ಉಡುಪಿ: ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಚೀನ ಕಣ್ಣಿಟ್ಟಿದ್ದು, ಬಹು ದೂರದೃಷ್ಟಿ ಯೋಜನೆಯಿಂದ 2007ರಿಂದಲೇ ಸೇನೆಯನ್ನು ಅಲ್ಲಿ ನಿಯೋಜಿಸಿದೆ ಎಂದು ಅಂತಾರಾಷ್ಟ್ರೀಯ ವ್ಯವಹಾರ ವಿಶ್ಲೇಷಕ ಪ್ರೇಮ್ ಶೇಖರ್ ಹೇಳಿದರು.
ಸುಹಸಾಂ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಧಾತ್ರಿ ಪ್ರಕಾಶನ ಆಶ್ರಯದಲ್ಲಿ ಶನಿವಾರ ಕಿದಿಯೂರು ಹೊಟೇಲ್ ಅನಂತಶಯನದಲ್ಲಿ ಜರಗಿದ ಲೇಖಕ ಎಸ್.ಉಮೇಶ್ ಅವರ “ಕಾಶ್ಮೀರ್ ಡೈರಿ” ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಯನ್ನು ವಿಶ್ಲೇಷಿಸಿ ಅವರು ಮಾತನಾಡಿದರು.
ಆಫ್ರಿಕಾ ಮತ್ತು ಅರಬ್ ದೇಶಗಳಲ್ಲಿ ವಾಣಿಜ್ಯ, ಇಂಧನ, ಖನಿಜ ವ್ಯವಹಾರ ಸುಲಭವಾಗಿಸಿಕೊಳ್ಳಲು ಚೀನವು ಪಾಕಿಸ್ತಾನಕ್ಕೆ ಸಹಕಾರ, ನೆರವು ನೀಡುವ ನೆಪದಲ್ಲಿ ಪಿಒಕೆ ವಶಕ್ಕೆ ದೂರದೃಷ್ಟಿಯನ್ನು ಹೊಂದಿದೆ. ಪಶ್ಚಿಮ ಚೀನವನ್ನು ಅಭಿವೃದ್ಧಿ ಮಾಡುವುದು ಇದರ ಮೂಲ ಉದ್ದೇಶವಾಗಿದೆ. ಪಾಕಿಸ್ತಾನಕ್ಕಿಂತಲೂ ಭಾರತಕ್ಕೆ ಪಿಒಕೆ ವಾಪಸ್ ಪಡೆಯಲು ಚೀನ ಅಡ್ಡಿಯಾಗಿದೆ ಎಂದರು.
ಭಾರತ ಒಂದು ವೇಳೆ ಕ್ರಮಕ್ಕೆ ಮುಂದಾದರೆ ಮೊದಲು ಪಾಕಿಸ್ತಾನ ಅಲ್ಲ ಚೀನವನ್ನು ಎದುರಿಸಬೇಕಿದೆ. ಇದನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡ ಭಾರತ ಸರಕಾರವು ಕಳೆದ ಮೂರು ವರ್ಷಗಳಿಂದ ಸತತ ಪ್ರಯತ್ನಗಳನ್ನು ಮಾಡುತ್ತಿದ್ದು,ಜಾಗರೂಕವಾಗಿ ಹೆಜ್ಜೆಗಳನ್ನು ಇಡುತ್ತಿದೆ. ಆರ್ಟಿಕಲ್ 35A, ಆರ್ಟಿಕಲ್ 370 ತೆಗೆದು ಹಾಕಿದೆ. ಈ ಹಿಂದೆ ಕಾಶ್ಮೀರವನ್ನು ಭಾರತದ ಜತೆಗೆ ಮಾನಸಿಕವಾಗಿ ಬೆಸೆಯಲು ಬಿಟ್ಟಿರಲಿಲ್ಲ.. ಈಗ ಇದು ಬದಲಾಗುತ್ತಿದೆ ಎಂದರು.
ಕಾಶ್ಮೀರವು ಹಿಂದೂ ಸಂಸ್ಕೃತಿಯ ಮೂಲ, ಭಾರತ ಸಾಹಿತ್ಯ ದ ಉಗಮ ಸ್ಥಾನ. ಲೇಖಕ ಉಮೇಶ್ ಅವರು ಕಾಶ್ಮೀರ್ ಡೈರಿ ಪುಸ್ತಕದ ಮೂಲಕ ಕಾಶ್ಮೀರದ ಭೌಗೋಳಿಕ, ಇತಿಹಾಸ, ಆಧುನಿಕ ಕಾಲಟಘಟ್ಟದ ವಿದ್ಯಮಾನಗಳನ್ನು ಸಮಸ್ಯೆಗಳನ್ನು ಆಳವಾಗಿ, ಕೂಲಂಕಷವಾಗಿ ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ತಾಲೂಕು ಕ.ಸಾ.ಪ ಅಧ್ಯಕ್ಷ ರವಿರಾಜ್ ಎಚ್.ಪಿ, ಸುಹಾಸಂ ಪ್ರ. ಕಾರ್ಯದರ್ಶಿ ಕೂ.ಗೊ.(ಗೋಪಾಲ ಭಟ್ಟ) ಅತಿಥಿಗಳಾಗಿದ್ದರು.