ವಾಷಿಂಗ್ಟನ್: ಒಂದು ವೇಳೆ ಭಾರತದ ಸಂಸತ್ ನ ಉಭಯ(ಲೋಕಸಭೆ, ರಾಜ್ಯಸಭೆ) ಸದನಗಳಲ್ಲಿಯೂ ಪೌರತ್ವ (ತಿದ್ದುಪಡಿ) ವಿಧೇಯಕ ಅಂಗೀಕಾರವಾದರೆ ಗೃಹ ಸಚಿವ ಅಮಿತ್ ಶಾ ವಿರುದ್ಧ ನಿರ್ಬಂಧ ವಿಧಿಸಬೇಕು ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಮೆರಿಕದ ಫೆಡರಲ್ ಕಮಿಷನ್ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಈಗಾಗಲೇ ಪೌರತ್ವ ತಿದ್ದುಪಡಿ ವಿಧೇಯಕದ ಬಗ್ಗೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ತಿದ್ದುಪಡಿ ವಿಧೇಯಕ ವಿರೋಧಿಸಿ ಅಸ್ಸಾಂ ಸೇರಿದಂತೆ ಈಶಾನ್ಯದ ಕೆಲವು ರಾಜ್ಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಸೋಮವಾರದಿಂದ 48 ಗಂಟೆಗಳ ಕಾಲ ಬಂದ್ ಗೆ ಕರೆ ನೀಡಿವೆ.
ಪ್ರಸ್ತಾವಿತ ತಿದ್ದುಪಡಿ ವಿಧೇಯಕದ ಪ್ರಕಾರ 2014ರ ಡಿಸೆಂಬರ್ 31ರೊಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದು ನೆಲೆಸಿರುವ ಹಿಂದು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯದ ನಿರಾಶ್ರಿತರಿಗೆ ಕಾಯಂ ಪೌರತ್ವ ನೀಡುವುದು ವಿಧೇಯಕದ ನಿಲುವಾಗಿದೆ.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ಕಮಿಷನ್ (ಯುಎಸ್ ಸಿಐಆರ್ ಎಫ್) ಸೋಮವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕಾರವಾಗಿರುವುದು ಆಳವಾದ ಸಮಸ್ಯೆಗೆ ಕಾರಣವಾಗಲಿದೆ ಎಂದು ತಿಳಿಸಿದೆ.
ಒಂದು ವೇಳೆ ಪೌರತ್ವ ತಿದ್ದುಪಡಿ ವಿಧೇಯಕ ಸಂಸತ್ ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡರೆ, ಅಮೆರಿಕ ಸರ್ಕಾರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಪ್ರಮುಖ ನಾಯಕರ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಆಯೋಗ ಮನವಿ ಮಾಡಿಕೊಂಡಿದೆ.
ಸೋಮವಾರ ಲೋಕಸಭೆಯಲ್ಲಿ ವಿವಾದಿತ ಪೌರತ್ವ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದು, 311 ಸಂಸದರು ಪರವಾಗಿ ಮತಚಲಾಯಿಸುವ ಮೂಲಕ ಅಂಗೀಕಾರಗೊಂಡಿತ್ತು. 80 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು. ಇನ್ನು ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳಬೇಕಾಗಿದೆ. ರಾಜ್ಯಸಭೆಯಲ್ಲಿ ಎನ್ ಡಿಎ ಸದಸ್ಯ ಬಲ 102, ಇಲ್ಲಿ ಸರಳ ಬಹುಮತ ಸಂಖ್ಯೆ 123 ಬೇಕಾಗಿದೆ.