Advertisement

ಸಿನ್ಸಿನಾಟಿ ಟೆನಿಸ್‌: ಹಾಲೆಪ್‌- ಮುಗುರುಜಾ  ಫೈನಲ್‌

02:21 PM Aug 21, 2017 | |

ಸಿನ್ಸಿನಾಟಿ: ರೊಮೇನಿಯಾದ ಸಿಮೋನಾ ಹಾಲೆಪ್‌ ವಿಶ್ವದ ನಂಬರ್‌ ವನ್‌ ಟೆನಿಸ್‌ ಆಟಗಾರ್ತಿ ಎನಿಸಿ ಕೊಳ್ಳುವತ್ತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಿನ್ಸಿನಾಟಿ ಟೆನಿಸ್‌ ಪಂದ್ಯಾವಳಿಯ ಫೈನಲ್‌ ತಲುಪಿರುವ ಅವರು ಇಲ್ಲಿ ಚಾಂಪಿಯನ್‌ ಎನಿಸಿಕೊಂಡರೆ ನಂ.1 ಗೌರ ವಕ್ಕೆ ಪಾತ್ರರಾಗಲಿದ್ದಾರೆ. 

Advertisement

ಸಿಮೋನಾ ಹಾಲೆಪ್‌ ಅವರಿಗೆ ನಂ.1 ಅವಕಾಶ ಎದುರಾಗಿರುವುದು ಪ್ರಸಕ್ತ ಋತುವಿನಲ್ಲಿ ಇದು 3ನೇ ಸಲ ಎಂಬುದು ವಿಶೇಷ. ಹಿಂದಿನೆರಡೂ ಸಲ ಅವರಿಗೆ ಇದು ಮರೀಚಿಕೆಯಾಗಿತ್ತು. 3ನೇ ಪ್ರಯತ್ನದಲ್ಲಿ ಹಾಲೆಪ್‌ ಇದನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗುವರೇ ಎಂಬುದೊಂದು ಕುತೂಹಲ. ಆಗ ಹಾಲೆಪ್‌ ನಂಬರ್‌ ವನ್‌ ಗೌರವಕ್ಕೆ ಪಾತ್ರರಾಗಲಿರುವ ವಿಶ್ವದ 24ನೇ ಆಟಗಾರ್ತಿ ಎನಿಸಿಕೊಳ್ಳಲಿದ್ದಾರೆ.

ದ್ವಿತೀಯ ರ್‍ಯಾಂಕಿಂಗಿನ ಸಿಮೋನಾ ಹಾಲೆಪ್‌ ಸಿನ್ಸಿನಾಟಿ ಸೆಮಿಫೈನಲ್‌ ಪಂದ್ಯದಲ್ಲಿ ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಅವರಿಗೆ 6-2, 6-1 ಅಂತರದಿಂದ ಸೋಲುಣಿ ಸಿದರು. ಫೈನಲ್‌ನಲ್ಲಿ ಅವರ ಎದುರಾಳಿ ವಿಂಬಲ್ಡನ್‌ ಚಾಂಪಿ ಯನ್‌ ಖ್ಯಾತಿಯ ಗಾರ್ಬಿನ್‌ ಮುಗುರುಜಾ. ಅವರು ಅಗ್ರ ರ್‍ಯಾಂಕಿಂಗ್‌ನ ಹಾಲಿ ಚಾಂಪಿಯನ್‌ ಕ್ಯಾರೋಲಿನಾ ಪ್ಲಿಸ್ಕೋವಾಗೆ 6-3, 6-2 ಅಂತರದ ಆಘಾತವಿಕ್ಕಿದರು.

“ನಾನು ನಂಬರ್‌ ವನ್‌ ಎನಿಸಿಕೊಳ್ಳಬೇಕು. ಇದಕ್ಕೆ ನಾನು ಅರ್ಹಳೂ ಆಗಿದ್ದೇನೆ. ಈ ಬಾರಿ ವೈಫ‌ಲ್ಯ ಕಾಣಲಿಕ್ಕಿಲ್ಲ ಎಂದು ಭಾವಿಸಿದ್ದೇನೆ…’ ಎಂದಿದ್ದಾರೆ ಹಾಲೆಪ್‌. ಈ ಕೂಟದಲ್ಲಿ ಒಂದೂ ಸೆಟ್‌ ಕಳೆದುಕೊಳ್ಳದ ಹಾಲೆಪ್‌ಗೆ ಕಳೆದ ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ನಲ್ಲಿ ಆಗ್ರಸ್ಥಾನ ಅಲಂಕರಿಸುವ ಅವಕಾಶ ಕೈತಪ್ಪಿತ್ತು. ರೊಲ್ಯಾಂಡ್‌ ಗ್ಯಾರೋಸ್‌ ಫೈನಲ್‌ನಲ್ಲಿ ಅವರು ಜೆಲೆನಾ ಒಸ್ಟಾಪೆಂಕೊಗೆ ಶರಣಾದರೆ, ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಜೊಹಾನ್ನಾ ಕೊಂಟಾಗೆ ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next