Advertisement

ಹಳ್ಳಿಗರಿಗೆ ಮರೀಚಿಕೆಯಾದ ಶುದ್ಧ ಕುಡಿಯುವ ನೀರು

06:25 PM Apr 22, 2021 | Team Udayavani |

ಮಾನ್ವಿ: ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಶುದ್ಧ ನೀರಿನ ಘಟಕಗಳು ಪದೇ-ಪದೇ ದುರಸ್ತಿಗೊಳ್ಳುತ್ತಿವೆ. ಶುದ್ಧೀಕರಿಸದೇ ಕೆರೆ ನೀರು ಕುಡಿಯಬೇಕಾಗಿದ್ದು, ಅಧಿಕಾರಿಗಳ ನಿರ್ಲಕ್ಷದಿಂದಾಗಿ ತಾಲೂಕಿನಲ್ಲಿ ಶುದ್ಧ ಕುಡಿವ ನೀರಿನ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದೆ. ಮಾನ್ವಿ ವಿಧಾನಸಭಾ ವ್ಯಾಪ್ತಿಯ ಮಾನ್ವಿ ಮತ್ತು ಸಿರವಾರ ಭಾಗದಲ್ಲಿನ ಸ್ಥಗಿತಗೊಂಡ ಶುದ್ಧ ನೀರಿನ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸುವಲ್ಲಿ ಅಧಿಕಾರಿಗಳು ಸ್ಪಂದಿಸದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ.

Advertisement

ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಿನಲ್ಲಿ 135 ಕುಡಿವ ನೀರಿನ ಶುದ್ಧೀಕರಣ ಘಟಕಗಳಿದ್ದು, ಇದರಲ್ಲಿ 16 ಘಟಕಗಳು ಸ್ಥಗಿತಗೊಂಡಿವೆ. 119 ಕಾರ್ಯ ನಿರ್ವಹಿಸುತ್ತಿವೆ. ಕಳಪೆ: ತಾಲೂಕಿನಾದ್ಯಂತ ಇರುವ ಶುದ್ಧ ನೀರಿನ ಘಟಕಗಳು ಪದೇ-ಪದೇ ದುರಸ್ತಿಗೆ ಬರಲು ಕಾರಣ ಕಳಪೆ ಗುಣಮಟ್ಟ, ಕಡಿಮೆ ಸಾಮರ್ಥ್ಯದ ಯಂತ್ರ, ನಿರ್ವಹಣೆ ಕೊರತೆ ಎಂಬ ಆರೋಪಗಳಿವೆ. ನಿರ್ವಹಣೆಗೆ ಇಲಾಖೆಯಲ್ಲಿ ಶಾಖಾ ಅಧಿ ಕಾರಿಗಳನ್ನು
ನೇಮಕ ಮಾಡಿದ್ದರೂ ಜನರ ಗೋಳು ತಪ್ಪುತ್ತಿಲ್ಲ.

ವಿವಿಧ ಖಾಸಗಿ ಏಜೆನ್ಸಿಗಳು ಇವುಗಳನ್ನು ನಿರ್ವಹಣೆ ಮಾಡುತ್ತಿದ್ದು, ಅನೇಕ ಗ್ರಾಮಗಳಲ್ಲಿ ಉದ್ಘಾಟನೆಗೊಂಡ ದಿನವೇ ದುರಸ್ತಿಗೊಂಡಿವೆ. ಕೆಲವು ಪದೇ-ಪದೇ ಸ್ಥಗಿತವಾಗುತ್ತಲೇ ಇರುತ್ತವೆ. ದುರಸ್ತಿಗೊಂಡಾಗ ಕೂಡಲೇ ರಿಪೇರಿಗೂ ಏಜೆನ್ಸಿಗಳು ಮುಂದಾಗುವುದಿಲ್ಲ. ಹೀಗಾಗಿ ಹಳ್ಳಿಗರಿಗೆ ಅಶುದ್ಧ ನೀರೇ ಗತಿ. ತಾಲೂಕಿನ ಜಾನೇಕಲ್‌ ಗ್ರಾಮದಲ್ಲಿ ಎಂ.ಎಸ್‌. ಸೈಂಟಿಕ್ಸ್‌ ಆ್ಯಂಡ್‌ ಅಕ್ವಾ ಸಿಸ್ಟಮ್‌ ಹೈದರಾಬಾದ ಏಜೆನ್ಸಿಯವರು ನಿರ್ವಹಣೆ ಮಾಡುತ್ತಿರುವ ಶುದ್ಧೀಕರಣ ಘಟಕ ದುರಸ್ತಿಗೊಂಡು ಆರು ತಿಂಗಳು ಕಳೆದಿದ್ದು, ಅಧಿಕಾರಿಗಳು ನೀಡಿದ ದಾಖಲೆಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.

