Advertisement

ದೇವಪೂಜೆಗೆ ಕ್ರಿಸ್ತ ಬಾಳಿದ “ಪ್ರೀತಿ ಪಥ’

05:15 PM Mar 26, 2019 | |

ನಮ್ಮ ರಾಷ್ಟ್ರವನ್ನು ಪ್ರೀತಿಸಬೇಕಾದದ್ದು ಕರ್ತವ್ಯ. ರಾಷ್ಟ್ರವನ್ನು ಪ್ರೀತಿಸುವುದೆಂದರೆ ಸಂವಿಧಾನವನ್ನು ಗೌರವಿಸುವುದು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಡುವುದು. ಸಮಾಜದೆಡೆಗೆ ನಮಗಿರುವ ಜವಾಬ್ದಾರಿಯನ್ನು ಪೂರೈಸುವುದು. ಇದೂ ಪ್ರೀತಿಯೇ. ಈ ಪ್ರೀತಿಯೇ ದೇವ ಉಪಾಸನೆಯ ಮಹಾಮಾರ್ಗವಾಗಿದೆ.

Advertisement

ಕ್ರಿಸ್ತನ ಜನನದ ಸಂಭ್ರಮವನ್ನು ನಾವು ಇಂದು ಆಚರಿಸುತ್ತಿದ್ದೇವೆ. ಬೆತ್ಲೆಹೇಮ್‌ನ ಗೋದಲಿಯಲ್ಲಿ ಜನಿಸಿ, ಕಲ್ವಾರಿಯ ಶಿಲುಬೆಯಲ್ಲಿ ಜೀವ ಸಮರ್ಪಿಸಿದ ಕ್ರಿಸ್ತ ದಿವ್ಯ ಪುರುಷನೆನಿಸಿಕೊಳ್ಳುವುದು ಈ ಎರಡೇ ಕಾರಣಗಳಿಂದಲ್ಲ. ಅವೇ ಮುಖ್ಯವಾಗಿದ್ದರೆ ಇಂದಿನ ದಿನಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕ್ರಿಸ್ತನ ಹುಟ್ಟಿನ ಆಚರಣೆಗೆ ಮಹತ್ವ ಬಂದಿರುವುದು ಆತ ತನ್ನ ಜನನ ಹಾಗೂ ಮರಣದ ಮಧ್ಯೆ ಬಾಳಿದ-ಬೋಧಿಸಿದ ವಿಚಾರಗಳಿಂದ. ಅನಾಥರು, ರೋಗಿಷ್ಠರು ಅನ್ಯಾಯಕ್ಕೊಳಗಾದವರೆಡೆಗೆ ಕ್ರಿಸ್ತ ತೋರಿದ ಪ್ರೀತ್ಯಾದರ ಅಪಾರ. ಇದನ್ನೇ ಕ್ರಿಸ್ತ ಬೋಧಿಸಿದ. ಆತನ ಬಾಳೇ ಪ್ರೀತಿಯ ಪಥ. ಇದೇ ದೇವ ಉಪಾಸನೆಯ ಪರಮ ಪಥ ಎಂಬುದು ಕ್ರಿಸ್ತ ನೀಡಿದ ಪರಮೋಚ್ಚ ಕಟ್ಟಳೆ.

ಯಾವುದೇ ವ್ಯಕ್ತಿ ಮಹಾತ್ಮ ಅಥವಾ ದಿವ್ಯಪುರುಷ ಎನಿಸಿಕೊಳ್ಳುವುದು ಆತನ ಪವಾಡಗಳಿಂದಲ್ಲ. ಬದಲಾಗಿ ಆತನ ಬದುಕು ಮತ್ತು ವಿಚಾರಗಳಿಂದ. ಇದು ಕ್ರಿಸ್ತನ ವಿಷಯದಲ್ಲಿ ಮಾತ್ರ ಆಲ್ಲ. ಕೃಷ್ಣ, ಮಹಮ್ಮದ್‌, ಬುದ್ಧ, ಸಮಾಜ ಸುಧಾರಕರಾದ ಬಸವಣ್ಣ, ನಾರಾಯಣಗುರು, ಗಾಂಧೀಜಿ, ಆಂಬೇಡ್ಕರ್‌, ವಿವೇಕಾನಂದರು ಹಾಗೂ ಇತರರನ್ನು ಆವರ ವಿಚಾರಗಳ ಸಲುವಾಗಿ, ಅವು ನಮ್ಮಲ್ಲಿ ಬೀರಿದ ಪ್ರಭಾವದ ಫ‌ಲವಾಗಿ ಅವರನ್ನು ಮಹಾತ್ಮರೆಂದು ಗೌರವಿಸುತ್ತೇವೆ.

