Advertisement

ಚೀನಾ ಯಾನ 

09:16 AM May 20, 2018 | |

ತಂತ್ರಜ್ಞಾನ, ಆಧುನಿಕತೆ, ಪ್ರಗತಿಶೀಲತೆಯ ದೇಶ- ಚೀನ. ಸರಳತೆ, ಸಜ್ಜನಿಕೆ, ಸ್ವಚ್ಚತೆ ಅಳವಡಿಸಿಕೊಂಡವರು ಅಲ್ಲಿಯ ಜನ. ಭಾರತದಂತೆಯೇ ಅದೊಂದು ಅಪೂರ್ವ ಸಾಧಕರ ದೇಶ. ರೇಷ್ಮೆ ಬಟ್ಟೆ, ಪಿಂಗಾಣಿ ಪಾತ್ರೆ, ವೈನ್‌, ಐದು ವಿಧದ ಚಹಾ ಅಲ್ಲಿನ ವಿಶೇಷ. ದಿಕ್ಸೂಚಿ, ಕಾಗದ, ಗಾಜು, ಶಾಯಿ, ಭೂಕಂಪ ಮಾಪನ ಇತ್ಯಾದಿಗಳನ್ನು ಕಂಡುಹಿಡಿದವರು ಚೀನಿಯರು. ಅವರ ಸಾಧನೆ ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. 

Advertisement

ಭಾರತದ ವಾಯುವ್ಯ ಭಾಗದಲ್ಲಿರುವ ದೇಶ ಚೀನ. ನೇರ ಹೋದರೆ ಹತ್ತಿರವಾಗುತ್ತಿತ್ತೋ ಏನೋ.. ಆದರೆ ನಾವು ಸ್ವಲ್ಪ ಸುತ್ತು ಬಳಸಿ ಹೋದೆವು. ನಾವು ಹೋದ ದಾರಿ ಮಂಗಳೂರಿನಿಂದ ಕೊಚ್ಚಿನ್‌ ಗೆ ರೈಲು, ಕೊಚಿನ್‌ ನಿಂದ ಕೊಲಂಬೊಗೆ ವಿಮಾನ ಮತ್ತೆ ಕೊಲಂಬೋದಿಂದ ಚೀನಾದ ವಾಣಿಜ್ಯ ನಗರ ಶಾಂಘಾಯ್‌ಗೆ ಏಳು ಗಂಟೆ ವಿಮಾನಯಾನ. ಇಲ್ಲಿಂದ ಅಲ್ಲಿಗೆ ಮೂರು ಗಂಟೆ ವ್ಯತ್ಯಾಸ.  ನಿಲ್ದಾಣದಲ್ಲಿ ಇಳಿದರೆ ಚುಮುಚುಮು ಚಳಿ… ಅಲ್ಲಿಂದ ನೇರ ಹೋಟೆಲ್‌ ಲಾಡ್ಜ್ಗೆ. ಮರುದಿನದಿಂದ ಯಾತ್ರೆ ಆರಂಭ.

