Advertisement

ಪಾಕ್‌ನಲ್ಲಿ ಚೀನ ವಿಮಾನ

10:27 AM Dec 22, 2018 | Team Udayavani |

ನ್ಯೂಯಾರ್ಕ್‌: ಬೆಲ್ಟ್ ಆ್ಯಂಡ್‌ ರೋಡ್‌ ಯೋಜನೆ ಕೇವಲ ರಸ್ತೆ ನಿರ್ಮಾಣದ ಉದ್ದೇಶದ್ದು ಎಂದು ಚೀನ ಹಿಂದಿನಿಂದಲೂ ಹೇಳಿಕೊಂಡು ಬಂದಿತ್ತಾದರೂ, ಇದೀಗ ಈ ಯೋಜನೆ ಕೇವಲ ರಸ್ತೆ ನಿರ್ಮಾಣವಲ್ಲ. ಇದು ಸೇನೆ ಹಾಗೂ ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದ ಯೋಜನೆಯೂ ಹೌದು ಎಂದು ತಿಳಿದು ಬಂದಿದೆ.

Advertisement

ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಈ ಸಂಬಂಧ ಸಮಗ್ರ ವರದಿ ಪ್ರಕಟಿಸಿದೆ. ಈ ಯೋಜನೆ ಅಡಿ ಪಾಕಿಸ್ಥಾನದಲ್ಲಿ ಯುದ್ಧ ವಿಮಾನಗಳನ್ನು ಉತ್ಪಾದಿಸುವ ಗುಪ್ತ ಯೋಜನೆಯನ್ನು ಚೀನ ಹೊಸೆದಿದೆ. ಈಗಾಗಲೇ ಅತ್ಯಂತ ಪ್ರಮುಖವಾದ ಗ್ವಾದಾರ್‌ ಬಂದರನ್ನು ಪಾಕ್‌ನಲ್ಲಿ ಚೀನ ನಿರ್ಮಿಸುತ್ತಿದೆ. ಇನ್ನೊಂದೆಡೆ ಯುದ್ಧವಿಮಾನ ತಯಾರಿಕೆಗೆ ವಿಶೇಷ ಆರ್ಥಿಕ ವಲಯ ನಿರ್ಮಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಪಾಕ್‌ ವಾಯುಪಡೆ ಮತ್ತು ಚೀನ ಅಧಿಕಾರಿಗಳು ಈ ಯೋಜನೆ ರೂಪಿಸಿದ್ದಾರೆ. ಯುದ್ಧವಿಮಾನವಷ್ಟೇ ಅಲ್ಲ, ರಾಡಾರ್‌ ಸಿಸ್ಟಂ ಮತ್ತು ಇತರ ಶಸ್ತ್ರಾಸ್ತ್ರಗಳನ್ನೂ ಪಾಕ್‌ನಲ್ಲಿ  ಚೀನ ತಯಾರಿಸಲಿದೆ.

ಇಲ್ಲಿ ತಯಾರಿಸಿದ ಯುದ್ಧ ವಿಮಾನಗಳನ್ನು ಪಾಕಿಸ್ಥಾನ ಹಾಗೂ ಪಾಕಿಸ್ಥಾನದ ಇತರ ಸ್ನೇಹಿ ಮುಸ್ಲಿಂ ರಾಷ್ಟ್ರಗಳಿಗೆ ಮಾರುವ ಯೋಜನೆ ಯನ್ನು ಚೀನ ರೂಪಿಸಿದೆ ಎನ್ನಲಾಗಿದೆ. ಸದ್ಯ ಚೀನ ಜೆ 20 ಮತ್ತು ಜೆ 31 ಎಂಬ ಯುದ್ಧ ವಿಮಾನ ಅಭಿವೃದ್ಧಿಪಡಿಸಿದೆ. ಈಗಾಗಲೇ ಪಂಜಾಬ್‌ ಪ್ರಾಂತ್ಯದಲ್ಲಿ ಜೆಎಫ್ 17 ಯುದ್ಧ ವಿಮಾನವನ್ನು ಚೀನ ಸಹಕಾರದಲ್ಲಿ ನಿರ್ಮಿಸಲಾಗಿದ್ದು, ಇದಕ್ಕೆ ನೈಜೀರಿಯಾದಿಂದ ಬೇಡಿಕೆ ಕೂಡ ಸೃಷ್ಟಿಯಾಗಿದೆ.

ಪಾಕ್‌ಗೆ ಬೈದು ಜಿಪಿಎಸ್‌: ಚೀನ ಕಳೆದ ಹಲವು ವರ್ಷಗಳಿಂದಲೂ ಅಮೆರಿಕದ ಜಿಪಿ ಎಸ್‌ಗೆ ಪರ್ಯಾಯವಾಗಿ ಬೈದು ನ್ಯಾವಿಗೇಶನ್‌ ಸೌಲಭ್ಯ ಅಭಿವೃದ್ಧಿಪಡಿಸುತ್ತಿದೆ. ಇದಕ್ಕೆ ಪಾಕಿಸ್ಥಾನ ಪ್ರಮುಖ ಪಾಲುದಾರನಾಗಿದೆ. ಈ ಬೈದು ನ್ಯಾವಿಗೇಶನ್‌ ವ್ಯವಸ್ಥೆಯನ್ನು ಪಾಕ್‌ನ ಸೇನೆ ಕೂಡ ಬಳಸುತ್ತಿದೆ. ಅಮೆರಿಕದ ಜಿಪಿಎಸ್‌ನಿಂದ ದೇಶದ ಸೇನಾ ಮಾಹಿತಿ ಕದ್ದಾಲಿಕೆ ಯಾಗಬಹುದು ಎಂಬ ಕಾರಣಕ್ಕೆ ಚೀನದತ್ತ ಪಾಕ್‌ ವಾಲಿದೆ.

Advertisement

Udayavani is now on Telegram. Click here to join our channel and stay updated with the latest news.

Next