ಪ್ಲೋರೈಡ್‌ ಸಮಸ್ಯೆ: ಕೆಲ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಮಿತಿಮೀರಿದೆ. ಅಶುದ್ಧ ಮತ್ತು ಪ್ಲೋರೈಡ್‌ಯುಕ್ತ ನೀರು ಬಳಸಬೇಕಿದೆ. ಕೆರೆ, ಬಾವಿ, ಕಾಲುವೆ ನೀರು ಶುದ್ಧೀಕರಿಸದೇ ನೇರವಾಗಿ ಸೇವಿಸುತ್ತಿರುವುದರಿಂದ ಅನೇಕ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜಾನೇಕಲ್‌, ಪೋತ್ನಾಳ್‌, ಕೊಕ್ಲೃಕಲ್‌, ಸಂಗಾಪುರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಬೇಸಿಗೆ ಬಂದರೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಪ್ಲೋರೈಡ್‌ಯುಕ್ತ ನೀರಿನಿಂದಾಗಿ ಮೊಣಕಾಲು ನೋವು, ಸ್ಟೋನ್‌ ಸಮಸ್ಯೆ ಹಾಗೂ ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಗ್ರಾಮೀಣ ಭಾಗದಲ್ಲಿಯೂ ಸಹ ಖಾಸಗಿ ಶುದ್ಧೀಕರಣ ಘಟಕಗಳಿಂದ ಹಣ ನೀಡಿ ನೀರು ತರುವ ಸ್ಥಿತಿ ಹಳ್ಳಿಗರಿಗೆ ಬಂದಿದೆ. ಇನ್ನಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಘಟಕಗಳ ದುರಸ್ತಿಗೊಂಡಾಗ ಕೂಡಲೇ ರಿಪೇರಿಗೆ ಮುಂದಾಗಬೇಕು. ಪಿಡಿಒಗಳು ಜನರಿಗೆ ಸಿಗುವುದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಕುಡಿವ ನೀರಿನ ಸಮಸ್ಯೆ ಇರುವ ಕಡೆ ಅಧಿಕಾರಿಗಳು ಕೂಡಲೇ ಸ್ಪಂದಿಸುವ ಕಾರ್ಯವಾಗಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Advertisement

ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ತೀರ ಕಡಿಮೆಯಾಗಿದೆ. 135 ಶುದ್ಧೀಕರಣ ಘಟಕಗಳಲ್ಲಿ ಕೇವಲ 16 ಮಾತ್ರ ದುರಸ್ತಿಗೊಂಡಿದ್ದು, ರಿಪೇರಿ ಮಾಡಿಸಲಾಗುವುದು. ಶಾಖಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸಮಸ್ಯೆಗೆ ಕೂಡಲೇ ಸ್ಪಂದಿಸಲಾಗುತ್ತಿದೆ.
ಶಶಿಕಾಂತ ವಂದಾಳಿ,
ಗ್ರಾಮೀಣ ನೀರು ಸರಬರಾಜು ಇಲಾಖೆ, ಮಾನ್ವಿ

ಜಾನೇಕಲ್‌ ಗ್ರಾಮದ ಶುದ್ಧೀಕರಣ ಘಟಕ ಸ್ಥಗಿತಗೊಂಡು ಆರು ತಿಂಗಳು ಮೇಲಾಗಿದೆ. ಇದುವರೆಗೂ ಪ್ರಾರಂಭಿಸಿಲ್ಲ. ಬಾವಿ, ಕೆರೆ ನೀರು ಶುದ್ಧೀಕರಿಸದೇ ಕುಡಿಯಬೇಕಾಗಿದೆ. ಕೂಡಲೇ ಅಧಿಕಾರಿಗಳು ಘಟಕ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಕೊಂಡಯ್ಯ,
ಜಾನೇಕಲ್‌ ಗ್ರಾಮದ ನಿವಾಸಿ

*ರವಿ ಶರ್ಮಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next