Advertisement

ಚೀನ ವಾಯು ಪಿತೂರಿ; ಎಲ್‌ಎಸಿಯಲ್ಲಿ 3 ವರ್ಷಗಳಿಂದ ವಾಯುಪಡೆ ಚಟುವಟಿಕೆ

01:12 AM Sep 23, 2020 | mahesh |

ಹೊಸದಿಲ್ಲಿ: ಕಪಟಿ ಚೀನ ಕಳೆದ 3 ವರ್ಷಗಳಲ್ಲಿ ಭಾರತದ ಗಡಿಪ್ರದೇಶ ಸಮೀಪ ವಾಯುಪಡೆಯ ಪ್ರಾಬಲ್ಯವನ್ನು ದುಪ್ಪಟ್ಟು ಹೆಚ್ಚಿಸಿಕೊಂಡಿದೆ. ವಾಯುನೆಲೆ, ವಾಯು ರಕ್ಷಣಾ ವ್ಯವಸ್ಥೆ ಮತ್ತು ಹೆಲಿಪೋರ್ಟ್‌ಗಳನ್ನು ಅಧಿಕ ಸಂಖ್ಯೆಯಲ್ಲಿ ನಿರ್ಮಿಸಿಕೊಂಡಿದೆ.

Advertisement

ಪೂರ್ವ ಸಿಕ್ಕಿಂ ಗಡಿಯಿಂದ ಬಿಕ್ಕಟನ್ನು ಲಡಾಖ್‌ನತ್ತ ಏಕಾಏಕಿ ಕೊಂಡೊಯ್ದಿರುವ ಚೀನ, ಈ ಭಾಗದಲ್ಲೇ ಹೆಚ್ಚು ವಾಯುನಿರ್ಮಾಣ ಕೈಗೆತ್ತಿಕೊಂಡಿದೆ ಎಂದು ಭೌಗೋಳಿಕ ಗುಪ್ತಚರ ವೇದಿಕೆ “ಸ್ಟಾರ್ಟ್‌ಫಾರ್‌’ ವರದಿ ತಿಳಿಸಿದೆ. ಭಾರತದ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಡಲು ಚೀನ ಸೇನೆ ನಿರ್ಮಿಸಿದ ವಾಯು ನಿರ್ಮಾಣ ಯೋಜನೆಗಳ ಚಿತ್ರಗಳನ್ನೂ ಸ್ಟಾರ್ಟ್‌ಫಾರ್‌ ಬಿಡುಗಡೆ ಮಾಡಿದೆ.

“ವಿಶೇಷವಾಗಿ ಲಡಾಖ್‌ ಬಿಕ್ಕಟ್ಟಿನ ನಂತರವೇ ಚೀನ ಭಾರತದ ಗಡಿಯಲ್ಲಿ ಸೇನಾ ನಿರ್ಮಾಣಗಳನ್ನು ಹೆಚ್ಚಿಸಿದೆ. ಇಲ್ಲಿನ ಎಲ್‌ಎಸಿ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಬೀಜಿಂಗ್‌ ಅಪಾರ ಪ್ರಮಾಣದಲ್ಲಿ ಮಿಲಿಟರಿ ವೆಚ್ಚ ಮಾಡಿದೆ’ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಏನೇನು ನಿರ್ಮಾಣ?
“ಭಾರತದ ಗಡಿಗೆ ಹೊಂದಿಕೊಂಡಂತೆ 13 ಹೊಸ ಮಿಲಿಟರಿ ನೆಲೆಗಳು ತಲೆ ಎತ್ತುತ್ತಿವೆ. 3 ವಾಯುನೆಲೆ, 5 ಶಾಶ್ವತ ವಾಯು ಭದ್ರತಾ ವ್ಯವಸ್ಥೆ, 5 ಹೆಲಿಪೋರ್ಟ್‌ಗಳೂ ಇದರಲ್ಲಿ ಸೇರಿವೆ. 5ರಲ್ಲಿ 4 ಹೆಲಿಪೋರ್ಟ್‌ಗಳನ್ನು ಮೇ ತಿಂಗಳ ಲಡಾಖ್‌ ಬಿಕ್ಕಟ್ಟಿನ ಬಳಿಕ ಕೈಗೆತ್ತಿಕೊಂಡಿದೆ’ ಎಂದು ಹೇಳಿದೆ. “ಹೆಚ್ಚುವರಿ ರನ್‌ವೇಗಳು, ಏರ್‌ಕ್ರಾಫ್ಟ್ ನಿಲುಗಡೆಗಳಲ್ಲದೆ, ವಾಯುವೀಕ್ಷಣಾ ಕೇಂದ್ರಗಳ ಮೂಲಕ ಭಾರತದ ಐಎಎಫ್ ಕಾರ್ಯತಂತ್ರವನ್ನು ಕದ್ದು ನೋಡಲು ಚೀನ ಹೊಂಚು ಹಾಕಿದೆ’ ಎಂದೂ ವರದಿ ಎಚ್ಚರಿಸಿದೆ.

