Advertisement

ಟಿಕ್‌ಟಾಕ್‌ ಗೂಢಚಾರಿ : ಅಮೆರಿಕ ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ರಾಬರ್ಟ್‌ ಹೇಳಿಕೆ

03:31 AM Jul 16, 2020 | Hari Prasad |

ವಾಷಿಂಗ್ಟನ್‌/ ಹೊಸದಿಲ್ಲಿ: ಟಿಕ್‌ಟಾಕನ್ನು ಅಮೆರಿಕ ದೊಡ್ಡ ಗೂಢಚಾರಿ ಅಂತಲೇ ಜರೆದಿದೆ.

Advertisement

ಟಿಕ್‌ಟಾಕ್‌ ಮೇಲೆ ಭಾರತ ಡಿಜಿಟಲ್‌ ಸ್ಟ್ರೈಕ್‌ ನಡೆಸಿದಂತೆ ನಾವೂ ನಿಷೇಧ ಹೇರಿದರೆ, ಚೀನ ದೊಡ್ಡ ಗೂಢಚರ್ಯೆ ಸಾಧನದ ನಷ್ಟ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸಿದೆ.

‘ಭಾರತ ಈಗಾಗಲೇ ಕೆಲವು ಚೀನೀ ಆ್ಯಪ್‌ಗಳನ್ನು ನಿಷೇಧಿಸಿದೆ. ಚೀನವು ಭಾರತ ಮತ್ತು ಅಮೆರಿಕವನ್ನು ಕಳೆದುಕೊಂಡರೆ ಕೆಲವು ಯೂರೋಪಿಯನ್‌ ರಾಷ್ಟ್ರಗಳನ್ನೂ ಕಳಕೊಳ್ಳಬೇಕಾಗುತ್ತದೆ.

ಈಗಾಗಲೇ ಆ ಎಲ್ಲ ರಾಷ್ಟ್ರಗಳು ಭಾರತದ ಕ್ರಮ ಅನುಸರಿಸಲು ಚಿಂತಿಸುತ್ತಿವೆ. ಟ್ರಂಪ್‌ ಆಡಳಿತ ಈಗಾಗಲೇ ಟಿಕ್‌ಟಾಕ್‌, ವೀಚ್ಯಾಟ್‌ ಇತರೆ ಚೀನೀ ಆ್ಯಪ್‌ಗಳನ್ನು ನಿಷೇಧಿಸಲು ಗಂಭೀರ ತಯಾರಿಯಲ್ಲಿದೆ ಎಂದು ಯುಎಸ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್‌ ಒ’ಬ್ರಿಯಾನ್‌ ರೇಡಿಯೊ ಸಂದರ್ಶನದಲ್ಲಿ ಹೇಳಿದ್ದಾರೆ.

ಸಂಬಂಧಿಗಳ ಮ್ಯಾಪಿಂಗ್‌: ಟಿಕ್‌ಟಾಕನ್ನು ಮಕ್ಕಳು ಮೋಜಿನ ಸಂಗತಿಯಾಗಿ ಸ್ವೀಕರಿಸಿದ್ದಾರೆ. ಈ ಮೂಲಕ ಚೀನ ಖಾಸಗಿ ಡೇಟಾಗಳಲ್ಲದೆ, ಮಕ್ಕಳ ಅತ್ಯಂತ ಸಮೀಪವರ್ತಿಗಳ ಡೇಟಾವನ್ನೂ ಕದಿಯುತ್ತಿದೆ. ನಿಮ್ಮ ಸ್ನೇಹಿತರು, ಪೋಷಕರು ಯಾರೆಂಬುದೂ ಚೀನಕ್ಕೆ ತಿಳಿದಿದೆ. ಆ್ಯಪ್‌ ಬಳಕೆದಾರರ ಸಂಬಂಧಿಗಳ ನಕ್ಷೆಯನ್ನೂ ಚೀನ ಸುಲಭವಾಗಿ ನಕ್ಷೆ ಮಾಡಬಲ್ಲದು ಎಂದು ಡ್ರ್ಯಾಗನ್‌ ಕುತಂತ್ರವನ್ನು ಬಯಲಿಗೆಳೆದಿದ್ದಾರೆ.