ಪ್ರಾಚೀನ ಮತ್ತು ಆಸಕ್ತಿದಾಯಕ ಇತಿಹಾಸ ಇರುವ ಚೀನಾ ದೇಶ ಹೋರಾಟದ ಮನೋಭಾವ ಮತ್ತು ಛಲಕ್ಕೆ ಹೆಸರುವಾಸಿ. ಚಂಗೇಸ್‌ ಖಾನ್‌ ನಂತಹ ಮೃಗೀಯ ಆಕ್ರಮಣಕಾರರಿಂದ ಮತ್ತು ಉತ್ತರದ ಮಂಗೋಲಿಯನರ ನಿರಂತರ ದಾಳಿ, ಹೂಣರ ಸತತ ದಬ್ಟಾಳಿಕೆಗೆ ತತ್ತರಿಸಿ ಕ್ರಿಸ್ತ ಪೂರ್ವ 220ರಿಂದ ಲಾಗಾಯ್ತು ಕಟ್ಟಲು ಆರಂಭಿಸಿದ ತಡೆಗೋಡೆ, ಕಲ್ಲು ಮತ್ತು ಸುಟ್ಟಮಣ್ಣು ಉಪಯೋಗಿಸಿ ಮಾಡಿದ್ದು. ಅದು ಮಿಂಗ್‌ ಆಡಳಿತದ ಕಾಲ. ಆ ನಂತರ ಬಂದ ಚಿಂಗ್‌ ಮನೆತನದ ರಾಜರು ಈ ರಕ್ಷಣಾ ಗೋಡೆಯನ್ನು ಹದಿನಾರನೆಯ ಶತಮಾನದವರೆಗೂ ಸರಿಸುಮಾರು ಎಂಟು ಸಾವಿರ ಕಿ. ಮೀ. ವರೆಗೂ ವಿಸ್ತರಿಸಿಕೊಂಡುಹೋದರು ಎಂದರೆ ನೀವು ಊಹಿಸಿ. ಗೋಡೆ ಎಂದರೆ ಸಾಮಾನ್ಯ ಗೋಡೆ ಅಲ್ಲ.. ಮಹಾಗೋಡೆ.  ಸುಮಾರು ಮೂವತ್ತರಿಂದ ನಲುವತ್ತು ಅಡಿ ಎತ್ತರ, ಅಷ್ಟೇ ಅಗಲ. ಪ್ರಕೃತಿ ಸಹಜ ಗುಡ್ಡ ಬೆಟ್ಟಗಳ ಮೇಲೂ ಕಟ್ಟಿದ್ದೇ ಕಟ್ಟಿದ್ದು. ನಡುವೆ ಕೆಲವು ನದಿಗಳು ಹಾದುಹೋದದ್ದೂ ಇವೆ. ಕೆಲವೊಂದು ಕಡೆ ಮಹಡಿಯ ಮೇಲೆ ಕೋಟೆ, ಸೈನಿಕರ ವಿಶ್ರಾಂತಿ ಕೋಣೆ, ಬತ್ತೇರಿ. ದುರ್ಗಮ ಹಾದಿಯಲ್ಲೂ ಆ ರೀತಿ  ತಡೆಗೋಡೆ  ಕಟ್ಟಿದ್ದು ಚೀನಿಯರ ಸಾಧನೆಯಲ್ಲದೆ ಮತ್ತೇನು? ಜೀವಭಯ ಒಮ್ಮೊಮ್ಮೆ ಮನುಷ್ಯನಿಂದ ಎಂತಹ ಸಾಧನೆ ಮಾಡಿಸುತ್ತದೆ ನೋಡಿ!

ಮೂರನೆಯ ಮಗುವಾದರೆ…
ಜನಸಂಖ್ಯಾ ಸ್ಫೋಟವಾಗಂತೆ ತಡೆಯಲೂ ಅಲ್ಲಿ ಕಠಿಣ ಕ್ರಮ ಇದೆ. ಒಂದು ಕುಟುಂಬಕ್ಕೆ ಎರಡೆ ಮಕ್ಕಳು. ಅಪ್ಪಿತಪ್ಪಿ ಮೂರನೆ ಮಗುವಾದರೆ? ಪರವಾಗಿಲ್ಲ. ಅಂತವರು ಸರಕಾರಕ್ಕೆ 27,000 ಯುವಾನ್‌ ದಂಡ ಪಾವತಿಸಬೇಕು. ಅಲ್ಲಿನ ಒಂದು ಯುವಾನ್‌ ಅಂದರೆ ಭಾರತದ ಸುಮಾರು ಹತ್ತೂವರೆ ರೂ. ! ಬೇಕಾ ಮೂರನೆ ಮಗು?

