Advertisement

Christians; ವಿಭೂತಿ ಹಚ್ಚಿ ತಪಸ್ಸು ಕಾಲ ಆರಂಭಿಸಿದ ಕ್ರೈಸ್ತರು

11:39 PM Feb 13, 2024 | Team Udayavani |

ಮಂಗಳೂರು/ಉಡುಪಿ: ಕೆಥೋಲಿಕರು ಫೆ.14ರಿಂದ ತಪಸ್ಸು ಕಾಲ(ಲೆಂಟ್‌) ಆರಂಭಿಸುತ್ತಿದ್ದಾರೆ. ತಮ್ಮ ನಂಬಿಕೆಯ ಪ್ರಕಾರ ವಿಭೂತಿ ಬುಧವಾರ (ಆ್ಯಶ್‌ ವೆಡ್‌ನ‌ಸ್‌ ಡೇ)ವನ್ನು ಆಚರಿಸುತ್ತಿದ್ದು, ವಿಭೂತಿ ಹಚ್ಚಿ ಯೇಸು ಕ್ರಿಸ್ತರ ಕಷ್ಟ ಕಾಲ ಸ್ಮರಿಸಲು ತಯಾರಿ ಆರಂಭಿಸಿದ್ದಾರೆ. ಧೂಳಿನಿಂದ ಬಂದ ಮನುಷ್ಯ ಮರಳಿ ಧೂಳಿಗೆ ಎಂಬ ವಾಕ್ಯವನ್ನು ಪುನರುಚ್ಚರಿಸುತ್ತಾರೆ.

Advertisement

ಈಸ್ಟರ್‌ ಹಬ್ಬಕ್ಕೂ ಮೊದಲು ಆರು ವಾರಗಳ ಕಾಲ ಆಚರಿಸುವ ಪಶ್ಚಾತಾಪದ ಕಾಲದ ಮೊದಲ ದಿನವೇ ವಿಭೂತಿ ಬುಧವಾರ. ಇಲ್ಲಿಂದ ಮೊದಲ್ಗೊಂಡು ಮುಂದಿನ 40 ದಿನಗಳ ಕಾಲ ಕಷ್ಟದಲ್ಲಿರುವವರಿಗೆ ನೆರವಾಗುವುದು, ನೋವಿನಲ್ಲಿದ್ದವರನ್ನು ಭೇಟಿಯಾಗಿ ಸಾಂತ್ವನ ಹೇಳುವುದು, ಅವರಿಗಾಗಿ ಪ್ರಾರ್ಥಿಸುವುದು, ಸಹಾಯ ಹಸ್ತ ಚಾಚುವುದಾಗಿದೆ. ಅನೇಕ ಕ್ರೈಸ್ತ ಬಾಂಧವರು 40 ದಿನಗಳ ಕಾಲ ಒಂದೆರಡು ಹೊತ್ತಿನ ಊಟ ತ್ಯಾಗ ಮಾಡಿ ತಪಸ್ಸು ಕಾಲವನ್ನು ಆಚರಿಸುತ್ತಾರೆ. ವರ್ಷಂಪ್ರತಿ ಈ ಆಚರಣೆ ನಡೆಸಲಾಗುತ್ತಿದ್ದು, ಕೊನೆಯ ಭೋಜನ, ಶುಭ ಶುಕ್ರವಾರ ಹಾಗೂ ಈಸ್ಟರ್‌ ಹಬ್ಬದೊಂದಿಗೆ ಸಮಾಪ್ತಿಯಾಗುತ್ತದೆ.

ಯೇಸು ಕ್ರಿಸ್ತರು ತನ್ನ ಜೀವಿತಾವಧಿಯಲ್ಲಿ ಅನುಭವಿಸಿದ ಕಷ್ಟ ಕಾಲ ಎಂದರೆ, ಶಿಲುಬೆ ಮರಣದ ಕಷ್ಟ ಕಾಲದ ಸ್ಮರಣೆಗಾಗಿ ಪ್ರಾಯಶ್ಚಿತ್ತ ಕಾಲ(ತಪಸ್ಸು ಕಾಲ) ಆರಂಭಿಸುತ್ತಾರೆ. ವಿಭೂತಿ ಬುಧವಾರ ಪ್ರಾರ್ಥನೆ ಮತ್ತು ಉಪವಾಸದ ಮೂಲಕ ತಪಸ್ಸು ಕಾಲ ಆರಂಭಿಸುವ ದಿನ. ಪ್ರತೀ ವರ್ಷ ಈ ವಿಶೇಷ ಸಮಯವನ್ನು ಆರಂಭಿಸುವಾಗ ಮನ ಪರಿವರ್ತನೆಯೊಂದಿಗೆ ಜೀವನ ಪರಿವರ್ತಿಸುವ ನಿರ್ಧಾರವನ್ನು ಮಾಡುವೆವು ಎನ್ನುವುದರ ಸೂಚಕವಾಗಿ ಚರ್ಚ್‌ಗಳಿಗೆ ತೆರಳಿ ಬಲಿಪೂಜೆಯಲ್ಲಿ ಭಾಗವಹಿಸುತ್ತಾರೆ. ಬಲಿಪೂಜೆಯ ಅಂತ್ಯದಲ್ಲಿ ಯಾಜಕರು ಭಕ್ತರ ಶಿರಗಳಿಗೆ ವಿಭೂತಿಯಿಂದ ಶಿಲುಬೆಯ ಗುರುತನ್ನು ಹಚ್ಚಿ ಮನುಷ್ಯ ಬರೀ ಧೂಳು ಎನ್ನುವುದನ್ನು ನೆನಪಿಸುತ್ತಾರೆ. ಜೀವನ ಪರಿವರ್ತನೆಯೊಂದಿಗೆ ಕ್ರಿಸ್ತರ ಹಾದಿ ತುಳಿಯಲು, ಅವರ ಅನುಯಾಯಿಗಳಾಗಲು ಕರೆ ನೀಡುತ್ತಾರೆ.

