Advertisement

Election;ಕೋಟೆನಾಡು ಸೂರೆಗೆ ಕೈ ಕಮಲ ಜಿದ್ದಾಜಿದ್ದಿ

12:28 AM Apr 14, 2024 | Team Udayavani |

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಹಾಗೂ ಚಿತ್ರದುರ್ಗದ ಮೊದಲ ಸಂಸದ ಎಸ್‌.ನಿಜಲಿಂಗಪ್ಪ ಅವರಿಗೆ ರಾಜಕೀಯ ಬದುಕು ಕಟ್ಟಿಕೊಟ್ಟ ಮಧ್ಯ ಕರ್ನಾಟಕದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಈಗ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಪ್ರತಿಷ್ಠೆಯ ಕಣವಾಗಿದೆ.

Advertisement

ಕಳೆದ ಮೂರು ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಬಿಜೆಪಿಯ ಪ್ರಭಾವಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿಯಾಗಿ ಮೊದಲನೇ ಸಲ ಲೋಕಸಭೆ ಚುನಾವಣ ಅಖಾಡಕ್ಕೆ ಇಳಿದಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಕಾಂಗ್ರೆಸ್‌ ಕಟ್ಟಾಳು, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಮೂರನೇ ಸಲ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆ ಎಂದೇ ಹೆಸರಾಗಿದ್ದ ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಅನಂತರ ಬಿಜೆಪಿ ಲಗ್ಗೆ ಹಾಕಿದೆ. 2009ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಅನಂತರ ಎದುರಾದ ಚುನಾವಣೆಯಲ್ಲಿ, ಅಮೆರಿಕದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಜನಾರ್ದನ ಸ್ವಾಮಿ ಚಿತ್ರದುರ್ಗದ ಮೊದಲ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಅನಂತರ 2014ರ ಅವಧಿಗೆ ಪಕ್ಕದ ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಬಿ.ಎನ್‌.ಚಂದ್ರಪ್ಪ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಂದು ಬರೋಬ್ಬರಿ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದರು. ದೇಶಾದ್ಯಂತ ಪ್ರಬಲವಾಗಿದ್ದ ನರೇಂದ್ರ ಮೋದಿ ಅಲೆಯಲ್ಲಿ ಚಂದ್ರಪ್ಪ ಗೆದ್ದಾಗ ಚಿತ್ರದುರ್ಗ ಮತ್ತೆ ಕಾಂಗ್ರೆಸ್‌ ಹಿಡಿತಕ್ಕೆ ಸಿಕ್ಕಿತು ಎನ್ನಲಾಗಿತ್ತು. ಆದರೆ 2019ರ ಚುನಾವಣೆಯಲ್ಲಿ ಆನೇಕಲ್‌ ಮೂಲದ ಎ. ನಾರಾಯಣಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಮತ್ತೆ ಬಿಜೆಪಿ ಮೇಲುಗೈ ಸಾಧಿಸಿತ್ತು.

