Advertisement

Canada: ಕೆನಡಾದಲ್ಲಿನ ಹ*ತ್ಯೆ ಪ್ರಕರಣದ ಹಿಂದೆ ಗೃಹ ಸಚಿವ ಅಮಿತ್‌ ಶಾ ಕೈವಾಡ! ಆರೋಪ

01:42 PM Oct 30, 2024 | Team Udayavani |

ಖಲಿಸ್ತಾನಿ ಭಯೋ*ತ್ಪಾದಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಅಲ್ಲದೇ ಆರೋಪ, ಪ್ರತ್ಯಾರೋಪ ಮುಂದುವರಿದಿತ್ತು. ಏತನ್ಮಧ್ಯೆ ಹೊಸ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ.

Advertisement

ಭಾರತದ ವಿರುದ್ಧದ ಗೌಪ್ಯ ಮಾಹಿತಿಯನ್ನು ಕೆನಡಾದ ಇಬ್ಬರು ಹಿರಿಯ ಅಧಿಕಾರಿಗಳೇ ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ ಗೆ ಸೋರಿಕೆ ಮಾಡಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರ್ಯೂಡೊ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ನಥಾಲಿ ಡ್ರೂಯಿನ್ ಮಂಗಳವಾರ ಒಪ್ಪಿಕೊಳ್ಳುವ ಮೂಲಕ ಮತ್ತೊಂದು ತಿರುವು ಪಡೆದುಕೊಂಡಿದೆ.

ನಿಜ್ಜರ್‌ ಕೊ*ಲೆ ವಿಚಾರದಲ್ಲಿ ಭಾರತ ಮತ್ತು ಕೆನಡಾ ತಮ್ಮ ರಾಯಭಾರಿಗಳನ್ನು ವಜಾಗೊಳಿಸುವ ಮೂಲಕ ರಾಜತಾಂತ್ರಿಕ ಸಂಬಂಧ ಹಳಸಿತ್ತು. ಅಷ್ಟೇ ಅಲ್ಲ ಕೆನಡಾ ಆರೋಪ ಆಧಾರ ರಹಿತವಾಗಿದ್ದು, ಭಾರತದ ಕೈವಾಡದ ಬಗ್ಗೆ ಟ್ರ್ಯುಡೊ ಯಾವುದಾದರು ಪುರಾವೆ ಒದಗಿಸಲಿ ಎಂದು ಸವಾಲು ಹಾಕಿತ್ತು.

ಮತ್ತೊಂದು ಸ್ಫೋಟಕ ಮಾಹಿತಿ ಇದೀಗ ರಾಷ್ಟ್ರರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ. ಕೆನಡಾ ನೆಲದಲ್ಲಿ ಭಯದ ವಾತಾವರಣದ ಚಟುವಟಿಕೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಿರ್ದೇಶನ ನೀಡಿದ್ದರು ಎಂಬ ಅಂಶ ಸೋರಿಕೆಯಾದ ಮಾಹಿತಿಯಲ್ಲಿದೆ ಎಂದು ವರದಿ ವಿವರಿಸಿದೆ.

Advertisement

ಖಲಿಸ್ತಾನಿ ಭಯೋ*ತ್ಪಾದಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಕೊ*ಲೆಯ ಹಿಂದೆ ಭಾರತದ ಕೈವಾಡ ಇದೆ ಎಂದು ರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸರು ಸಾರ್ವಜನಿಕವಾಗಿ ಆರೋಪಿಸುವ ಮೊದಲೇ ಕೆನಡಾ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ನಥಾಲೆ ಡ್ರೂಯಿನ್‌, ಗುಪ್ತಚರ ಸಲಹೆಗಾರ, ವಿದೇಶಾಂಗ ವ್ಯವಹಾರಗಳ ಡೆಪ್ಯುಟಿ ಮಿನಿಸ್ಟರ್‌ ಡೇವಿಡ್‌ ಮೋರಿಸನ್‌ ಗೌಪ್ಯ ಮಾಹಿತಿಯನ್ನು ವಾಷಿಂಗ್ಟನ್‌ ಪೋಸ್ಟ್‌ ಗೆ ಸೋರಿಕೆ ಮಾಡಿದ್ದರು ಎಂದು ವರದಿ ತಿಳಿಸಿದೆ.

ಅಮಿತ್‌ ಶಾ ಮತ್ತು ಭಾರತದ ಗುಪ್ತಚರ ಸಂಸ್ಥೆ ರಾನ ಹಿರಿಯ ಅಧಿಕಾರಿಗಳು ನಿಜ್ಜರ್‌ ಹ*ತ್ಯೆಗೆ ಅನುಮತಿ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ವಾಷಿಂಗ್ಟನ್‌ ಪೋಸ್ಟ್‌ ವರದಿ ಪ್ರಕಟಿಸಿತ್ತು.

ಸುಬ್ರಮಣಿಯನ್‌ ಸ್ವಾಮಿ  ಹೇಳಿದ್ದೇನು?

ಕೆನಡಾ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ, ಉ*ಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹ*ತ್ಯೆಗೈಯಲು ಅಮಿತ್‌ ಶಾ ನಿರ್ದೇಶನ ನೀಡಿದ್ದರು ಎಂಬ ಕೆನಡಾ ಸರ್ಕಾರದ ಆರೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಬೇಕು ಎಂದು ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್‌ ಸ್ವಾಮಿ ಬುಧವಾರ (ಅ.30) ಒತ್ತಾಯಿಸಿದ್ದಾರೆ.

ಮತ್ತೊಂದು ಎಕ್ಸ್‌ ಪೋಸ್ಟ್‌ ನಲ್ಲಿ, ಒಂದೋ ಅಮಿತ್‌ ಶಾ ಸುದ್ದಿಗೋಷ್ಠಿ ಕರೆದು ಕೆನಡಾ ಆರೋಪವನ್ನು ನಿರಾಕರಿಸಬೇಕು. ಇಲ್ಲದಿದ್ದರೆ ಕೋರ್ಟ್‌ ತೀರ್ಪು ಬರುವವರೆಗೆ ಪ್ರಧಾನಿ ಮೋದಿ ಅವರು ಶಾ ಅವರನ್ನು ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸ್ವಾಮಿ ಆಗ್ರಹಿಸಿದ್ದಾರೆ.

ಒಂದು ವೇಳೆ ಪ್ರಧಾನಿ ಮೋದಿ ಅಥವಾ ಅಮಿತ್‌ ಶಾ ಉತ್ತರ ನೀಡದಿದ್ದರೆ ಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಸುಬ್ರಮಣಿಯನ್‌ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next