ಬೀಜಿಂಗ್: ಕಳೆದ ಎರಡು ತಿಂಗಳಿಂದ ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್‌ಲಾಂ ಪ್ರದೇಶದಲ್ಲಿ ಭಾರತ – ಚೀನ ಸೇನೆ ಮುಖಾಮುಖೀಯಾಗಿ ಉದ್ವಿಗ್ನತೆಗೆ ಕಾರಣವಾಗಿರುವ ನಡುವೆಯೇ ಚೀನ ಕಳೆದ ತಿಂಗಳಾಂತ್ಯದಲ್ಲಿ ಡೋಕ್‌ಲಾಂ ಗೆ ಸಮೀಪದ ಟಿಬೆಟ್ ಪರ್ವತ ಪ್ರಾಂತ್ಯದಲ್ಲಿ ಭಾರೀ ಪ್ರಮಾಣದ ತನ್ನ ಸೇನಾ ಘನ ಪರಿಕರಗಳನ್ನು ತಂದಿರಿಸಿರುವುದಾಗಿ ವರದಿಗಳು ತಿಳಿಸಿವೆ.
ರೈಲು ಮತ್ತು ರಸ್ತೆ ಮಾರ್ಗವಾಗಿ ಈ ಭಾರೀ ಮಿಲಿಟರಿ ಪರಿಕರಗಳನ್ನು ಚೀನ, ಭಾರತದೊಂದಿಗೆ ಯಾವುದೇ ಹೊತ್ತಿನಲ್ಲಿ ಸಂಘರ್ಷಕ್ಕೆ ಸನ್ನದ್ಧನಾಗಿರುವ ಉದ್ದೇಶದಿಂದ ತಂದಿರಿಸಿರುವುದಾಗಿ ಪಿಎಲ್‌ಎ ಮುಖವಾಣಿ ಹೇಳಿಕೊಂಡಿದೆ.
ಚೀನ ತನ್ನ ಘನ ಮಿಲಿಟರಿ ಸೇನಾ ಪರಿಕರಗಳನ್ನು ತಂದು ನಿಲ್ಲಿಸಿರುವುದು ಉತ್ತರ ಟಿಬೆಟ್‌ನಲ್ಲಿರುವ ಕುನ್‌ಲುನ್ ಪರ್ವತದ ದಕ್ಷಿಣ ಭಾಗದಲ್ಲಿ. ಚೀನ ಸೇನೆಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ಈ ಸನ್ನದ್ಧತೆಯನ್ನು ಅಣಿಗೊಳಿಸಿದೆ ಎಂದು ವರದಿ ಹೇಳಿದೆ.
ಚೀನ ತನ್ನ ಘನ ಮಿಲಿಟರಿ ಪರಿಕರಗಳನ್ನು ಭಾರೀ ಪ್ರಮಾಣದಲ್ಲಿ ತಂದಿರಿಸಿರುವ ಈ ಪ್ರದೇಶವು ಪ್ರಕ್ಷುಬ್ಧ ಟಿಬೆಟ್ ಮತ್ತು ಕ್ಸಿಂಜಿಯಾಂಗ್‌ಗೆ ಮುಖ ಮಾಡಿಕೊಂಡಿದೆ.
ಚೀನದ ಸರಕಾರಿ ಒಡೆತನದ ಸುದ್ದಿ ಮಾಧ್ಯಮ ಭಾರತದೊಂದಿಗೆ ಪೂರ್ಣ ಪ್ರಮಾಣದ ಸಂಘರ್ಷಕ್ಕೆ ಚೀನ ಸೇನೆ ಯಾವುದೇ ಹೊತ್ತಿಗೆ ಮುಂದಾಗುವ ಸಾಧ್ಯತೆ ಇದ್ದು ಭಾರತ ಅದಕ್ಕಾಗಿ ಸಿದ್ಧವಾಗಿರುವುದು ಒಳಿತೆಂಬ ಬುದ್ಧಿವಾದವನ್ನು ಹೇಳುತ್ತಿವೆ. ಹಾಗಿದ್ದರೂ ಚೀನ ತನ್ನ ಸಮರ ನೀತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ.
ಕಳೆದ ವಾರವಷ್ಟೇ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿ ಟಿಬೆಟ್ ಪೀಠಭೂಮಿಯಲ್ಲಿ ಸೇನಾ ಕವಾಯತು ನಡೆಸಿ ತನ್ನ ಸಮರ ಸನ್ನದ್ಧತೆ ಮತ್ತು ಕ್ಷಮತೆಯನ್ನು ಪರೀಕ್ಷಿಸಿಕೊಂಡು ಅದರ ಅಧಿಕೃತ ವಿಡಿಯೋವನ್ನು ಬಿಡುಗಡೆಗೊಳಿಸಿತ್ತು.
ಇದೀಗ ಚೀನ ತನ್ನ ಘನ ಮಿಲಿಟರಿ ಸರಕು ಸರಂಜಾಮು ಹಾಗೂ ಶಸ್ತ್ರಾಸ್ತ್ರಗಳನ್ನು ಕಲೆ ಹಾಕಿರುವ ಪ್ರದೇಶವು ಡೋಕ್‌ಲಾಂ ಪ್ರದೇಶಕ್ಕೆ ನಿಕಟದಲ್ಲಿರುವುದೇ ಗಡಿ ಉದ್ವಿಗ್ನತೆ ಹೆಚ್ಚಲು ಕಾರಣವೆಂದು ತಿಳಿಯಲಾಗಿದೆ.