ಪರಿಶಿಷ್ಟ ಜಾತಿಗೆ ಮೀಸಲಾದ ಅನಂತರ ಎರಡು ಬಾರಿ ಬಿಜೆಪಿ, ಒಂದು ಬಾರಿ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಗೆದ್ದಿವೆ. ಈಗ ತಮ್ಮ ಹಿಡಿತದಲ್ಲಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ಸವಾಲು ಬಿಜೆಪಿ ಎದುರಿಗಿದ್ದರೆ, ಮತ್ತೆ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ತವಕ ಕಾಂಗ್ರೆಸ್‌ ಪಾಳೆಯದಲ್ಲಿದೆ.
ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಜಿಲ್ಲೆಯಿಂದ ಹೊರಗಿನವರಿಗೆ ಮಣೆ ಹಾಕುತ್ತಿವೆ ಎಂಬ ಭಾವನೆ ಕಳೆದ ಕೆಲವು ದಿನಗಳವರೆಗೆ ದಟ್ಟ ಮಂಜಿನಂತೆ ಆವರಿಸಿ ಕೊಂಡಿತ್ತು. ಆದರೆ ಅಭ್ಯರ್ಥಿಗಳು ಚುರುಕಾಗಿ ಜನರ ನಡುವೆ ಓಡಾಟ ಶುರು ಮಾಡುತ್ತಲೇ ಇವರು ನಮ್ಮವರು, ನಮ್ಮ ಪಕ್ಷದವರು ಎನ್ನುವ ಭಾವನೆ ಮೂಡಿದ್ದು, ಹೊರಗಿನವರೆಂಬ ಭಾವನೆ ಸದ್ಯ ಮಂಜಿನಂತೆಯೇ ಕರಗಿದೆ.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ. ರಘುಚಂದನ್‌ ಬಿಜೆಪಿ ಟಿಕೆಟ್‌ ಸಿಗುವ ಭರವಸೆಯಲ್ಲಿ ಕ್ಷೇತ್ರದಲ್ಲಿ ಪ್ರವಾಸ ನಡೆಸುತ್ತಿದ್ದರು. ಆದರೆ ಬಿಜೆಪಿ ಸೋಶಿಯಲ್‌ ಎಂಜಿನಿ ಯರಿಂಗ್‌ ಕಾರಣಕ್ಕೆ ಗೋವಿಂದ ಕಾರಜೋಳ ಅವರನ್ನು ಚಿತ್ರದುರ್ಗ ಅಭ್ಯರ್ಥಿಯಾಗಿ ಘೋಷಿಸಿದಾಗ ಬಂಡಾಯ ಸಾರಿದ್ದರು. ಬಿಜೆಪಿ ಒಡೆದ ಮನೆಯಾಗಿತ್ತು. ಇದರ ಲಾಭ ಕಾಂಗ್ರೆಸ್‌ ಪಕ್ಷಕ್ಕೆ ಆಗಲಿದೆ ಎನ್ನುವ ಲೆಕ್ಕಾಚಾರಗಳು ಶುರುವಾ ಗಿದ್ದವು. ಆದರೆ ಬಿ.ಎಸ್‌.ಯಡಿಯೂರಪ್ಪ ಅವರು ಶಾಸಕ ಚಂದ್ರಪ್ಪ ಹಾಗೂ ರಘುಚಂದನ್‌ ಇಬ್ಬರನ್ನೂ ಕರೆದು ಮಾತುಕತೆ ನಡೆಸಿದ ಅನಂತರ ಎಲ್ಲವೂ ತಣ್ಣಗಾಗಿದೆ. ಈ ಬೆಳವಣಿಗೆ ಕಾಂಗ್ರೆಸ್‌ ಪಾಲಿಗೆ ನಿರಾಸೆ ತಂದಿದೆ.

Advertisement

ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದ 2009ರ ಪರಾಜಿತ ಅಭ್ಯರ್ಥಿ ಡಾ| ಬಿ. ತಿಪ್ಪೇಸ್ವಾಮಿ ಕೂಡ ಟಿಕೆಟ್‌ ಕೈತಪ್ಪಿದಾಗ ಬಂಡಾಯದ ಬಾವುಟ ಹಾರಿಸಬಹುದು, ಇದು ಕಾಂಗ್ರೆಸ್‌ ಅಭ್ಯರ್ಥಿಗೆ ತೊಡಕಾಗಲಿದೆ ಎನ್ನುವ ಲೆಕ್ಕಾಚಾರ ಗಳಿದ್ದವು. ಆದರೆ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ತಟಸ್ಥರಾಗಿ ಉಳಿದಿರುವುದು ಕಾಂಗ್ರೆಸ್‌ಗೆ ಸಮಾಧಾನಕರ ಸಂಗತಿಯಾಗಿದೆ.