ಶಿಕ್ಷಣಕ್ಕೆ ಚೀನಿಯರು ಬಹಳ ಮಹತ್ವ ನೀಡಿದ್ದಾರೆ. ಒಂಬತ್ತನೆ ತರಗತಿಯ ವರೆಗೆ ಎಲ್ಲಾ ಮಕ್ಕಳಿಗೆ ಶಿಕ್ಷಣ ಕಡ್ಡಾಯ. ಸರಕಾರಿ ಶಾಲೆಯಲ್ಲಿ ಅಲ್ಲಿಯ ತನಕ ಉಚಿತ ಶಿಕ್ಷಣ. ಮಕ್ಕಳ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಚೀನಿಯರಲ್ಲಿ ಮಹಿಳೆಯರಿಗೆ ವಿಶೇಷ ಗೌರವ. ಸ್ತ್ರೀ ಸ್ವಾತಂತ್ರ್ಯಕ್ಕೆ, ಸ್ವಾವಲಂಬನೆಗೆ ಮನ್ನಣೆ ನೀಡಿದ ದೇಶ ಅದು. ಕೆಲವೊಂದು ಕಡೆ ಇಡಿಯ ಅಂಗಡಿ, ಹೊಟೇಲುಗಳನ್ನು ನಡೆಸುವವರೆ ಮಹಿಳೆಯರು. ಕ್ಯಾಶಿಯರ್‌, ವೈಟರ್‌, ಕುಕ್‌ ಓನರ್‌ ಎಲ್ಲವೂ ಸ್ತ್ರೀಯರೆ..!

Advertisement

ಅಲ್ಲಿಯವರಿಗೆ ಅಪೂರ್ವ ಭಾಷಾಪ್ರೇಮ. ಜಪ್ಪಯ್ಯ ಎಂದರೂ ಬೇರೆ ಭಾಷೆ ಮಾತಾಡಲೊಲ್ಲರು. ನಾನು ಕೆಲವರೊಂದಿಗೆ ಸಂಹವನ ಮಾಡಿದ್ದು ಮೊಬೈಲ್‌ ಆಪ್‌ ನಿಂದ. ನಾನು ಆಂಗ್ಲ ಭಾಷೆಯಲ್ಲಿ ಮಾತಾಡಿ ರೆಕಾರ್ಡ್‌ ಮಾಡಿದ್ರೆ, ಅದು ಚೀನಾ ಭಾಷೆಯಲ್ಲಿ ಅನುವಾದ ಆಗುತ್ತಿತ್ತು. ತಂತ್ರಜ್ಞಾನಕ್ಕೆ ತಲೆದೂಗಿದೆ.ಜನರು ಸಾಂಸ್ಕೃತಿಕವಾಗಿ ಬೆಳೆದ ರೀತಿ ಗಮನಾರ್ಹವಾದದ್ದು. ಸರ್ಕಸ್‌, ಜಿಮ್ನಾಸ್ಟಿಕ್‌ ಗಳಲೆಲ್ಲಾ ಅವರಿಗೆ ಅವರೇ ಸಾಟಿ. ಬಣ್ಣ ಬಣ್ಣದ ಬೆಳಕಿನ ಬಲುºಗಳಿಂದ ಆವೃತವಾದ ದೊಡ್ಡ ದೊಡ್ಡ ಕಟ್ಟಡಗಳು ಇನ್ನೇನು ಗಗನವನ್ನು ಮುತ್ತಿಕ್ಕಿ, ಚಂದ್ರನ ಬೆಳಕಿಗೆ ಸ್ಪರ್ಧೆಯೊಡ್ಡುವಂತೆ ಕಾಣಿಸುತ್ತವೆ. 

