ಹೊಸದಿಲ್ಲಿ : ಚೀನದ ಮೋಟಾರು ವಾಹನ ಸೇನೆಯು ಕೇವಲ 48 ಗಂಟೆಗಳ ಒಳಗೆ ದಿಲ್ಲಿಯನ್ನು ತಲುಪಬಲ್ಲುದು ಎಂದು ಚೀನದ ಸರಕಾರಿ ಟಿವಿ ವಾಹಿನಿಯೊಂದು ಹೆಮ್ಮೆಯಿಂದ ಹೇಳಿಕೊಂಡಿದೆ. ಆದರೆ ಚೀನ ಟಿವಿಯ ಈ ವಿವಾದಾತ್ಮಕ ಹೇಳಿಕೆಗೆ ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ, ಟೀಕೆ, ವ್ಯಂಗ್ಯ ವಕ್ತವಾಗಿದೆ.
ಆದರೆ ಚೀನ ಟಿವಿ ವಾಹಿನಿಯ ಈ ಹೇಳಿಕೆಯನ್ನು ಸದಾ ಶತ್ರುತ್ವದ ಮನೋಭಾವಕ್ಕೆ ಅಂಟಿಕೊಂಡಿರುವ ನೆರೆಯ ದೇಶದ ಹಾಸ್ಯಾಸ್ಪದ ಹೇಳಿಕೆ ಎಂದು ಪರಿಗಣಿಸಲಾಗಿದೆ. ಕಾರಣ ಭಾರತ – ಚೀನ ನಡುವಿನ ಭೌಗೋಲಿಕ ಸ್ವರೂಪವು ಅತ್ಯಂತ ದುರ್ಗಮ ರೀತಿಯದ್ದಾಗಿರುವುದರಿಂದ ಹಾಗೂ ಸರ್ವಶಕ್ತ ಭಾರತೀಯ ಸೇನೆಯನ್ನು ಎದುರಿಸಿಕೊಂಡು ಮುನ್ನುಗ್ಗುವುದು ಅಸಾಧ್ಯವಾಗಿರುವುದರಿಂದ 48 ತಾಸುಗಳ ಒಳಗೆ ಚೀನದ ಮೋಟಾರು ವಾಹನ ಸೇನೆಯು ದಿಲ್ಲಿಯನ್ನು ತಲುಪಲಾರದು ಎಂದು ತಜ್ಞರು ಹೇಳಿದ್ದಾರೆ.
ಭಾರತದ ಸೌಮ್ಯ ಸ್ವಭಾವದ ಸದ್ಗುಣಿ ಜನರು ಚೀನದ ಹೇಳಿಕೆಯನ್ನು ಗಂಭೀರವಾಗಿ ಅಥವಾ ನಯವಾಗಿ ಸ್ವೀಕರಿಸಿಲ್ಲ. ಚೀನೀ ಸೇನೆ ಭಾರತದ ರಾಜಧಾನಿ ದಿಲ್ಲಿಯನ್ನು ಕೇವಲ 48 ತಾಸುಗಳ ಒಳಗೆ ತಲುಪಬಲ್ಲುದು ಎಂಬ ಹೇಳಿಕೆಯು ದೇಶಾದ್ಯಂತ ಕಾಡ್‌ಗಿಚ್ಚಿನಂತೆ ಹರಡಿರುವ ಹೊರತಾಗಿಯೂ ಚೀನ ಕುರಿತಾದ ಜೋಕ್‌ಗಳು ಕೂಡ ಇದೇ ರೀತಿಯಲ್ಲಿ ಹರಡಿಕೊಳ್ಳುವುದಕ್ಕೆ ಇದನ್ನು ಹೋಲಿಸಲಾಗಿದೆ.
ಅಂದ ಹಾಗೆ ಭಾರತದೊಂದಿಗಿನ ಚೀನದ ದ್ವಿಪಕ್ಷೀಯ ಸಂಬಂಧಗಳು ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಹದಗೆಟ್ಟಿವೆ.
ಗಡಿಯಲ್ಲಿ ಚೀನ ಸೇನೆ ನಡೆಸುವ ಅತಿಕ್ರಮಣದ ಪ್ರಕರಣಗಳು, ಚೀನ ಅನುಸರಿಸುತ್ತಿರುವ ಏಶ್ಯ ದೊಡ್ಡಣ್ಣನ ನೀತಿ, ಪರಮಾಣು ಪೂರೈಕೆದಾರರ ಸಮೂಹಕ್ಕೆ ಭಾರತ ಸೇರುವುದಕ್ಕೆ ಅಡ್ಡಗಾಲು ಹಾಕಿರುವ ಚೀನದ ನೀತಿ, ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ಉಗ್ರ ಪ್ರವರ್ತಕ ದೇಶವೆಂದು ಪರಿಗಣಿಸುವ ಯತ್ನಕ್ಕೆ ಚೀನದ ಅಡ್ಡಗಾಲು, ಪಾಕ್‌ನ ಜೆಇಎಂ ಮುಖ್ಯಸ್ಥ ಅಜರ್ ಮಸೂದ್‌ನನ್ನು ಉಗ್ರನೆಂದು ಘೋಷಿಸುವುದಕ್ಕೆ ಹಾಕುತ್ತಿರುವ ಅಡ್ಡಗಾಲು – ಮುಂತಾಗಿ ಹಲವಾರು ವಿಷಯಗಳಲ್ಲಿ ಚೀನವು ಭಾರತದೊಂದಿಗೆ ವ್ಯತಿರಿಕ್ತವಾಗಿ ವ್ಯವಹರಿಸುತ್ತಿರುವುದು ಜಗಜ್ಜಾಹೀರಾಗಿದೆ.