ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವರಾತ್ರಿಯ ಪ್ರಥಮ ದಿನ ಗುರುವಾರ ಕದಿರು ಕಟ್ಟುವಿಕೆಯಿಂದ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಪ್ರಾತಃಕಾಲ ಮಂಗಳವಾದ್ಯ ಸಹಿತ ಕದಿರನ್ನು ಬರಮಾಡಿಕೊಳ್ಳಲಾಯಿತು. ಪೂಜೆ ನೆರವೇರಿಸಿ ಸಾನ್ನಿಧ್ಯಕ್ಕೆ ಕದಿರು ಕಟ್ಟಲಾಯಿತು. ಅನಂತರ ಕ್ಷೇತ್ರದ ವತಿಯಿಂದ ಬಂದ ಭಕ್ತರಿಗೆ ಕದಿರನ್ನು ವಿತರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ ನೆರವೇರಿತು. ಪೆರ್ಡೂರಿನ ಸುನಿಲ್ ಮತ್ತು ಪುಷ್ಪಾ ದಂಪತಿ, ಗೀತಾ ಮತ್ತು ಮಂದಾರ ಶೆಟ್ಟಿ ದಂಪತಿಯಿಂದ ಚಂಡಿಕಾಯಾಗ, ರಾಜೇಂದ್ರ ಪ್ರಸಾದ್ ದಂಪತಿಯಿಂದ ದುರ್ಗಾ ಹೋಮ ಸಮರ್ಪಿಸಲ್ಪಟ್ಟಿತು. ಶಾಂತಾ ಸುರೇಶ್ ದಂಪತಿಯಿಂದ ದುರ್ಗಾ ನಮಸ್ಕಾರ ಪೂಜೆ, ಶ್ರೀರಂಗಪೂಜೆ ನೆರವೇರಿತು.
ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿವಿಧ ಆರಾಧನೆ, ಪೂಜೆಗಳು ನೆರವೇರಿದವು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾಕಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ಸೃಷ್ಟಿ ಕಲಾಕುಟೀರದ ಡಾ| ಮಂಜರಿ ಚಂದ್ರ ಪುಷ್ಪರಾಜ್ ಅವರ ಶಿಷ್ಯೆ ಶ್ರೇಯಾ ಆಚಾರ್ಯ, ಸವಿ ಹಾಗೂ ವಿ| ಬನ್ನಂಜೆ ಶ್ರೀಧರ್ ರಾವ್ ಅವರ ಶಿಷ್ಯೆ ನಿಶ್ಚಿತಾ ನೃತ್ಯಸೇವೆ ಸಮರ್ಪಿಸಿದರು.
ನವಶಕ್ತಿ ವೇದಿಕೆಯಲ್ಲಿ ಡಾ| ಶ್ರೀಧರ್ ಭಟ್ ಗುಂಡಿಬೈಲು ಅವರಿಂದ ಸುಗಮ ಸಂಗೀತ, ಪ್ರಜ್ಞಾ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ನಡೆಯಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
ಅನ್ನಸಂತರ್ಪಣೆಗೆ ಚಾಲನೆ
ಕ್ಷೇತ್ರದಲ್ಲಿ ನಿರಂತರವಾಗಿ 10 ದಿನಗಳ ಕಾಲ ನೆರವೇರಲಿರುವ ಅನ್ನ ಸಂತರ್ಪಣೆಗೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ನೆರೆದ ಭಕ್ತರಿಗೆ ಅನ್ನ ಮತ್ತು ಸಾರು ಬಡಿಸುವುದರ ಮೂಲಕ ಚಾಲನೆ ನೀಡಿದರು.