ಅವರ ಸಂಪ್ರದಾಯ, ಧರ್ಮದ ಮೇಲಿನ ನಂಬಿಕೆ, ವಾಸ್ತು ಶಾಸ್ತ್ರದ ಕಲ್ಪನೆಗಳ ನಡುವೆಯೂ ಸಮಾಜವಾದದ ನೆಲೆಗಟ್ಟಿನಲ್ಲೆ ಆಡಳಿತ ನಡೆಸುವುದು ಅಲ್ಲಿನ ವಿಶೇಷತೆ. ಅವರ ವಾಸ್ತು ಶಿಲ್ಪ ಮತ್ತು ಅದರ ನಂಬಿಕೆಗಳು ಮಾತ್ರ ವಿಚಿತ್ರ. ನಮ್ಮಲ್ಲಿ ದೊರಕುವ ಮಾರ್ಬಲ್‌ ಕಲ್ಲಿನಂತೆ ಹೊಳೆಯುವ ಸ್ವಲ್ಪ ಪಾರದರ್ಶಕ ಕಲ್ಲು ಅಲ್ಲಿ ಧಾರಾಳ ಸಿಗುತ್ತದೆ. ಅದನ್ನು ಜೇಡ್‌ ಎನ್ನುತ್ತಾರೆ. ಅದರಿಂದ ಅವರು ಬುದ್ಧ, ಡ್ರ್ಯಾಗನ್‌ ಇತ್ಯಾದಿ ಮೂರ್ತಿ, ಪೆಂಡೆಂಟ್‌ಗಳನ್ನು ಮಾಡುತ್ತಾರೆ ಮತ್ತು ಮಾರುತ್ತಾರೆ. ನಗುವ ಬುದ್ಧನನ್ನು ಮನೆಯಲ್ಲಿಟ್ಟರೆ ನೆಮ್ಮದಿ, ಫಾಮಿಲಿ ಬಾಲ್‌ ಇಟ್ಟರೆ ಸೌಹಾರ್ದ ಸಂಬಂಧ, ಪಿಕ್ಷು ಡ್ರ್ಯಾಗನ್‌ ಇಟ್ಟರೆ ಧನಲಾಭ ಮುಂತಾಗಿ ಅನೇಕ ವಿಷಯಗಳನ್ನು ಗಂಭೀರವಾಗಿ ನಂಬುವವರು ಅಲ್ಲಿ ಧಾರಾಳವಾಗಿ ಇ¨ªಾರೆ. ಅದಕ್ಕೊಂದು ಅವರಲ್ಲಿ ಆಸಕ್ತಿಯ ಕತೆ ಇದೆ. ಬೀಜಿಂಗ್‌ ಎಂಬ ರಾಜಕೀಯವಾಗಿ ಪ್ರಮುಖವಾದ ನಗರದಲ್ಲಿ ಫಾರ್ಬಿಡನ್‌ ಸಿಟಿ ಎಂಬ ಸ್ಥಳವಿದೆ. ಫಾರ್ಬಿಡನ್‌ ಎಂದರೆ ನಿರ್ಲಕ್ಷ್ಯಕ್ಕೆ ಒಳಗಾದ ನಗರ. ಅಲ್ಲಿ ರಾಜರ ಕಾಲದಲ್ಲಿ ಜನಸಾಮಾನ್ಯರಿಗೆ ಪ್ರವೇಶವಿರಲಿಲ್ಲವಂತೆ. ಹಾಗಾಗಿ, ಅದಕ್ಕೆ ಹಾಗೆ ನಾಮಕರಣವಾಗಿತ್ತು. ಚೀನಿಯರ ಕಾಲ್ಪನಿಕ ಪ್ರಾಣಿ ಡ್ರ್ಯಾಗನ್‌. ಅದರ ಮಗನಾದ ಪಿಕ್ಷು ಎಂಬುದು ಈ ಫಾರ್ಬಿಡನ್‌ ಸಿಟಿಯ ದ್ವಾರಪಾಲಕನಾಗಿತ್ತಂತೆ. ಅದು ಒಳಬರುವ ಅದೃಷ್ಟವನ್ನೆಲ್ಲ ನುಂಗುತಿತ್ತು. ಆದರೆ ವಿಸರ್ಜಿಸುತ್ತಿರಲಿಲ್ಲವಂತೆ. ಹಾಗಾಗಿ, ಅದರ ಮೂರ್ತಿಯನ್ನೋ, ಪದಕವನ್ನೋ ಧರಿಸಿಕೊಂಡರೆ ಅದೃಷ್ಟ ಖುಲಾಯಿಸುತ್ತದೆ ಎಂಬುದೊಂದು ಪ್ರತೀತಿ!

