Advertisement

ಚಿಣ್ಣರ ಬಿಂಬ ಮುಂಬಯಿ: ನವಿ ಮುಂಬಯಿ ವಲಯದಿಂದ ಪಾಲಕರ ಸಭೆ

03:02 PM Jul 06, 2018 | Team Udayavani |

ನವಿಮುಂಬಯಿ: ಚಿಣ್ಣರ ಬಿಂಬ ಮುಂಬಯಿ ನವಿಮುಂಬಯಿ ವತಿಯಿಂದ ಪಾಲಕರ ಸಭೆಯು ಜು. 1 ರಂದು ಪೂರ್ವಾಹ್ನ  ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ನಡೆಯಿತು.

Advertisement

ನೆರೂಲ್‌, ಘನ್ಸೋಲಿ, ಐರೋಲಿ ಶಿಬಿರದ ಪಾಲಕರು, ವಲಯ ಮುಖ್ಯಸ್ಥರು, ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಪಾಲಕರನ್ನು ಉದ್ದೇಶಿಸಿ ಮಾತ ನಾಡಿ, ನಾವು ನಮ್ಮ ನಾಡಿನ ಮಕ್ಕಳಿಗೆ ನಮ್ಮೂರಿನ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳು, ಕಟ್ಟುಕಟ್ಟಲೆಗಳು, ಶಿಸ್ತು, ಕಲೆಗಳ ಬಗ್ಗೆ ಅರಿವು ಮೂಡಿಸದೇ ಇದ್ದ ಪಕ್ಷದಲ್ಲಿ ಭವಿಷ್ಯದಲ್ಲಿ ಹೊಟ್ಟೆಗೆ ಪಾರ್ಸೆಲ್‌ ತಂದು ತಿನ್ನುವ ಕಾಲ ಬರಬಹುದು. ನಮ್ಮ ಮಕ್ಕಳು ಸುಸಂಸ್ಕೃತರಾಗಿ, ನಿಷ್ಠಾವಂತರಾಗಿ, ದೇಶಭಕ್ತರಾಗಿ ಬೆಳೆದು ಎಲ್ಲಾ ಪೋಷಕರಿಗೂ ಕೀರ್ತಿ ತರುವಂತಾಗಬೇಕು ಎಂಬುವುದೇ ಚಿಣ್ಣರ ಬಿಂಬದ ಮುಖ್ಯ ಉದ್ಧೇಶವಾಗಿದೆ. ಆದ್ದರಿಂದ ಪ್ರತಿಯೊಂದು ಶಾಖೆಗಳಲ್ಲಿ ತುಳು- ಕನ್ನಡಿಗರ ಮಕ್ಕಳ ಸಂಖ್ಯೆಯನ್ನು ವೃದ್ಧಿಸುವ ಕಾರ್ಯದಲ್ಲಿ ನಾವು ತೊಡಗಬೇಕು. ಪಾಲಕರು ಮಕ್ಕಳನ್ನು ಚಿಣ್ಣರ ಬಿಂಬದ ತರಗತಿಗಳಿಗೆ ಹೋಗುವಂತೆ ಪ್ರೇರೇಪಿಸಬೇಕು ಎಂದರು.

ಇನ್ನೋರ್ವ ಅತಿಥಿ ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, ಮಕ್ಕಳಿಗೆ ನಿಷ್ಠೆ ಹಾಗೂ ಶಿಸ್ತು ಮುಖ್ಯ. ಹಾಗೆಯೇ ಸಾಧಿಸುವ ಛಲ ಇರಬೇಕು. ಜೀವನದಲ್ಲಿ ಶ್ರೇಷ್ಟ ವ್ಯಕ್ತಿಗಳಾಗಬೇಕಾದರೆ ಇಂದಿನ ಮೊಬೈಲ್‌, ಫೇಸ್‌ಬುಕ್‌ ಇನ್ನಿತರ ಸಾಮಾಜಿಕ ಜಾಲತಾಣಗಳ ಚಟಕ್ಕೆ ಬಲಿಯಾಗಬಾರದು. ಜೀವನದಲ್ಲಿ ಒಳ್ಳೆಯ ಗುರಿ ಇಟ್ಟುಕೊಂಡು ಮುಂದುವರಿಯಲು ಶ್ರಮ ಅತ್ಯಗತ್ಯ ಎಂದು ನುಡಿದರು.

ಚಿಣ್ಣರ ಬಿಂಬ ಕಾರ್ಯಕಾರಿ ಸಮಿತಿಯ ಸದಸ್ಯ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ ಇವರು ಚಿಣ್ಣರ ಬಿಂಬದ ಧ್ಯೇಯೋದ್ದೇಶಗಳನ್ನು ವಿವರಿಸಿದರು. 

ಕಾರ್ಯಕಾರಿ ಸಮಿತಿಯ ಸದಸ್ಯ ವಿಜಯ ಕೋಟ್ಯಾನ್‌ ಅವರ ಉಪಸ್ಥಿತಿಯಲ್ಲಿ ಪ್ರಸ್ತುತ ವರ್ಷದ ವಲಯ ಮುಖ್ಯಸ್ಥೆಯಾಗಿ ಸಂಧ್ಯಾ ಮೋಹನ್‌ ಅವರನ್ನು ಆಯ್ಕೆ ಮಾಡಲಾಯಿತು. 

Advertisement

ನೂತನ ಶಿಬಿರಾಧಿಕಾರಿ, ಸಾಂಸ್ಕೃತಿಕ ಮುಖ್ಯಸ್ಥರು, ಶಿಕ್ಷಕ ರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಗೀತಾ ಹೇರಳ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ಮೋಹನ್‌ ವಂದಿಸಿದರು. ರೂಪಾ ಶೆಟ್ಟಿ, ರಾಜೇಶ್ವರಿ ಶೆಟ್ಟಿ, ಸುಕುಮಾರಿ ಶೆಟ್ಟಿ, ಅಮಿತಾ ಶೆಟ್ಟಿ ಇವರ ಸೇವಾಕೈಂಕರ್ಯಗಳನ್ನು ಗಣ್ಯರು ಶ್ಲಾಘಿಸಿದರು. ಚಿಣ್ಣರ ಬಿಂಬದ ಎಲ್ಲಾ ನೂತನ ಸದಸ್ಯರನ್ನು ಅಭಿನಂದಿಸಲಾಯಿತು. ಆಶಾ ಪೂಜಾರಿ, ವೀಣಾ ಭಟ್‌, ಭಾರತಿ ಹೆಗ್ಡೆ ಇವರನ್ನು ಶಿಬಿರಾಧಿಕಾರಿಗಳನ್ನಾಗಿ ನೇಮಿಸಿ ಅಭಿನಂದಿಸಲಾಯಿತು.

ಸ್ಮಿತಾ ಭಟ್‌, ಸುಜಾತಾ ಶೆಟ್ಟಿ, ಸುಚಿತ್ರಾ ಶೆಟ್ಟಿ ಅವರು ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾದರು.  ಮೋಹಿನಿ ಪೂಜಾರಿ, ಲಕ್ಷ್ಮೀ ದೇವಾಡಿಗ, ಯಶೋಧಾ ಕಾಂಚನ್‌, ಸತ್ಯವತಿ ಹಾಗೂ ಸುಪ್ರಿತಾ ಗೌಡ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ 60 ಕ್ಕೂ ಅಧಿಕ ಪಾಲಕ-ಪೋಷಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next