ಮನುಜ ಧರ್ಮದ ಪರವಾಗಿರುವ ವಿಚಾರಗಳನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ. ಈ ಮೇಲೆ ಉಲ್ಲೇಖೀಸಿದ ಮಹಾತ್ಮರು ಬೋಧಿಸಿದ್ದು ಧರ್ಮಗಳನ್ನಲ್ಲ, ಮಾನವೀಯ ವಿಚಾರಗಳನ್ನು. ಧರ್ಮ ಮಾನವೀಯತೆಯನ್ನು ಅನುಸರಿಸಲು ಇರುವ ಮಾರ್ಗ. ಮಾನವೀಯತೆಗೆ ಧರ್ಮ ಕಡ್ಡಾಯವಲ್ಲ. ಕ್ರಿಸ್ತ, ಕೃಷ್ಣ. ಮಹಮ್ಮದ್‌, ಬುದ್ಧರು ಬೋಧಿಸಿದ ವಿಚಾರಗಳು ಮಾನವೀಯ ಧರ್ಮದ ಸಾರಾಂಶ. ಅದಕ್ಕಾಗಿಯೇ ಅವರ ವಿಚಾರಗಳನ್ನು ನಾವು ಪ್ರತಿನಿಧಿಸುತ್ತಿರುವ ಧರ್ಮದ ಹೊರತಾಗಿಯೂ ನಾವೆಲ್ಲರೂ ನೆಚ್ಚಿಕೊಂಡಿದ್ದೇವೆ.

ಯಾರ ವಿಚಾರಗಳು ಮಾನವೀಯತೆಯ ಪರವಾಗಿರದೆ ವಿನಾಶಕಾರಿ ದಾರಿಯಲ್ಲಿ ಸಾಗಿವೆಯೋ ಅಂಥ ವ್ಯಕ್ತಿಗಳನ್ನು ಎಲ್ಲ ವರ್ಗದ, ಎಲ್ಲ ಧರ್ಮದ ಜನರು ತಿರಸ್ಕರಿಸಿದ ದೃಷ್ಟಾಂತಗಳು ಇತಿಹಾಸದ ಪುಟಗಳಲ್ಲಿ ಹೇರಳವಾಗಿವೆ.
ಮನುಕುಲಕ್ಕೆ ಕ್ರಿಸ್ತನು ಬೋಧಿಸಿದ ಮಹತ್ವದ ವಿಚಾರವೆಂದರೆ ದೇವರನ್ನು ಹಾಗೂ ನಿನ್ನನ್ನು ಪ್ರೀತಿಸುವಷ್ಟೇ ನಿನ್ನ ನೆರೆಯವನನ್ನೂ ಪ್ರೀತಿಸು. ಈ ವಿಚಾರಕ್ಕೆ ಸರಿಸಮಾನವಾದ ಬೋಧನೆ ಮಹಾಭಾರತದ ಅನುಶಾಸನ ಪರ್ವ, ಇಸ್ಲಾಂನ ಹಾದಿತ್‌ (ಇಸ್ಲಾಂ ಬೋಧನೆಗಳು) ಹಾಗೂ ಬೌದ್ಧ ಧರ್ಮದ ಗ್ರಂಥಗಳಲ್ಲಿಯೂ ಇವೆ. ಹಾಗಾಗಿ ಎಲ್ಲ ಮಹಾಪುರುಷರ ವಿಚಾರಗಳೂ ಒಂದೇ ಆಶಯದ್ದಾಗಿವೆ.

Advertisement

ನೆರೆಯವ ಅಂದರೆ ಯಾರು? ಹೊಸ ಒಡಂಬಡಿಕೆಯಲ್ಲಿ ಕ್ರಿಸ್ತನು ಇದಕ್ಕೆ ನೀಡಿರುವ ಉತ್ತರ; ನಿರ್ಗತಿಕರು, ಶೋಷಿತರು, ಕಷ್ಟಪಡುವವರು ನೆರೆಯವರಾಗಿದ್ದಾರೆ. ನಾವು ದೇವರನ್ನು ಪ್ರೀತಿಸುವ ಪ್ರಯತ್ನದಲ್ಲಿ ವಿಫ‌ಲರಾಗುವುದು ಇಲ್ಲಿಯೇ. ನಮ್ಮ ನೆರೆಯವರನ್ನು ನಾವು ಪ್ರೀತಿಸಲು ವಿಫ‌ಲರಾದಾಗ ದೇವರನ್ನು ಪ್ರೀತಿಸಲು ಸಾಧ್ಯವಾಗುವುದಿಲ್ಲ. ದೇವರನ್ನು ಪೂಜಿಸುವುದಕ್ಕೆ ಕ್ರಿಸ್ತನು ಈ ಪ್ರೀತಿ ಪಥವನ್ನು ಸಾರಿದ್ದಾನೆ.