ಇನ್ನೊಂದು ವಿಷಯ. ಅಲ್ಲಿ ಯಾರಿಗೂ ಸ್ಥಿರಾಸ್ತಿ ಕೊಳ್ಳುವಂತಿಲ್ಲ. ಜಾಗವೆಲ್ಲಾ ಸರಕಾರದ್ದು. ಎಪ್ಪತ್ತು, ಎಂಬತ್ತು ವರ್ಷ ಕಳೆದು ಸರಕಾರಕ್ಕೆ ವಾಪಾಸು ಕೊಡಬೇಕು. ಕಾರು ಕೊಳ್ಳುವ ದುಪ್ಪಟ್ಟು ಬೆಲೆ ಅದರ ಪಾರ್ಕಿಂಗ್‌ ಸ್ಥಳ ಮತ್ತು ನಂಬರ್‌ ಪ್ಲೇಟಿಗೆ! ಸರಕಾರ ಉದ್ಯಮಕ್ಕೆ ಹೆಚ್ಚು ಪೋ›ತ್ಸಾಹ ನೀಡುತ್ತದೆ. ಅದರಲ್ಲೂ ಹೆಚ್ಚಿನ ಆದಾಯ ಬರುವ ಮುತ್ತು, ಸಿಲ್ಕ… ಮತ್ತು ಜೇಡ್‌ ಕಾರ್ಖಾನೆ ಸರಕಾರವೇ ನಡೆಸುತ್ತದೆ. 

ಚೀನಾ ಮಾಲು !
ಚೀನಾದಲ್ಲಿ ನಮಗೆ ಹೊಟ್ಟೆ ಚಿಂತೆ ಕಾಡಿತ್ತು. ರಸ್ತೆ ಬದಿ ಅಂಗಡಿಗಳಲ್ಲಿ ಜಿರಳೆ, ಹಾವು ಇತ್ಯಾದಿಗಳನ್ನು ಚೀನಿಯರು ತಿನ್ನುವುದನ್ನು ಯೂಟ್ಯೂಬಿನಲ್ಲಿ ನೋಡಿದ ನೆನಪಿತ್ತು. ಆದರೆ ಅಲ್ಲಿ ನಮಗೆ ಒಂದು ಆಶ್ಚರ್ಯ ಕಾದಿತ್ತು. ಅಲ್ಲಿ ರಸ್ತೆಬದಿಯಲ್ಲಿ ಎಲ್ಲೂ ಅಂತಹ ದೃಶ್ಯಗಳೇ ಇಲ್ಲ. ವೈಭವದ ಹೊಟೇಲುಗಳಿವೆ. ನಮ್ಮವರ ಅನೇಕ ಹೋಟೇಲಿದೆ. ನಮ್ಮದೇ ಶೈಲಿಯ ಊಟವೂ ಇದೆ. ರುಚಿಕರವಾದ ಫ್ರೈಡ್‌ ರೈಸ್‌, ಚಿಲ್ಲಿ, ಮಂಚೂರಿ, ನೂಡಲ್ಸ… ಎಲ್ಲವೂ ಇದೆ. ಒಲೆಯನ್ನೆ ಡೈನಿಂಗ್‌ ಟೇಬಲಿಗೆ ತಂದು ಇದ್ದಷ್ಟು ಹೊತ್ತೂ ಬಿಸಿ ಆರದಂತೆ ಮಾಡುವ ವ್ಯವಸ್ಥೆಯೂ ಇದೆ. ಬಹಳ ಮುಖ್ಯವಾಗಿ, ಚೀನಿಯರ ಉಪಹಾರದಲ್ಲಿ ಪ್ರಮುಖವಾಗಿ ಇರುವಂತದ್ದು ನಮ್ಮ ಗಂಜಿ ! ಆದರೆ, ಉಪ್ಪಿನಕಾಯಿ ಮಾತ್ರ ಇಲ್ಲ. ಊಟದಲ್ಲಿ ಉಪ್ಪು, ಖಾರ ಯಾವುದೂ ಇಲ್ಲ. ಎಲ್ಲವೂ ಮಿತಿಯಲ್ಲಿ. ಬಹುಶಃ ಹಾಗಾಗಿಯೇ ಜನ ಕೂಡ ಸಾತ್ವಿಕತೆ ಬೆಳೆಸಿಕೊಂಡಿ¨ªಾರೆ. ಆದರೆ ಅವರು ಪಾನಪ್ರಿಯರು. ಎಲ್ಲಾ  ಹಾದಿ ಬೀದಿಯ ಅಂಗಡಿಯಲ್ಲೂ ಬಿಯರ್‌ಮಾಮೂಲಿಯಾಗಿ ಸಿಗುತ್ತದೆ !