Advertisement

ಅಮೆರಿಕ ವರ್ಸಸ್‌ ಚೀನ
ಮುಸ್ಲಿಮರ ಬಾಹುಳ್ಯವಿರುವ ಕ್ಸಿನ್‌ಜಿಯಾಂಗ್‌ ವಲಯದಲ್ಲಿ ಉದ್ಯಮಗಳು ಕಾರ್ಮಿಕರ ಮೇಲೆ ದಬ್ಟಾಳಿಕೆ ನಡೆಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಅಮೆರಿಕ ಎಚ್ಚರಿಕೆ ಚೀನದ ಅಸಹನೆಯನ್ನು ಹೆಚ್ಚಿಸಿದೆ. ಚೀನೀ ಉದ್ಯಮಗಳನ್ನು ತಾನು ರಕ್ಷಿಸುವುದಾಗಿ ಕ್ಸಿ ಜಿನ್‌ಪಿಂಗ್‌ ಆಡಳಿತ ಪ್ರತಿ ಹೇಳಿಕೆ ನೀಡಿದೆ.

ಚೀನ ವ್ಯವಹಾರಗಳಲ್ಲಿ ಅಮೆರಿಕದ ಹಸ್ತಕ್ಷೇಪ ಚೀನಕ್ಕೂ ಕೆಟ್ಟದ್ದು. ಅಮೆರಿಕಕ್ಕೂ ಕೆಟ್ಟದ್ದು ಹಾಗೂ ಇಡೀ ಜಗತ್ತಿಗೇ ಇದು ಕೆಟ್ಟದ್ದು ಎಂದು ಚೀನ ಎಚ್ಚರಿಸಿದೆ. ಕ್ಸಿನ್‌ಜಿಯಾಂಗ್‌ನಲ್ಲಿನ ಸಾಮೂಹಿಕ ಬಂಧನ ಮತ್ತು ಬಲವಂತದ ದುಡಿಮೆ ಸೇರಿದಂತೆ ಮುಸ್ಲಿಮರ ವಿರುದ್ಧ ಚೀನ ಕಮ್ಯುನಿಸ್ಟ್‌ ಪಕ್ಷದ ದಬ್ಟಾಳಿಕೆಗಳನ್ನು ಅಮೆರಿಕ ಖಂಡಿಸಿತ್ತು.

ಲಡಾಖ್‌ ಗಡಿಯಲ್ಲಿ 15 ಗಂಟೆ ಸಭೆ
ಪೂರ್ವ ಲಡಾಖ್‌ ಗಡಿಯಲ್ಲಿ ನಡೆದ ಕಾರ್ಪ್ಸ್ ಕಮಾಂಡರ್‌ಗಳ ಮಟ್ಟದ 4ನೇ ಹಂತದ ಸಭೆ 15 ಗಂಟೆಗಳಷ್ಟು ಸುದೀರ್ಘ‌ವಾಗಿ ನಡೆದಿದೆ. ಭಾರತದ ಗಡಿಯ ಚುಶುಲ್‌ ಭಾಗದಲ್ಲಿ ಮಂಗಳವಾರ ಬೆಳಗ್ಗೆ 11.30ರಿಂದ ನಡೆದ ಮ್ಯಾರಥಾನ್‌ ಸಭೆ ಮುಂಜಾನೆ 2 ಗಂಟೆಗಳ ತನಕ ನಡೆದಿದೆ.