2018ನೇ ಇಸವಿಯ ಕೊನೆಯಲ್ಲಿ ನಾವಿದ್ದೇವೆ. 2018 ವರುಷಗಳ ಹಿಂದೆ ಕ್ರಿಸ್ತನು ನೀಡಿದ ವಿಚಾರ ಇಂದಿಗೆ ಪ್ರಸ್ತುತವೇ ಎಂಬ ಪ್ರಶ್ನೆ ಮೂಡುವುದೂ ಸಹಜ. ಪ್ರಶ್ನೆಗೆ ಉತ್ತರ ದೊರಕ ಬೇಕಾದರೆ ಪ್ರಸ್ತುತ ಸನ್ನಿವೇಶದಲ್ಲಿ ನನ್ನ ನೆರೆಯವರು ಯಾರೆಂದು ಆವಲೋಕಿಸಬೇಕಾಗುತ್ತದೆ. ಪ್ರಸ್ತುತ ನಮ್ಮ ನೆರೆಯವರೆಂದರೆ; ಅನ್ಯ ಧರ್ಮೀಯರು, ಅನ್ಯ ಜೀವನಶೈಲಿಯವರು.

ಮತ ನಿರಪೇಕ್ಷತೆ ಭಾರತದ ಸಂವಿಧಾನವು ಪ್ರಜೆಗಳಿಗೆ ನೀಡಿದ ಮಹತ್ತರವಾದ ಹಕ್ಕು. ವಿವಿಧ ಧರ್ಮದ, ಜೀವನ ಶೈಲಿಯ ಜನರು ಇಲ್ಲಿ ವಾಸಿಸುತ್ತಿದ್ದರೆ. ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಆಹಾರ ಶೈಲಿ, ಧಾರ್ಮಿಕತೆಯಲ್ಲಿ ವೈವಿಧ್ಯವಿದೆ. ಈ ವೈವಿಧ್ಯದಲ್ಲಿನ ಏಕತೆಯೇ ಭಾರತದ ಶ್ರೀಮಂತಿಕೆ. ಆದರೆ ಸಾಕಷ್ಟು ಬಾರಿ ವಿವಿಧ ಜೀವನ ಶೈಲಿಯ ಜನರ ಮಧ್ಯೆ ಘರ್ಷಣೆಗಳು ಉಂಟಾದಾಗ ನಮ್ಮ ಈ ಸಾಮರಸ್ಯದ ಶ್ರೀಮಂತಿಕೆ ಬಡವಾಗುತ್ತಿದೆ. ಹಾಗಾಗಿ ಒಂದು ಜೀವನಶೈಲಿಯನ್ನು ಒಪ್ಪಿಕೊಂಡ ಜನರು ಇನ್ನೊಂದು ಜೀವನ ಶೈಲಿಯನ್ನು ಅನುಸರಿಸುವ ಜನರನ್ನು ನೆರೆಯವರು ಎಂದು ಸ್ವೀಕರಿಸುವ ಅಗತ್ಯವಿದೆ.

ದುರ್ಬಲರು 
ಎಷ್ಟೇ ಅಭಿವೃದ್ಧಿ ಹೊಂದಿದರೂ ದೊಡ್ಡ ಪ್ರಮಾಣದಲ್ಲಿ ಜನರು ಬಡತನದಿಂದ ಜೀವಿಸುತ್ತಿದ್ದಾರೆ. ವಸತಿ, ಆಹಾರ, ಬಟ್ಟೆ, ಶಿಕ್ಷಣ, ಆರೋಗ್ಯ ಸೌಲಭ್ಯಗಳು ಕೈಗೆಟುಕದ ವರ್ಗ ನಮ್ಮೊಂದಿಗೆ ಇದೆ. ಉನ್ನತ ಶಿಕ್ಷಣ ಕೆಲವರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಕೈ ಚಾಚಿ ಯಾಚಿಸುವ ಮಕ್ಕಳನ್ನು, ದಿವ್ಯಾಂಗರನ್ನು ನಾವು ನಿತ್ಯ ಕಾಣುತ್ತೇವೆ. ಇವರೆಲ್ಲರೂ ನಮ್ಮ ನೆರೆಯವರೇ ಆಗಿದ್ದಾರೆ. ಅವರನ್ನು ಕ್ರಿಸ್ತ ಮಾಡಿದಂತೆ ಪ್ರೀತಿಯಿಂದ ಸೇವೆಗೈಯುವುದೇ ದೇವರ ಪೂಜೆಯಾಗಿದೆ.

