Advertisement

ವಂಚಕ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಿ : ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌

07:22 PM Nov 27, 2021 | Team Udayavani |

ಬೆಂಗಳೂರು: ಅಧಿಕಬಡ್ಡಿ ಹಾಗೂ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಹಣ ವಸೂಲಿ ಮಾಡುವ ಕಂಪನಿಗಳ ಬಗ್ಗೆ  ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಹೇಳಿದರು.

Advertisement

ಜೆ.ಪಿ.ನಗರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಮಾಸಿಕ ಜನಸಂಪರ್ಕ ದಿವಸ ಕಾರ್ಯಕ್ರಮದಲ್ಲಿ  ವಂಚನೆ ಪ್ರಕರಣಗಳ ಸಂಬಂಧ ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು, ಅಧಿಕ ಬಡ್ಡಿ ಮತ್ತು ಮನಿ ಡಬ್ಲಿಂಗ್‌ ಮಾಡಿಕೊಡುವುದಾಗಿ ಆಮಿಷವೊಡ್ಡಿ ವಂಚಿಸುವುದು ನಿಯಂತ್ರಿಸಬೇಕು ಎಂಬ ಸಾರ್ವಜನಿಕರ ಮನವಿಗೆ ಪ್ರತಿಕಿಯಿಸಿ, ಅಂತಹ ವ್ಯಕ್ತಿಗಳು, ಕಂಪನಿಗಳು ನಗರದಲ್ಲಿ ಹೆಚ್ಚಾಗಿವೆ. ಅವರ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಅದರೊಂದಿಗೆ ಸಾರ್ವಜನಿಕರು ಕೂಡ ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಧಿಕ ಬಡ್ಡಿ ಕೊಡುತ್ತೇನೆ. ಹಣ ಎರಡು ಪಟ್ಟು ಮಾಡಿಕೊಡುತ್ತೇನೆ ಎಂದು ನಂಬಿಸಿದಾಗ, ಹೂಡಿಕೆ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ರಸ್ತೆಯ ಇಕ್ಕೆಲಗಳಲ್ಲಿ ಹುಡುಗರ ಗುಂಪುಕಟ್ಟಿಕೊಂಡು ನಿಂತಿರುತ್ತಾರೆ. ಅದನ್ನು ಪ್ರಶ್ನಿಸಿದರೆ, ತಮ್ಮ ಮೇಲೆಯೇ ಕೂಗಾಡುತ್ತಾರೆ. ಅಲ್ಲಡೆ ಗಸ್ತು ಹೆಚ್ಚಳ ಮಾಡಬೇಕು ಎಂದು ಸಾರ್ವಜನಿಕರೊಬ್ಬರು ಹೇಳಿದರು. ಅದಕ್ಕೆ ಉತ್ತರಿಸಿದ ಆಯುಕ್ತರು, ಪೊಲೀಸ್‌ ಗಸ್ತು ಹೆಚ್ಚಳ ಮಾಡಲಾಗುತ್ತದೆ. ಜತೆಗೆ ಸಾರ್ವಜನಿಕರು ಅಂತಹ ಪುಂಡ ಯುವಕರ ಗುಂಪು ಕಂಡಾಗ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಇದನ್ನೂ ಓದಿ : ಕಾಂಗ್ರೆಸ್‌ನಿಂದ ಮಾತ್ರ ಗ್ರಾಮೀಣ ಅಭಿವೃದ್ಧಿ ಸಾಧ್ಯ: ಹೆಚ್.ಸಿ.ಮಹದೇವಪ್ಪ

ಪಾದಚಾರಿ ಮಾರ್ಗ ತೆರವು ಮಾಡಿ

Advertisement

ರಸ್ತೆಗಳ ಎರಡು ಕಡೆ ಪಾದಚಾರಿ ಮಾರ್ಗಗಳಲ್ಲಿ ತರಕಾರಿ, ಆಹಾರ ಪದಾರ್ಥ ಮಾರಾಟಗಾರರು ಹೆಚ್ಚಾಗಿದ್ದಾರೆ. ಕಿರಿದಾದ ರಸ್ತೆಗಳಲ್ಲಿ ನಡೆದುಕೊಂಡು ಹೋಗಲು ಕಷ್ಟವಾಗುತ್ತದೆ. ಪಾರ್ಕಿಂಗ್‌ ಸಮಸ್ಯೆಯನ್ನು ಪರಿಹಾರ ಮಾಡಬೇಕು ಎಂದು ಸಾರ್ವಜನಿಕರು ದೂರುಗಳನ್ನು ನೀಡಿದರು.

ಅದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್‌ ಆಯುಕ್ತರು, ಸಂಚಾರ ಪೊಲೀಸರು ಪಾದಚಾರಿ ಮಾರ್ಗ ತೆರವು ಕಾರ್ಯವನ್ನು ಕೈಗೊಂಡಿದ್ದಾರೆ. ಹಂತ-ಹಂತವಾಗಿ ತೆರವು ಮಾಡಲಾಗುತ್ತದೆ. ಹಾಗೆಯೇ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ವಿಭಾಗ ಡಿಸಿಪಿ ಹರೀಶ್‌ ಪಾಂಡೆ, ಜಯನಗರ ಉಪವಿಭಾಗ ಎಸಿಪಿ ಕೆ.ವಿ.ಶ್ರೀನಿವಾಸ್‌, ದಕ್ಷಿಣ ಉಪವಿಭಾಗ ಎಸಿಪಿ ಶ್ರೀನಿವಾಸ್‌ ಹಾಗೂ ಇತರೆ ಅಧಿಕಾರಿಗಳು ಇದ್ದರು.

ಇದೇ ವೇಳೆ ಎಲ್ಲ ವಿಭಾಗಗಳ ಡಿಸಿಪಿಗಳು ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸಿ ಸಾರ್ವಜನಿಕರಿಗೆ ಸಲಹೆ, ಸೂಚನೆಗಳನ್ನು ನೀಡಿದರು. ಕೆಲವೊಂದು ಸ್ಥಳದಲ್ಲೇ ಬಗೆಹರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next