ಏಕೆ ಹೀಗೆ ಮಾಡ್ತಿದೆ?
ಲಡಾಖ್‌ ಬಿಕ್ಕಟ್ಟು ಚೀನದ ಮಿಲಿಟರಿ ಕಾರ್ಯತಂತ್ರದ ಪ್ರಮುಖ ಭಾಗ. ದಕ್ಷಿಣ ಚೀನ ವಲಯದ ನೌಕಾ ನಿರ್ಮಾಣಗಳಂತೆ ಇಲ್ಲೂ ವಾಯುನೆಲೆ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಭವಿಷ್ಯದ ಮಿಲಿಟರಿ ಮುಖಾಮುಖೀ ಉದ್ದೇಶ ಮತ್ತು ಭಾರತೀಯ ಸೇನೆಯ ಧೈರ್ಯಗೆಡಿಸಲು ಪಿಎಲ್‌ಎ ಈ ನಿರ್ಮಾಣ ಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

Advertisement

ವಿವಾದಿತ ನಕ್ಷೆಯ ಪಠ್ಯಪುಸ್ತಕ ವಿತರಣೆಗೆ ನೇಪಾಲ ಸರಕಾರ ತಡೆ
ವಿವಾದಿತ ನಕ್ಷೆಯನ್ನು ಪಠ್ಯಪುಸ್ತಕಗಳಲ್ಲಿ ಮುದ್ರಿಸಿದ್ದ ನೇಪಾಲ ಈಗ ಅವುಗಳ ವಿತರಣೆಗೆ ತಡೆಹಿಡಿದಿದೆ. ಪಠ್ಯ ಹಾಗೂ ನಕ್ಷೆ¿ಲ್ಲಿ ಹಲವು ದೋಷಗಳು ಕಂಡು ಬಂದಿದ್ದರಿಂದ ಈ ನಿಲುವು ತೆಗೆದುಕೊಳ್ಳಲಾಗಿದೆ ಎಂದು ನೇಪಾಲಿ ಮಾಧ್ಯಮ ಗಳು ವರದಿ ಮಾಡಿವೆ. ಶಿಕ್ಷಣ ಇಲಾಖೆ ಮಂಗಳವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಠ್ಯದಲ್ಲಿ ವಿವಾದಿತ ನಕ್ಷೆ ಪ್ರಕಟಿಸಿದ್ದಕ್ಕೆ ಕೆ.ಪಿ. ಶರ್ಮಾ ಓಲಿ ಆಡಳಿತದಲ್ಲೇ ಅಪಸ್ವರ ಎದ್ದಿದೆ. “ನೇಪಾಲದ ಭೌಗೋಳಿಕ ಪ್ರದೇಶಗಳನ್ನು ಬದಲಿಸಲು ಶಿಕ್ಷಣ ಇಲಾಖೆಗೆ ಯಾವುದೇ ಅಧಿಕಾರವಿಲ್ಲ. ಅಲ್ಲದೆ, ಮುದ್ರಿಸಿದ್ದ ಪಠ್ಯ ಪುಸ್ತಕಗಳಲ್ಲಿ ಹಲವು ದೋಷಗಳಿದ್ದವು’ ಎಂದು ಭೂ ಸುಧಾರಣೆ ಮತ್ತು ಸಹಕಾರ ಸಚಿವಾಲಯ ವಕ್ತಾರ ಜನಕರಾಜ್‌ ಆಕ್ಷೇಪ ತೆಗೆದಿದ್ದಾರೆ. ಉನ್ನತ ಅಧಿಕಾರಿಗಳ ಸಲಹೆ ಪಡೆದು, ಪರಿಷ್ಕೃತ ಪಠ್ಯ ಮುದ್ರಿಸಲು ನಿರ್ಧರಿಸಲಾಗಿದೆ. ಈ ಪಠ್ಯಗಳನ್ನು 9 ಮತ್ತು 12ನೇ ತರಗತಿಗೆ ಅಳವಡಿಸಲಾಗಿತ್ತು.

