Advertisement

ಚೀನ ಮಾಡೆಲ್‌ ಕಳಪೆ ಥರ್ಮಾಮೀಟರ್‌ ಹಾವಳಿ

11:51 PM May 09, 2020 | Sriram |

ಬೆಂಗಳೂರು: ಕೋವಿಡ್-19 ಸೋಂಕಿನ ಲಕ್ಷಣವಾದ ತೀವ್ರ ಜ್ವರವನ್ನು ಪತ್ತೆಹಚ್ಚಲು ಸಹಕಾರಿ ಎನ್ನಲಾದ ಇನ್‌ಫ್ರಾರೆಡ್‌ ಥರ್ಮಾಮೀಟರ್‌ಗಳ (ಎಲೆಕ್ಟ್ರಿಕಲ್‌ ಥರ್ಮಾಮೀಟರ್‌) ಬಳಕೆ ಹೆಚ್ಚಾದಂತೆ ಪ್ರಮುಖವಾಗಿ ಚೀನದಿಂದ ಆಮದಾಗುತ್ತಿರುವ ಕಳಪೆ ಸಾಧನಗಳ ಹಾವಳಿಯೂ ತೀವ್ರವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ತರಹೇವಾರಿ ಬ್ರ್ಯಾಂಡ್ ಗಳ ಇನ್‌ಫ್ರಾರೆಡ್‌ ಥರ್ಮಾಮೀಟರ್‌ಗಳು ಬಹುತೇಕ ಚೀನದಿಂದಲೇ ಮಾರುಕಟ್ಟೆಗೆ ಪೂರೈಕೆಯಾಗುತ್ತಿವೆ. ಕನಿಷ್ಠ 4,000 ರೂ. ಗಳಿಂದ ಗರಿಷ್ಠ 12,000 ರೂ. ವರೆಗೆ ಈ ಸಾಧನ ಲಭ್ಯವಿದೆ. ಕೆಲವು ಸಾಧನಗಳು ಮನುಷ್ಯರ ದೇಹದ ಉಷ್ಣಾಂಶ ಪತ್ತೆ ಹಚ್ಚುವುದಿರಲಿ ಸಾಧಾರಣ ಗಾಳಿಗೆ ಹಿಡಿದರೂ ಉಷ್ಣಾಂಶ ತೋರಿಸುವಷ್ಟು ಕಳಪೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

ಸರಕಾರಿ ಆಸ್ಪತ್ರೆಗಳಷ್ಟೇ ಅಲ್ಲದೆ, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ವ್ಯಾಪಾರ- ವಾಣಿಜ್ಯೋದ್ಯಮಿಗಳು, ಮಳಿಗೆದಾರರು, ಸಂಘ ಸಂಸ್ಥೆಗಳು ಸಹ ಇನ್‌ಫ್ರಾರೆಡ್‌ ಥರ್ಮಾಮೀಟರ್‌ ಸಾಧನ ಬಳಸಲಾರಂಭಿಸಿವೆ. ದಿನ ಕಳೆದಂತೆ ಬೇಡಿಕೆ ಏರಿಕೆಯಾಗಿ ನಾನಾ ಬಗೆಯ ಸಾಧನಗಳು ಮಾರುಕಟ್ಟೆಗೆ ಬರುತ್ತಿದ್ದು, ಗುಣಮಟ್ಟದ ಬಗ್ಗೆ ಅನುಮಾನ ಮೂಡಲಾರಂಭಿಸಿದೆ.