ಚೀನಾ ಇಲೆಕ್ಟ್ರಾನಿಕ್‌ ವಸ್ತುಗಳು ವಿಶ್ವದಲ್ಲೇ ಪ್ರಸಿದ್ಧ. ಇಲ್ಲಿ ಕೇಳಿದರೆ “ಛೀ! ಚೀನಾದ್ದು ಗ್ಯಾರಂಟಿಯದ್ದಲ್ಲ’ ಎಂದು. ಆದರೆ, ಅಲ್ಲಿ ನೋಡಿದರೆ ಅವರದ್ದು ಕ್ವಾಲಿಟಿಯಲ್ಲಿ ಯಾವುದೇ ಕಾಂಪ್ರೊಮೈಸೇ ಇಲ್ಲ ಮಾರಾಯರೆ. ಅಂತಹ ಗುಣಮಟ್ಟ ! ಹಾಗಾಗಿ ನನಗೊಂದು ಸಂಶಯ, ಚೀನಾದ ಪ್ರಾಡಕ್ಟ್ ಎಂದು ಇಲ್ಲೇ ತಯಾರಿಸಿ, “ಮೇಡ್‌ ಇನ್‌ ಚೀನಾ’ ಎಂಬ ಲೇಬಲ್‌ ಹಾಕುತ್ತಾರೋ ಅಂತ! ತಂತ್ರಜ್ಞಾನದ ಪರಾಕಾಷ್ಠೆ ಎಂದರೆ ಅವರ ಬುಲೆಟ್‌ ರೈಲು. ಗಂಟೆಗೆ ಸರಾಸರಿ ನಾಲೂ°ರು ಐನೂರು ಕಿ. ಮೀ. ವೇಗದಲ್ಲಿ ಅದು ಚಲಿಸುತ್ತಿದ್ದರೆ, ಒಳಗಡೆ ಕುಳಿತ ನಮಗೆ ವಿಮಾನದಲ್ಲಿ ಕುಳಿತ ಅನುಭವ.

