ಹೊಸದಿಲ್ಲಿ: ರಾಮ ನವಮಿ ದಿನಂದು ಹಾಸ್ಟೆಲ್ ಮೆಸ್ ನಲ್ಲಿ ಮಾಂಸಹಾರಿ ಊಟ ನೀಡಿದ ಕಾರಣಕ್ಕೆ ಜೆಎನ್ ಯು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ರವಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜವಹರಲಾಲ್ ನೆಹರು ಯುನಿವರ್ಸಿಟಿ ವಿದ್ಯಾರ್ಥಿ ಸಂಘ (ಜೆಎನ್ ಯುಎಸ್ ಯು) ಮತ್ತು ಎಬಿವಿಪಿ ಯ 16 ಮಂದಿ ಗಾಯಗೊಂಡಿದ್ದಾರೆ. ಗುಂಪುಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೆಎನ್ ಯುಎಸ್ ಯು, ಎಸ್ಎಫ್ಐ, ಡಿಎಸ್ಐ ಮತ್ತು ಎಐಎಸ್ಎ ಸದಸ್ಯರು ಇಂದು ಮುಂಜಾನೆ ಅಪರಿಚಿತ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ಅನ್ನು ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 341 (ತಪ್ಪಾದ ಸಂಯಮ), 509 (ಮಹಿಳೆಯರ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ), 506 (ಅಪರಾಧ ಬೆದರಿಕೆ) ಮತ್ತು 34 (ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ದಾಖಲಿಸಲಾಗಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಅಪರಾಧಿಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ಚಿಕನ್ ಸೆಂಟರ್ ಸಿಬ್ಬಂದಿಯ ಕೊಲೆಯತ್ನ; ಇಬ್ಬರು ರೌಡಿಶೀಟರ್ ಗಳ ಬಂಧನ
ರಾಮನವಮಿ ದಿನದಂದು ಹಾಸ್ಟೆಲ್ ಮೆಸ್ ನಲ್ಲಿ ನಾನ್ ವೆಜಿಟೇರಿಯನ್ ಆಹಾರ ಸೇವಿಸುವುದನ್ನು ಎಬಿವಿಪಿ ಕಾರ್ಯಕರ್ತರು ತಡೆದರು ಎಂದು ಜೆಎನ್ ಯುಎಸ್ ಯು ಕಾರ್ಯಕರ್ತರು ಆರೋಪಿಸಿದ್ದಾರೆ. ಆದರೆ ಇದನ್ನು ಎಬಿವಿಪಿ ಅಲ್ಲಗಳೆದಿದ್ದು, ರಾಮನವಮಿ ಅಂಗವಾಗಿ ಹಾಸ್ಟೆಲ್ ನಲ್ಲಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮಕ್ಕೆ ಎಡಪಂಥೀಯರು ಅಡ್ಡಿಪಡಿಸಿದ್ದಾರೆ ಎಂದು ದೂರಿದ್ದಾರೆ.