಪಿರೆಸಿ ಥಿಯರಿ ಎಂದು ವ್ಯಾಪಕವಾಗಿ ಟೀಕಿಸಲಾಗಿದೆ.
ತೆಲಂಗಾಣ ಬಿಜೆಪಿ ಅಧ್ಯಕ್ಷ ಸಂಜಯ್ ಕುಮಾರ್ , ಮುಖ್ಯಮಂತ್ರಿಯಾಗಿ ಕೆಸಿಆರ್ ನೀಡಿರುವ ಹೇಳಿಕೆ ಶತಮಾನದ ಜೋಕ್ ಎಂದಿದ್ದಾರೆ. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಕೆಸಿಆರ್ ಅವರು ಇಂತಹ ಮಾಹಿತಿಗಳಿದ್ದರೆ ಕೇಂದ್ರ ಸರಕಾರಕ್ಕೆ ರಾ ಅಧಿಕಾರಿಗಳಿಗೆ, ಗುಪ್ತಚರ ಇಲಾಖೆಗೆ ನೀಡಬೇಕು ಎಂದು ಟೀಕಿಸಿದ್ದಾರೆ.
ಕೆಸಿಆರ್ ಅವರು ತೆಲಂಗಾಣದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದು, ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಜುಲೈ 28 ರ ವರೆಗೆ ಜನರು ಎಚ್ಚರದಿಂದ ಇರಬೇಕು, ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ತಾಣಗಳಲ್ಲಿಯೂ ಕೆಸಿಆರ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.