ಸೈಕಲ್‌ ಓಡಿಸುವುದು ಪ್ರತಿಷ್ಠೆ 
ಅಲ್ಲಿಯ ಜನರ ಪರಿಸರ ಪ್ರೇಮ ಅನನ್ಯವಾದದ್ದು. ರಸ್ತೆ ಬದಿಯಲ್ಲಿ, ಡಿವೈಡರ್‌ ನಡುವಲ್ಲಿ ಎಲ್ಲಿ ನೋಡಿದರಲ್ಲಿ ಗುಲಾಬಿ ಗಿಡಗಳು ಮತ್ತು ರಂಗು ರಂಗಿನ ಗುಲಾಬಿ ಹೂಗಳು. ಯಾರೂ ಕೀಳುವುದೇ ಇಲ್ಲ ! ಅವರು ನಿಜಕ್ಕೂ ಅದನ್ನು ನಿಸ್ವಾರ್ಥವಾಗಿ ಪ್ರೀತಿಸುತ್ತಾರೆ. ಅಲ್ಲಿ ಸಣ್ಣಪುಟ್ಟ ದೂರಗಳಿಗೆಲ್ಲ ಜನರು ಸೈಕಲ್‌ನ್ನೇ ಬಳಸುತ್ತಾರೆ. ಸೈಕಲ್‌ ನಲ್ಲಿ ಹೋದರೆ ಅದೊಂದು ಹಿರಿಮೆ. ಅದರ ಜತೆಗೆ ಸಣ್ಣ ಇಲೆಕ್ಟ್ರಿಕ್‌ ಬೈಕ್‌ ಕೂಡ ವ್ಯಾಪಕವಾಗಿ ಬಳಕೆಯಲ್ಲಿದೆ. ಅದಕ್ಕೆಲ್ಲಾ ನಂರ್ಬರ್‌ ಪ್ಲೇಟ್‌ ಬೇಡ. ಪರಿಸರ ಹಾನಿಯೂ ಇಲ್ಲ. ಆರೋಗ್ಯಕ್ಕೂ ಒಳ್ಳೆಯದು. ಅದಕ್ಕೆಂದೇ ರಸ್ತೆಯ ಪಕ್ಕದಲ್ಲಿ ಬೇರೆಯೆ ವ್ಯವಸ್ಥಿತ ದಾರಿ ಇದೆ. ಅವರಲ್ಲಿ ನಿಯಮಬದ್ದವಾಗಿ ವಾಹನ ಚಲಾಯಿಸುತ್ತಾರೆ. ನಮ್ಮಲ್ಲಿ ಇರುವಂತೆ ಎಷ್ಟೇ ಟ್ರಾಫಿಕ್‌ ಜಾಮ್‌ ಇದ್ದರೂ ಯಾರೂ ಗಡಿಬಿಡಿ ಮಾಡುವುದಿಲ್ಲ. ಸುಖಾಸುಮ್ಮನೆ ಹಾರ್ನ್ ಬಜಾಯಿಸುವುದಿಲ್ಲ. ಸಹನೆ ಅವರ ಮುಖ್ಯ ಗುಣದಂತೆ ತೋರುತ್ತದೆ. ಆದರೆ ನಮ್ಮ ದೇಶದೊಂದಿಗಿನ ಗಡಿ ವಿವಾದ, ಯುದ್ದ ಇವನ್ನೆಲ್ಲ ಎಣಿಸಿ  ಬೇಸರವೂ ಮೂಡಿತು. ಮಾತುಕತೆಯಲ್ಲಿ ಪರಿಹರಿಸಲಾಗದ ಸಮಸ್ಯೆ ಇದೆಯೆ ಈ ಲೋಕದಲ್ಲಿ? ಎಲ್ಲದಕ್ಕೂ ಯುದ್ಧ ಅನಿವಾರ್ಯವೆ? ರಾಜಕಾರಣಿಗಳಿಗೆ ಬೇಕಾಗಬಹುದು ಆದರೆ ಜನರಿಗಂತೂ ಅದು ಬೇಡ. ಅಂತೂ ಒಂದು ಒಳ್ಳೆಯ ಅನುಭವದೊಂದಿಗೆ ಭಾರತಕ್ಕೆ ಮರಳಿ ಬಂದಾಗ ನಮ್ಮೂರೇ ನಮಗೆ ಮೇಲು ಎಂಬ ಹಿರಿಯರ ನುಡಿಯ ಅರ್ಥ ಹೊಳೆದು ನಿರಾಳ ಉಸಿರಾಡಿದೆವು.

ಶಶಿರಾಜ್‌ ರಾವ್‌ ಕಾವೂರು

Advertisement

Udayavani is now on Telegram. Click here to join our channel and stay updated with the latest news.

Next