ನವದೆಹಲಿ: ಆ.5ರಿಂದ ಲಂಡನ್‌ನಲ್ಲಿ ಆರಂಭವಾಗಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳಲು ಅಥ್ಲೀಟ್ ಪಿ.ಯು.ಚಿತ್ರಾ, ಅಜಯ್ ಕುಮಾರ್ ಸರೋಜ್ ಮಾಡಿದ ಹೋರಾಟ ವ್ಯರ್ಥವಾಗಿದೆ.
ಅಚ್ಚರಿಯ ರೀತಿಯಲ್ಲಿ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಸುಧಾ ಸಿಂಗ್ ಅವಕಾಶ ಗಿಟ್ಟಿಸಿದ್ದಾರೆ. ಚಿತ್ರಾ ಮತ್ತು ಅಜಯ್‌ಗೆ ಸ್ಥಾನ ಸಿಗದಿರಲು ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟದ(ಎಎಫ್ಐ) ವೈಫಲ್ಯವೇ ಕಾರಣ ಎಂಬ ಆರೋ ಪಗಳು ಕೇಳಿ ಬರುತ್ತಿವೆ.
ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಚಿತ್ರಾ, ಸುಧಾ ಸಿಂಗ್ ಮತ್ತು ಅಜಯ್‌ಗೆ ಸ್ಥಾನ ನೀಡುವಂತೆ ಎಎಫ್ಐ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ (ಐಎಎಎಫ್)ಗೆ ಮನವಿ ಮಾಡಿತ್ತು. ಆದರೆ ಐಎಎಎಫ್ ಬಿಡುಗಡೆ ಮಾಡಿರುವ ಪರಿಷ್ಕೃತ ಪಟ್ಟಿಯಲ್ಲಿ ಚಿತ್ರಾ, ಅಜಯ್ ಹೆಸರನ್ನು ಕೈಬಿಡಲಾಗಿದೆ. ಈ ಇಬ್ಬರ ಹೆಸರು ತಪ್ಪಿಹೋಗಲು ಉದ್ದೇಶಪೂರ್ವಕ ನಿರ್ಲಕ್ಷ್ಯ ಕಾರಣ ಎನ್ನಲಾಗಿದೆ.
ಎಎಫ್ಐ ಮೇಲಿನ ಆರೋಪ ಏನು?: ಚಿತ್ರಾಗೆ ಅವಕಾಶ ಸಿಗದಿರುವ ಬಗ್ಗೆ ಹಲವು ಅನುಮಾನಗಳು ಹುಟ್ಟಿ ಕೊಂಡಿವೆ. ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ಉದ್ದೇಶಪೂರಕವಾಗಿಯೇ ಚಿತ್ರಾಗೆ ಅವಕಾಶ ತಪ್ಪಿಸಿದೆ ಎಂದ ಆರೋಪಗಳು ಇವೆ. ಕೇರಳ ಹೈಕೋರ್ಟ್ ಸೂಚನೆ, ಕೇಂದ್ರ ಸರ್ಕಾರದ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಿರ್ಲಕ್ಷ್ಯ ಮಾಡಿದೆ ಎಂಬ ದೂರುಗಳು ಇವೆ. ಇದರ ಜತೆಗೆ ಸುಧಾಗೆ ಸಿಕ್ಕ ಅವಕಾಶ ಚಿತ್ರಾಗೆ ಯಾಕೆ ತಪ್ಪಿ ಹೋಗಿದ್ದು ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.
ಮೂವರನ್ನು ಕೈಬಿಟ್ಟಿದ್ದ ಎಎಫ್ಐ: ಈ ಹಿಂದೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ 24 ಜನರ ತಂಡವನ್ನು ಪ್ರಕಟಿಸಿತ್ತು. ಆದರೆ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿ ಯನ್‌ಶಿಪ್‌ನಲ್ಲಿ ನಡೆದ 1500 ಮೀ. ಓಟದಲ್ಲಿ ಚಿನ್ನ ಗೆದ್ದ ಚಿತ್ರಾ, ಪುರುಷರ 1500 ಮೀ. ಓಟದಲ್ಲಿ ಚಿನ್ನಗೆದ್ದ ಅಜಯ್ ಕುಮಾರ್ ಸರೋಜ್ ಮತ್ತು 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಚಿನ್ನ ಗೆದ್ದ ಸುಧಾ ಸಿಂಗ್ ಹೆಸರು ಕೈ ಬಿಡಲಾಗಿತ್ತು.
ಇದು ವಿವಾದಕ್ಕೆ ಕಾರಣವಾಗಿತ್ತು. ಈ ಅಥ್ಲೀಟ್‌ಗಳು ಅರ್ಹ ಸಮಯದಲ್ಲಿ ಗುರಿ ಮುಟ್ಟಿಲ್ಲದ ಕಾರಣ ಅವಕಾಶ ಕೈತಪ್ಪಿದೆ ಎಂದು ಎಎಫ್ಐ ಸಮಜಾಯಿಶಿ ನೀಡಿತ್ತು.
ಕೇರಳ ಉಚ್ಚ ನ್ಯಾಯಾಲಯದ ಆದೇಶಕ್ಕೂ ಗೌರವ ಸಿಗಲಿಲ್ಲ: ತಾನು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನÉಲಿ ಚಿನ್ನ ಗೆದ್ದಿದ್ದರೂ ಅವಕಾಶ ನೀಡಲಿಲ್ಲ ಎಂದು ಚಿತ್ರಾ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಕೋರ್ಟ್, ಚಿತ್ರಾರನ್ನು ಪಟ್ಟಿಯಿಂದ ಕೈಬಿಡುವ ಸಂಗತಿ ಅನು ಮಾನಾಸ್ಪ ದವಾಗಿದೆ, ಪಾರದರ್ಶಕ ವಾಗಿಲ್ಲ. ಆದ್ದರಿಂದ ಚಿತ್ರಾಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಕೂಡ, ಚಿತ್ರಾಗೆ ಅವಕಾಶ ಸಿಗಲು ಎಲ್ಲ ರೀತಿಯ ಯತ್ನ ಮಾಡಿ ಎಂದು ಎಎಫ್ಐಗೆ ಸೂಚಿಸಿದ್ದರು. ತಾನು ಮಾಡಿದ ಮನವಿಯನ್ನು ಐಎಎಎಫ್ ತಿರಸ್ಕರಿಸಿದೆ ಎಎಫ್ಐ ತಿಳಿಸಿದೆ.