ಅನ್ಯಾಯಕ್ಕೊಳಗಾದವರು 
ಕಳೆದ ಕೆಲವು ವರುಷಗಳಿಂದ ಆತ್ಯಾಚಾರಕ್ಕೊಳಪಟ್ಟ ಹೆಣ್ಣು ಮಕ್ಕಳೆಷ್ಟು? ಒತ್ತಡದಿಂದ ಮಡಿದ ಜೀವಗಳೆಷ್ಟು? ನ್ಯಾಯಕ್ಕಾಗಿ ಬೀದಿಗಳಿದ ಪೋಷಕರೆಷ್ಟು? ಸಾಕಷ್ಟು ಅಂಕಗಳನ್ನು ಪಡೆದರೂ ಲಂಚ, ಪ್ರಭಾವ, ಹಗರಣಗಳಿಂದ ಶಿಕ್ಷಣ ಹಾಗೂ ಉದ್ಯೋಗಗಳಿಂದ ವಂಚಿತರಾದ ವಿದ್ಯಾರ್ಥಿಗಳು, ಯುವಕರು ಎಷ್ಟು? ಇವರೆಲ್ಲ ನಮ್ಮ ನೆರೆಯವರೇ ಆಗಿದ್ದಾರೆ. ನಾವು ಎಂದಾದರೂ ಅವರ ಪರವಾಗಿ ಧ್ವನಿ ಎತ್ತಿದ್ದೇವೆಯೇ? ಧ್ವನಿ ಎತ್ತಿ ಅವರಿಗೆ ಉಪಕರಿಸಿದರೆ ಅದು ದೇವರ ಪೂಜೆಯೇ ಸರಿ.

ಪ್ರಜಾಪ್ರಭುತ್ವ, ಸಂವಿಧಾನ
ನಮ್ಮ ರಾಷ್ಟ್ರವನ್ನು ಪ್ರೀತಿಸಬೇಕಾದದ್ದು ಕರ್ತವ್ಯ. ರಾಷ್ಟ್ರವನ್ನು ಪ್ರೀತಿಸುವುದೆಂದರೆ ಸಂವಿಧಾನವನ್ನು ಗೌರವಿಸುವುದು. ಪ್ರಜಾ ಪ್ರಭುತ್ವ ದಲ್ಲಿ ನಂಬಿಕೆ ಇಡುವುದು. ಸಮಾಜದೆಡೆಗೆ ನಮಗಿರುವ ಜವಾಬ್ದಾರಿಯನ್ನು ಪೂರೈಸುವುದು. ಇದೂ ಪ್ರೀತಿಯೇ. ಈ ಪ್ರೀತಿಯೇ ದೇವ ಉಪಾಸನೆಯ ಮಹಾಮಾರ್ಗವಾಗಿದೆ.

ದೇವ ಪುತ್ರನಾದರೂ ಗೋದಲಿಯಲ್ಲಿ ದೀನನಾಗಿ ಜನಿಸಿ ಮನುಜ ಕುಲಕ್ಕೆ ಪ್ರೀತಿಯ ಪಥವನ್ನು ಸಾರಿದ, ಅನ್ಯಾಯ ಕ್ಕೊಳಗಾದವರ, ನಿರ್ಗತಿಕರ ಪರವಾಗಿ ಧ್ವನಿ ಎತ್ತಿದ ಕ್ರಿಸ್ತನ ಜನ್ಮ ಮಹೋತ್ಸವವ ಆತ ಬಾಳಿ-ಬೋಧಿಸಿದ ಪ್ರೀತಿಯ ದೇವಪೂಜೆಯ ಕಟ್ಟಳೆಯನ್ನು ನಾವೆಲ್ಲರೂ ಪರಿಪಾಲಿಸುವಲ್ಲಿ ಪ್ರೇರಣೆ ನೀಡಲಿ.

– ಮೆಲ್ವಿನ್‌ ಕೊಳಲಗಿರಿ

Advertisement

Udayavani is now on Telegram. Click here to join our channel and stay updated with the latest news.

Next