ಫಲಿತಾಂಶ ಲೆಕ್ಕಾಚಾರ: ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮತಗಳ ಪ್ರಮಾಣ ಹೆಚ್ಚಾಗಿದೆ. ಈ ಕಾರಣಕ್ಕೆ ಎರಡೂ ಪಕ್ಷಗಳು ಅದೇ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿವೆ.
2009ರಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಜನ ಬಿಜೆಪಿ ಶಾಸಕರು, ಒಬ್ಬರು ಕಾಂಗ್ರೆಸ್‌ ಶಾಸಕರಿದ್ದರು. ಆಗ ಅದು ಬಿಜೆಪಿಗೆ ಪ್ಲಸ್‌ ಆಗಿತ್ತು. ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಕ್ಷೇತ್ರ ವ್ಯಾಪ್ತಿಯ ಪಾವಗಡ, ಶಿರಾ ಸೇರಿದಂತೆ 8ರಲ್ಲಿ ಏಳು ಜನ ಕಾಂಗ್ರೆಸ್‌ ಶಾಸಕರಿದ್ದರೆ, ಒಂದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದು ಕಾಂಗ್ರೆಸ್ಸಿಗೆ ವರದಾನ ಆಗಬಹುದು ಎನ್ನಲಾಗುತ್ತಿದೆ.

ಗೋವಿಂದ ಕಾರಜೋಳ ಬಿಜೆಪಿ ಅಭ್ಯರ್ಥಿಸಾಮರ್ಥ್ಯ
ಬಿಜೆಪಿ-ಜೆಡಿಎಸ್‌ ಮೈತ್ರಿಯ ಲಾಭ, ಪ್ರಧಾನಿ ನರೇಂದ್ರ ಮೋದಿ ಅಲೆ, ರಾಜ್ಯ ರಾಜಕಾರಣದಲ್ಲಿ ಪ್ರಭಾವಿ

ಬಿ.ಎನ್‌. ಚಂದ್ರಪ್ಪ ಕಾಂಗ್ರೆಸ್‌ ಅಭ್ಯರ್ಥಿ ಸಾಮರ್ಥ್ಯ
ಮಾಜಿ ಸಂಸದರು, ಕ್ಷೇತ್ರದಲ್ಲಿ ಚಿರಪರಿಚಿತರು, ಕ್ಷೇತ್ರ ವ್ಯಾಪ್ತಿಯಲ್ಲಿರುವ 7 ಶಾಸಕರ ಬಲ
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು

ಚಿತ್ರದುರ್ಗ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನನ್ನನ್ನು ಆಶೀರ್ವ ದಿಸುವ ನಂಬಿಕೆ ಇದೆ. ನೀರಾವರಿ ಯೋಜನೆಗಳು ನನ್ನ ಮೊದಲ ಆದ್ಯತೆ. ಪ್ರಧಾನಿ ಮೋದಿ ಮತ್ತೂಮ್ಮೆ ಪ್ರಧಾನಿ ಆಗಬೇಕೆ ನ್ನುವುದು ಜನರ ಹಂಬಲ.
-ಗೋವಿಂದ ಎಂ. ಕಾರಜೋಳ

ಗೆದ್ದಾಗಲೂ, ಸೋತಾಗಲೂ ಈ ಕ್ಷೇತ್ರದ ನಂಟು ಬಿಟ್ಟಿಲ್ಲ. ಇಲ್ಲಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ. ಈ ಚುನಾವಣೆ ಸಂವಿಧಾನದ ಉಳಿವಿನ ಚುನಾವಣೆಯಾಗಿದೆ. ರಾಜ್ಯ ಕಾಂಗ್ರೆಸ್‌ ಸರಕಾರ ಕೂಡ ಜನರಿಗೆ ಗ್ಯಾರಂಟಿ ಶಕ್ತಿ ತುಂಬಿದೆ.
-ಬಿ.ಎನ್‌. ಚಂದ್ರಪ್ಪ

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next