ಭಾರತೀಯ ಟಿಕ್‌ಟಾಕ್‌ ಬಳಕೆದಾರರ 3.7 ಕೋಟಿ ವೀಡಿಯೋ ಡಿಲೀಟ್‌
ಭಾರತೀಯ ಬಳಕೆದಾರರ 3.7 ಕೋಟಿ ವೀಡಿಯೋಗಳನ್ನು ಟಿಕ್‌ಟಾಕ್‌ ತನ್ನ ಸರ್ವರ್‌ನಿಂದ ತೆಗೆದುಹಾಕಿದೆ. ಡಿಜಿಟಲ್‌ ಮಾರ್ಗಸೂಚಿಗಳನ್ನು ಉಲ್ಲಂ ಸಿದ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟಿಕ್‌ಟಾಕ್‌ ನಿರ್ವಾಹಕ ಬೈಟ್‌ಡ್ಯಾನ್ಸ್‌ ಹೇಳಿಕೊಂಡಿದೆ. ಭಾರತ ಅಲ್ಲದೆ, ಜಗತ್ತಿನ ವಿವಿಧ ದೇಶಗಳ ಬಳಕೆದಾರರ 10,45,43,719 ವೀಡಿಯೋಗಳನ್ನು ಟಿಕ್‌ಟಾಕ್‌ ಕಿತ್ತೂಗೆದಿದೆ. 42 ದೇಶಗಳಿಂದ 1768 ದೂರು ಸ್ವೀಕರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಟಿಕ್‌ಟಾಕ್‌ ಆ್ಯಪ್‌ ಅನ್ನು ಈಗಾಗಲೇ ಭಾರತ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ನಿಷೇಧಿಸಿದ ಬೆನ್ನಲ್ಲೇ ಬೈಟ್‌ಡ್ಯಾನ್ಸ್‌ ಈ ಕ್ರಮ ತೆಗೆದುಕೊಂಡಿರುವುದು ಕುತೂಹಲ ಮೂಡಿಸಿದೆ.

14 ಗಂಟೆ ಸುದೀರ್ಘ‌ ಸಭೆ
ಭಾರತ- ಚೀನ ನಡುವಿನ ಕಾರ್ಪ್ ಕಮಾಂಡರ್‌ಗಳ ಮಟ್ಟದ 6ನೇ ಸುತ್ತಿನ ಮಾತುಕತೆ ಸೋಮವಾರ 14 ಗಂಟೆ ನಡೆದಿದೆ ಎಂದು ಸೇನೆಯ ಮೂಲಗಳು ತಳಿಸಿವೆ. ಚೀನ ಎಲ್‌ಎಸಿ ಬದಿಯ ಮೋಲ್ಡೊ ಗಡಿ ಪೋಸ್ಟ್‌ ನಲ್ಲಿ ನಡೆದ ಸಭೆಯಲ್ಲಿ ಬಿಕ್ಕಟ್ಟಿನ ಪ್ರದೇಶಗಳಿಂದ ಘರ್ಷಣೆಯ ಉದ್ವಿಗ್ನತೆ ತಗ್ಗಿಸುವ ಬಗ್ಗೆ ಹೆಚ್ಚು ಚರ್ಚೆ ನಡೆಯಿತು. ಸೆ.10ರಂದು ನಡೆದ ಮಾಸ್ಕೋ ಸಭೆಯಲ್ಲಿ ತೆಗೆದುಕೊಂಡ 5 ಅಂಶಗಳ ಜಾರಿಗೆ ಹೆಚ್ಚು ಒತ್ತು ಕೊಡಲಾಯಿತು. ಘರ್ಷಣೆ ಪೂರ್ವದಲ್ಲಿ ಅಂದರೆ ಏಪ್ರಿಲ್‌- ಮೇ ಹಿಂದಿನ ಗಡಿಸ್ಥಿತಿಯನ್ನು ಯಥಾವತ್ತು ಕಾಪಾಡುವಂತೆ ಭಾರತದ ಲೆ| ಜ| ಹರಿಸಿಂಗ್‌ ನೇತೃತ್ವದ ನಿಯೋಗ ಸಭೆಯಲ್ಲಿ ಪಟ್ಟುಹಿಡಿಯಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next