ಎರಡೂ ರಾಷ್ಟ್ರಗಳು ಪ್ರೊಟೊಕಾಲ್‌ಗ‌ಳನ್ನು ಗೌರವಿಸಿ, ಎಲ್‌ಎಸಿಯಲ್ಲಿ ಶಾಂತಿಯ ಮರುಸ್ಥಾಪನೆಗೆ ಒಪ್ಪಿಕೊಂಡಿವೆ. ಎಲ್‌ಎಸಿಯ ಉದ್ದಕ್ಕೂ ಚೀನ ಸೇನೆ ಸಂಪೂರ್ಣವಾಗಿ ವಾಪಸು ನಡೆಯಬೇಕು. ಗಡಿಯಲ್ಲಿ ಪರಿಸ್ಥಿತಿ ಸುಧಾರಿಸುವ ಹೆಚ್ಚಿನ ಜವಾಬ್ದಾರಿ ಚೀನದ ಮೇಲಿದೆ ಎಂದು ಭಾರತೀಯ ನಿಯೋಗ ಸಭೆಯಲ್ಲಿ ಹೇಳಿರುವ ಬಗ್ಗೆ ಮೂಲಗಳು ತಿಳಿಸಿವೆ.

ನಾಳೆ ರಾಜನಾಥ್‌ ಲಡಾಖ್‌ಗೆ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಜು.17ರಂದು ಲಡಾಖ್‌ಗೆ ಭೇಟಿ ನೀಡಿ, ಗಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಭೂಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಸಾಥ್‌ ನೀಡಲಿದ್ದಾರೆ.

ಲಡಾಖ್‌ ನೆತ್ತಿಗೆ ಹಗುರ ಯುದ್ಧ ಟ್ಯಾಂಕರ್‌ಗಳು
ಲಡಾಖ್‌ ಗಡಿಯ ಯಾವುದೇ ಮೂಲೆಗೆ ವಿಮಾನಗ ಳಲ್ಲಿ ಸುಲಭವಾಗಿ ಹೊತ್ತೂಯ್ಯಬಲ್ಲ ಯುದ್ಧ ಟ್ಯಾಂಕರ್‌ಗಳ ತುರ್ತು ಖರೀದಿಗೆ ಭಾರತೀಯ ಸೇನೆ ನಿರ್ಧ ರಿ ಸಿದೆ. ಮುಖ್ಯ ಯುದ್ಧ ಟ್ಯಾಂಕರ್‌ಗಳಿಗೆ ಹೋಲಿಸಿದರೆ ಇವು ಅತ್ಯಂತ ಚುರುಕು ಹಾಗೂ ಸುಧಾರಿತವಾಗಿದ್ದು, ಲಡಾಖ್‌ ಗಡಿಯ ಎತ್ತರದ ಪ್ರದೇಶಗಳಲ್ಲಿ ನಿಯೋಜನೆಗೊಳ್ಳಲಿವೆ ಎಂದು ತಿಳಿದುಬಂದಿದೆ. ಏಪ್ರಿಲ್‌ ಅಂತ್ಯದಲ್ಲಿ ಚೀನ ಟೈಪ್‌- 15 ಟ್ಯಾಂಕರ್‌ಗಳನ್ನು ಗಡಿಯಲ್ಲಿ ನಿಯೋಜಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಈ ತಂತ್ರ ರೂಪಿಸಿದೆ.

300 ಕೋಟಿ ರೂ. ಬಿಡುಗಡೆ
ಲಡಾಖ್‌ ಗಡಿಬಿಕ್ಕಟ್ಟಿನ ನಡುವೆ ಮತ್ತಷ್ಟು ಶಸ್ತ್ರಾಸ್ತ್ರಗಳ ಖರೀದಿಗೆ 300 ಕೋಟಿ ರೂ.ಗಳನ್ನು ಭಾರತೀಯ ಸೇನೆಗೆ ನೀಡಲು ರಕ್ಷಣಾ ಖರೀದಿ ಸಮಿತಿ ಸಭೆ ಗ್ರೀನ್‌ಸಿಗ್ನಲ್‌ ನೀಡಿದೆ. ತುರ್ತು ಕಾರ್ಯಾಚರಣೆ ಅವಶ್ಯಕತೆಯ ನಿಧಿ ಅಡಿಯಲ್ಲಿ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಡಿಎಸಿ ಸಭೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next