ಉಪವಾಸದ ಮಹತ್ವ!
ತಪಸ್ಸು ಕಾಲದ ಉಪವಾಸವೂ ಪಾಪ ನಿವೇದನೆಯೊಂದಿಗೆ ದೇಹ ದಂಡನೆ ಮಾಡುವುದಾಗಿದೆ. ತನ್ನಲ್ಲಿ ಇದ್ದುದನ್ನು ಬಡವರೊಂದಿಗೆ ಹಂಚಿಕೊಳ್ಳುವುದು ಹಾಗೂ ದ್ವೇಷವನ್ನು ತೊಡೆದು ರಾಜಿ ಸಂಧಾನಕ್ಕೆ ಮುಂದಾದಲ್ಲಿ ಮಾತ್ರವೇ ತಪಸ್ಸು ಕಾಲ ಫಲಪ್ರದವಾಗಲಿದೆ.

ಯೇಸುಕ್ರಿಸ್ತರು ಮರಣ ಹೊಂದಿದ ನಂತರ ಪುನರುತ್ಥಾನಗೊಂಡ ಪಾಸ್ಖ ಹಬ್ಬಕ್ಕೆ ತಯಾರಿಯಾಗಿ ಈ 40 ದಿನಗಳಲ್ಲಿ ಪ್ರಾರ್ಥನೆ, ಉಪವಾಸ ಹಾಗೂ ದಾನಧರ್ಮಗಳೊಂದಿಗೆ ಕ್ರಿಸ್ತರ ಕಷ್ಟಗಳ ಬಗ್ಗೆ ಧ್ಯಾನ ಮಾಡುತ್ತಾರೆ. ದೇವರ ಚಿತ್ತಕ್ಕೆ ತಲೆಬಾಗುವುದೇ ಪ್ರಾರ್ಥನೆ. ದಾನಧರ್ಮ ನಮ್ಮ ಜೀವನದ ಯಥೇತ್ಛ ಹೇರಳತೆಯಿಂದ ಇತರರಿಗೆ ನೀಡುವುದಲ್ಲ. ನಮಗೆ ನೀಡಿರುವುದನ್ನೇ ಇತರರೊಂದಿಗೆ ಹಂಚಿಕೊಳ್ಳುವುದು. ಉಪವಾಸ ಬರೀ ಊಟವನ್ನು ದೂರವಿಡುವುದಲ್ಲ, ಕೆಟ್ಟ ಚಟ, ಕೆಟ್ಟ ಮಾತು, ಕೆಟ್ಟ ಅಭ್ಯಾಸಗಳಿಂದ ದೂರವಿರುವುದು. ಪ್ರಮುಖವಾಗಿ ದ್ವೇಷ, ಹಿಂಸೆಯನ್ನು ತ್ಯಜಿಸುವುದು. ಅದೇ ತಪಸ್ಸು ಕಾಲ.
-ರೈ|ರೆ|ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ,
ಮಂಗಳೂರು ಬಿಷಪ್‌

Advertisement

ಪಶ್ಚಾತ್ತಾಪದ ಗುರುತಾಗಿ ಶಿರಕ್ಕೆ ವಿಭೂತಿ ಹಚ್ಚಿ ಪ್ರಾರ್ಥನೆ, ಉಪವಾಸ, ದಾನ ಧರ್ಮದ ಮೂಲಕ ಮನ ಪರಿವರ್ತನೆಯೊಂದಿಗೆ ಪ್ರಭು ಯೇಸುವಿನ ಪುನರುತ್ಥಾನದಲ್ಲಿ ಪಾಲ್ಗೊಳ್ಳು ವುದೇ ತಪಸ್ಸು ಕಾಲದ ಉದ್ದೇಶ. ಇದನ್ನು ಶ್ರದ್ಧೆಯಿಂದ ಆಚರಿಸಿ ಪಾಪ ಪರಿಹಾರದೊಂದಿಗೆ ನವ ವ್ಯಕ್ತಿಗಳಾಗಿ ಪ್ರಭು ಕ್ರಿಸ್ತರ ಕಷ್ಟ, ಯಾತನೆ, ಮರಣ ಹಾಗೂ ಪುನರುತ್ಥಾನವನ್ನು ಧ್ಯಾನಿಸ ಬೇಕು.
-ರೈ|ರೆ|ಡಾ| ಜೆರಾಲ್ಡ್‌ ಐಸಕ್‌ ಲೋಬೊ, ಧರ್ಮಾಧ್ಯಕ್ಷರು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next