Advertisement

ನಗರ ಹಾಳು ಮಾಡಿದ ಕ್ರಿಮಿನಲ್‌ಗ‌ಳು

12:20 PM May 20, 2018 | Team Udayavani |

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರನ್ನು ಹಾಳುಮಾಡಿದ ಫ‌ಸ್ಟ್‌ಕ್ಲಾಸ್‌ ಕ್ರಿಮಿನಲ್‌ಗ‌ಳು ನಾವು (ಬೆಂಗಳೂರಿಗರು) ಎಂದು ಪರಿಸರವಾದಿ ಡಾ.ಎ.ಎನ್‌. ಯಲ್ಲಪ್ಪರೆಡ್ಡಿ ಬೇಸರ ವ್ಯಕ್ತಪಡಿಸಿದರು. 

Advertisement

ನಗರದ ನಯನ ಸಭಾಂಗಣದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಮಾತನಾಡಿದ ಅವರು, ಪ್ರಪಂಚದ ಯಾವುದೇ ನಗರಗಳಲ್ಲಿ ಇಲ್ಲದಷ್ಟು ನೈಸರ್ಗಿಕ ಸಂಪತ್ತು ಈ ಉದ್ಯಾನ ನಗರಿಯಲ್ಲಿತ್ತು. ಇದೊಂದು ರೀತಿ “ಕಂಫ‌ರ್ಟ್‌ ಝೋನ್‌’ ಆಗಿತ್ತು.

ಅಂದು ಮಹಾತ್ಮ ಗಾಂಧಿ ಕೂಡ ತಮ್ಮ ಚಿಕಿತ್ಸೆಗಾಗಿ ಇಲ್ಲಿನ ನಂದಿಬೆಟ್ಟವನ್ನು ಆಯ್ಕೆ ಮಾಡಿಕೊಂಡಿದ್ದೂ ಇದೇ ಕಾರಣಕ್ಕಾಗಿ. ಐದು ನದಿಗಳು, 550 ಜಾತಿಯ ವೃಕ್ಷ ಸಮೂಹ, ಸಾವಿರಾರು ಕೆರೆಗಳು ಇಲ್ಲಿದ್ದವು. ಆದರೆ, ಇಂದು ಅವೆಲ್ಲವನ್ನೂ ನಾವು ನಾಶಪಡಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಫ‌ಸ್ಟ್‌ಕ್ಲಾಸ್‌ ಕ್ರಿಮಿನಲ್‌ಗ‌ಳು ಎಂದು ಸೂಚ್ಯವಾಗಿ ಹೇಳಿದರು. 

ನಗರವನ್ನು ಈ ರೀತಿ ಬೆಳೆಯಲು ಬಿಡಬಾರದಿತ್ತು. ಅಷ್ಟರಮಟ್ಟಿಗೆ ಅಭಿವೃದ್ಧಿ ನಮ್ಮನ್ನು ಆವರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಜನ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಬೆಳ್ಳಂದೂರು ಕೆರೆಯೊಂದರಲ್ಲೇ 80ರ ದಶಕದಲ್ಲಿ 40ಕ್ಕೂ ಹೆಚ್ಚು ಪ್ರಕಾರದ 10 ಸಾವಿರ ಪಕ್ಷಿಗಳು ಸಂತಾನ ಅಭಿವೃದ್ಧಿಗೆ ಬರುತ್ತಿದ್ದವು.

ಆದರೆ, ಈಗ ಅಲ್ಲಿ ಬರೀ ನೊರೆ ಬರುತ್ತಿದೆ. ಶತಮಾನಗಳ ಹಿಂದೆ ಸ್ಥಳೀಯರು ತಮ್ಮ ಆಸ್ತಿ ಮಾರಿ, ಆಭರಣಗಳನ್ನು ಅಡ ಇಟ್ಟು ಕೆರೆಗಳನ್ನು ಕಟ್ಟಿಸಿದ್ದರು. ಅವೆಲ್ಲವುಗಳನ್ನು ಅತಿಕ್ರಮಣ ಮಾಡಿಕೊಂಡಿರುವ ಕೋಟ್ಯಾಧೀಶರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಮೀಕ್ಷೆಯಲ್ಲಿ ಮೊಬೈಲ್‌, ಟಿವಿ!: ಆರ್ಥಿಕ ಸಮೀಕ್ಷೆಯಲ್ಲಿ ಜನರ ಬಳಿ ಟಿವಿ, ಮೊಬೈಲ್‌, ಬೈಕ್‌, ಫ್ರಿಡ್ಜ್ ಇದೆಯೇ ಎಂದು ಸರ್ಕಾರ ಮಾಹಿತಿ ಪಡೆಯುತ್ತದೆ. ಆದರೆ, ಸಮೀಕ್ಷೆ ನಡೆಯುವ ಆ ಪ್ರದೇಶಗಳಲ್ಲಿ ಕೆರೆ ಬತ್ತಿರುವುದು, ಅಂತರ್ಜಲಮಟ್ಟ ಕುಸಿದಿರುವುದು, ಹಸಿರೀಕರಣ ಮರೆಯಾಗಿದ್ದರೂ ಆ ಬಗ್ಗೆ ಪ್ರಸ್ತಾಪವೂ ಇರುವುದಿಲ್ಲ. ಇದರರ್ಥ ಸರ್ಕಾರದ ನೀತಿಗಳಲ್ಲೂ ಬದಲಾವಣೆ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. 

ಇದಕ್ಕೂ ಮುನ್ನ “ಮಾತುಕತೆ’ಯಲ್ಲಿ ತಾವು ಇಂಡಿಯನ್‌ ಫಾರೆಸ್ಟ್‌ ಕಾಲೇಜು ವಿದ್ಯಾರ್ಥಿಯಾಗಿ ಆಯ್ಕೆಯಾದಾಗ ಮನೆಗೆ ಕರೆದು ಪಫ್, ಕೇಕ್‌, ಹಣ್ಣು ತಿನ್ನಿಸಿದ ಟೈಲರ್‌ ಮುನಿಯಪ್ಪ, ಐಎಫ್ಎಸ್‌ ಪೂರೈಸಿದಾಗ ಮನೆಗೆ ಕರೆದು ಆತಿಥ್ಯ ನೀಡಿದ್ದ ಪಕ್ಕದ ಮನೆಯ ಅಮ್ಮನನ್ನು ಡಾ.ಯಲ್ಲಪ್ಪರೆಡ್ಡಿ ಸ್ಮರಿಸಿಕೊಂಡರು. 

ಮಕ್ಕಳು ಅರಳು ಹುರಿದಂತೆ ಮೊಬೈಲ್‌ ಫೋನ್‌ ಮತ್ತು ಕಾರುಗಳ ಹೆಸರುಗಳನ್ನು ಪಟಪಟನೆ ಹೇಳುವ ಮಕ್ಕಳು, 20 ಮರಗಳ ಹೆಸರು ಹೇಳಲು ಕಷ್ಟಪಡುತ್ತಾರೆ. ಇದು ಮಕ್ಕಳನ್ನು ನಾವು ಬೆಳೆಸುತ್ತಿರುವ ರೀತಿಗೆ ಕನ್ನಡಿ ಹಿಡಿಯುತ್ತದೆ. ಪೋಷಕರು ಮಕ್ಕಳಲ್ಲಿ ನಿಸರ್ಗದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು.
-ಡಾ.ಎ.ಎನ್‌. ಯಲ್ಲಪ್ಪರೆಡ್ಡಿ, ಪರಿಸರವಾದಿ

Advertisement

Udayavani is now on Telegram. Click here to join our channel and stay updated with the latest news.

Next