ಬೆಂಗಳೂರು: ಚರ್ಚ್‌ಗಳಲ್ಲಿ ದರೋಡೆ ಮಾಡುತ್ತಿದ್ದ ಅಂತರರಾಜ್ಯ ಆರೋಪಿಯನ್ನು ನಗರದ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಕೇರಳದ ಎರ್ನಾಕುಲಂನ ಅಲೆಕ್ಸ್ ಅಲಿಯಾಸ್ ಸೂರ್ಯ(29) ಬಂಧಿತ. ಈತ ಜ.31ರಂದು ತಮಿಳುನಾಡಿನ ವೇಲಾಂಕಣಿ ಚರ್ಚ್‌ನ ಹುಂಡಿ ಹೊಡೆದು 2.5 ಲಕ್ಷ ರೂ. ನಗದು 60 ಗ್ರಾಂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದ.
ವಿದೇಶಗಳಿಂದ ಬರುವ ಕೋಟ್ಯಂತರ ರೂ.ದೇಣಿಗೆ ಸದ್ಭಳಕೆ ಮಾಡಿಕೊಳ್ಳುವಲ್ಲಿ ಚರ್ಚ್ ವಿಫಲವಾಗಿವೆ ಎಂದು ಕೋಪಗೊಂಡು ಆರೋಪಿ ಚರ್ಚ್‌ಗಳಲ್ಲಿ ಕಳವು ಮಾಡುತ್ತಿದ್ದ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಚಲನವಲನಗಳು ಚರ್ಚ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಆಧಾರದ ಮೇಲೆ ನಾಗಪಟ್ಟಣಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಚರ್ಚ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗಾಗಿ ಪೊಲೀಸರು ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹುಡುಕಾಡ ನಡೆಸುತ್ತಿದ್ದರೆ, ಆರೋಪಿ ನಗರದಲ್ಲಿ ತಲೆಮರೆಸಿಕೊಂಡು ಕೆಂಗೇರಿಯಲ್ಲಿ ವಾಸವಾಗಿದ್ದ.
ಈ ನಡುವೆ ಮಡಿವಾಳ ವ್ಯಾಪ್ತಿಯಲ್ಲಿ ತಮಿಳುನಾಡಿನಿಂದ ಆಗಮಿಸಿ ವಾಹನ ಕಳುವು ಮಾಡುವವರ ಹಾವಳಿ ಹೆಚ್ಚಾಗಿತ್ತು. ಇವರನ್ನು ಹಿಡಿಯಲು ಡಿಸಿಪಿ ಬೋರಲಿಂಗಯ್ಯ ಬೊಮ್ಮನಹಳ್ಳಿ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಿದ್ದರು.
ಈ ತಂಡದ ಕಾರ್ಯಾಚರಣೆ ಸಂದರ್ಭದಲ್ಲಿ ಅಲೆಕ್ಸ್ ಬಗ್ಗೆಯೂ ನಿಗಾ ವಹಿಸಲಾಗಿತ್ತು. ಅಲೆಕ್ಸ್ ಕದ್ದ ಆಭರಣ ಅಡವಿಡಲು ಗಿರವಿ ಅಂಗಡಿಗೆ ಬರುವ ಖಚಿತ ಮಾಹಿತಿ ಪಡೆದು ಬಂಧಿಸಲಾಯಿತು. ಈತನ ವಿಚಾರಣೆ ವೇಳೆ ಚರ್ಚನಲ್ಲಿ ದರೋಡೆ ಮಾಡಿರುವುದು ಬಯಲಾಯಿತು.