ಇನ್‌ಫ್ರಾರೆಡ್‌ ಥರ್ಮಾಮೀಟರ್‌ಗಳ ಆಮದಿಗೆ ಆದರೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಕಾಯ್ದೆ ಮತ್ತು ನಿಯಮಾವಳಿ ಪ್ರಕಾರ ನಿಗದಿತ ದೃಢೀಕರಣವನ್ನು ಮೂರು ತಿಂಗಳಲ್ಲಿ ಪಡೆಯಬೇಕು. ಒಂದೊಮ್ಮೆ ಸಾಧನದಲ್ಲಿ ನಿಯಮಾನುಸಾರ ಮಾನದಂಡಗಳ ಪಾಲನೆಯಾಗದಿದ್ದಲ್ಲಿ ಇಲ್ಲವೇ ಪರೀಕ್ಷಾರ್ಥ ಪರಿಶೀಲನೆಯಲ್ಲಿ ವಿಫಲವಾದರೆ ಆ ಸಾಧನಗಳನ್ನು ಆಮದುದಾರರು ಮಾರುಕಟ್ಟೆಯಿಂದ ವಾಪಸ್‌ ಪಡೆಯಬೇಕು. ಜತೆಗೆ ಅವರ ವಿರುದ್ಧ ಕಾನೂನಿನ ಅನ್ವಯ ಕ್ರಮ ಜರಗಿಸಬೇಕು ಎಂದು ಕೇಂದ್ರ ಕಾನೂನು ಮಾಪನ ಶಾಸ್ತ್ರ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ. ಜು. 7ಕ್ಕೆ ಮೂರು ತಿಂಗಳ ಕಾಲಾವಕಾಶ ಮುಕ್ತಾಯವಾಗಲಿದೆ ಎಂದು ಮೂಲಗಳು ಹೇಳಿವೆ.

ಸಾಧನಗಳ ಜಪ್ತಿ
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಯು ಇತ್ತೀಚೆಗೆ ಚಾಮರಾಜಪೇಟೆ ಸಹಿತ ಇತರೆಡೆ ತಪಾಸಣೆ ನಡೆಸಿ ಹತ್ತಾರು ಬ್ರ್ಯಾಂಡ್ ಗಳ ಹಲವು ಇನ್‌ಫ್ರಾರೆಡ್‌ ಥರ್ಮಾ ಮೀಟರ್‌ಗಳನ್ನು ಜಪ್ತಿ ಮಾಡಿದೆ ಪರಿಶೀಲನೆಗೆ ಒಪ್ಪಿಸಿದೆ.

Advertisement

ಕೋವಿಡ್-19 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಈಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚೀನ ಸಹಿತ ಇತರೆಡೆಯಿಂದ ಇನ್‌ಫ್ರಾರೆಡ್‌ ಥರ್ಮಾಮೀಟರ್‌ಗಳು ಆಮದಾಗುತ್ತಿವೆ. ಆದರೆ ಈ ಸಾಧನಗಳಿಗೆ ದಿಲ್ಲಿಯ ನ್ಯಾಷನಲ್‌ ಫಿಸಿಕಲ್‌ ಲ್ಯಾಬೋರೇಟರಿಯ ದೃಢೀಕರಣ ಮತ್ತು ಕೇಂದ್ರ ಕಾನೂನುಮಾಪನ ಶಾಸ್ತ್ರ ಇಲಾಖೆಯ “ಮಾಡೆಲ್‌ ಅಪ್ರೂವಲ್‌’ ಇರಬೇಕು. ದೃಢೀಕರಣ ಪಡೆಯಲು ಇನ್ನೂ ಎರಡು ತಿಂಗಳ ಕಾಲಾವಕಾಶವಿದೆ. ಹಾಗಾಗಿ ತಪಾಸಣೆ ತೀವ್ರಗೊಳಿಸಿ ಸಾಧನದ ದೃಢೀಕರಣಕ್ಕೆ ಮನವಿ ಸಲ್ಲಿಸಲಾಗಿದೆಯೇ ಮತ್ತು ಸಲ್ಲಿಕೆಯಾಗಿದ್ದರೆ ಮಾನದಂಡದಂತೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು.
– ಎಂ. ಮಮತಾ,
ಸಹಾಯಕ ನಿಯಂತ್ರಕರು

Advertisement

Udayavani is now on Telegram. Click here to join our channel and stay updated with the latest news.

Next